ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ 'ಮಿನ್ನಲ್ ಮುರಳಿ' ಮತ್ತು '2018-ಎವೆರಿವನ್ ಈಸ್ ಎ ಹೀರೋ' ಎಂಬ ಚಿತ್ರಗಳ ಮೂಲಕ ಸ್ಟಾರ್ ಡಮ್ ಹೊಂದಿರುವ ನಟ ಟೋವಿನೋ ಥಾಮಸ್. ಸದಾ ವಿಭಿನ್ನ ಕಥೆ ಆಯ್ಕೆ ಮಾಡಿಕೊಳ್ಳುವ ಟೊವಿನೋ ಥಾಮಸ್ ಈಗ ಹೊಸ ಸಾಹಸಮಯ ಚಿತ್ರ "ARM" ಅಂದರೆ 'ಅಜಯಂತೇ ರಂದಮ್ ಮೋಷನಂ' ಎಂಬ ಫ್ಯಾಂಟಸಿ ಪ್ಯಾನ್ ಇಂಡಿಯಾ ಚಿತ್ರದೊಂದಿಗೆ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ಜಿತಿನ್ ಲಾಲ್ ನಿರ್ದೇಶನದ ಮೊದಲ ಸಿನಿಮಾ ARM. ಈ ಸಿನಿಮಾ ಸಂಪೂರ್ಣವಾಗಿ 3Dಯಲ್ಲಿ ತಯಾರಾಗುತ್ತಿದೆ ಮತ್ತು ಮಲಯಾಳಂ ಇತಿಹಾಸದಲ್ಲಿ ಅತ್ಯಂತ ತಾಂತ್ರಿಕವಾಗಿ ಶ್ರೀಮಂತ ಚಿತ್ರಗಳಲ್ಲಿ ಒಂದಾಗಿದೆ. ಈ ಹಿನ್ನೆಲೆಯಲ್ಲಿ ಈ ಚಿತ್ರದ ಪ್ರಚಾರಕ್ಕಾಗಿ ನಟ ಟೊವಿನೋ ಥಾಮಸ್, ನಿರ್ದೇಶಕ ಜಿತಿನ್ ಲಾಲ್, ನಟಿ ಕೃತಿ ಶೆಟ್ಟಿ ಹಾಗು ಕಬೀರ್ ದುಹಾನ್ ಸಿಂಗ್, ಹರೀಶ್ ಉತ್ತಮನ್ ಬೆಂಗಳೂರಿಗೆ ಬಂದಿದ್ದರು. ಖಾಸಗಿ ಹೋಟೆಲ್ ನಡೆಯ ಎಆರ್ಎಮ್ ಚಿತ್ರದ ಮಾಧ್ಯಮಗೋಷ್ಟಿಯಲ್ಲಿ ಚಿತ್ರತಂಡ ಈ ಚಿತ್ರದ ಬಗ್ಗೆ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಈ ಚಿತ್ರದ ನಾಯಕ ನಟ ಟೊವಿನೋ ಥಾಮಸ್ ಮಾತನಾಡಿ, "ಈ ಸಿನಿಮಾದ ಪಾತ್ರಗಳನ್ನು ಮಾಡುವುದು ಒಂದು ಚಾಲೆಂಜಿಂಗ್ ಆಗಿತ್ತು. ಈ ಚಿತ್ರದಲ್ಲಿ ಮಣಿಯನ್, ಕುಂಜಿಕ್ಕೆಲು ಮತ್ತು ಅಜಯನ್ ಎಂಬ ಮೂರು ವಿಭಿನ್ನ ಶೇಡ್ ಇರುವ ಪಾತ್ರವನ್ನು ಮಾಡಿದ್ದೇನೆ. ನಾನೊಬ್ಬ ನಟನಾಗಿದ್ದರೂ ಒಂದು ಪಾತ್ರಕ್ಕೆ ಸಾಕಷ್ಟು ಸಿದ್ಧತೆಗಳನ್ನು ಮಾಡಿ ಅಭಿನಯಿಸಿದ್ದೇನೆ. ಇನ್ನು ಕಳರಿಪಯಟ್ಟು ವಿದ್ಯೆ ಕಲಿತು ನಟಿಸಿದ್ದೇನೆ. ಈ ಮೂರು ಶೇಡ್ ಪಾತ್ರಗಳು ವಿಭಿನ್ನವಾಗಿವೆ".
"ಕನ್ನಡಚಿತ್ರರಂಗ ನಮ್ಮ ಚಿತ್ರರಂಗಕ್ಕೆ ಒಂದು ನಂಟು ಇದೆ. ಕಾಸರಗೋಡು ಹತ್ತಿರ ನಮ್ಮ ಕೇರಳ ಇದೆ. ಜೊತೆಗೆ ಕನ್ನಡ ಸಿನಿಮಾಗಳು ನಮ್ಮ ಮಲಯಾಳಂ ಭಾಷೆಯಲ್ಲಿ ಡಬ್ ಆಗಿ ಬಿಡುಗಡೆ ಆಗುತ್ತಿವೆ. ನನಗೆ ಕನ್ನಡದ ಸೂಕ್ತವಾದ ಕಥೆ ಬಂದರೆ ನಾನು ಕನ್ನಡ ಸಿನಿಮಾದಲ್ಲಿ ಅಭಿನಯಿಸುತ್ತೇನೆ" ಎಂದು ಟೊವಿನೋ ಥಾಮಸ್ ಹೇಳಿದರು.
ಬಳಿಕ ನಟಿ ಕೃತಿ ಶೆಟ್ಟಿ ಮಾತನಾಡಿ, "ನಾನು ಮಂಗಳೂರಿನವಳು. ನಾನು ಈ ಸಿನಿಮಾದ ಭಾಗವಾಗಿರುವುದಕ್ಕೆ ಖುಷಿ ಆಗುತ್ತಿದೆ. ಮುಂದಿನ ದಿನಗಳಲ್ಲಿ ತನ್ನ ಪಾತ್ರಕ್ಕೆ ಕನ್ನಡದಲ್ಲಿ ನಾನೇ ಡಬ್ಬಿಂಗ್ ಮಾಡಲು ಪ್ರಯತ್ನಿಸುತ್ತೇನೆ" ಎಂದರು.
ARM ಟೊವಿನೋ ಥಾಮಸ್ ಅವರ 50ನೇ ಚಿತ್ರವಾಗಿದ್ದು, ಟ್ರೈಲರ್ನಿಂದ ಕುತೂಹಲ ಹುಟ್ಟಿಸಿದೆ. ಸಿನಿಮಾಗೆ ಜೋಮನ್ ಟಿ. ಜಾನ್ ಮತ್ತು ಕಾಂತಾರ ಖ್ಯಾತಿಯ ವಿಕ್ರಮ್ ಮೂರ್ ಮತ್ತು ಫೀನಿಕ್ಸ್ ಪ್ರಭು ಆಕ್ಷನ್ ಸನ್ನಿವೇಶಗಳನ್ನು ಕಂಪೋಸ್ ಮಾಡಿದ್ದಾರೆ. ಟೊವಿನೋ ಥಾಮಸ್, ಕೃತಿ ಶೆಟ್ಟಿ ಅಲ್ಲದೇ ಐಶ್ವರ್ಯ ರಾಜೇಶ್ ಮತ್ತು ಸುರಭಿ ಲಕ್ಷ್ಮಿ, ಬಾಸಿಲ್ ಜೋಸೆಫ್, ಜಗದೀಶ್, ಹರೀಶ್ ಉತ್ತಮನ್, ಹರೀಶ್ ಪೆರಾಡಿ, ಪ್ರಮೋದ್ ಶೆಟ್ಟಿ, ಕಬೀರ್ ಸಿಂಗ್ ಮತ್ತು ರೋಹಿಣಿ ಮುಂತಾದವರು ಅಭಿನಯಿಸಿದ್ದಾರೆ.
ಸುಜಿತ್ ನಂಬಿಯಾರ್ ಚಿತ್ರಕಥೆಯನ್ನು ಬರೆದಿದ್ದಾರೆ. ದಿಬು ನೈನನ್ ಥಾಮಸ್ ಸಂಗೀತ ನೀಡಿದ್ದಾರೆ. ಅತ್ಯುತ್ತಮ ಹಿನ್ನೆಲೆ ಸ್ಕೋರ್, ಉನ್ನತ-ಶ್ರೇಣಿಯ VFX ಮತ್ತು ಅತ್ಯದ್ಭುತ ದೃಶ್ಯಗಳನ್ನು ಒಳಗೊಂಡ "ARM" ಭಾರತೀಯ ಸಿನಿಮಾದ ಅತ್ಯಂತ ಮಹತ್ವಾಕಾಂಕ್ಷೆಯ ಚಿತ್ರಗಳಲ್ಲಿ ಒಂದಾಗಿದೆ. ಜಿತಿನ್ ಲಾಲ್ ಚೊಚ್ಚಲ ನಿರ್ದೇಶನ ಮಾಡುತ್ತಿರುವ ಹಾಗು ಇದು ಮ್ಯಾಜಿಕ್ ಫ್ರೇಮ್ಸ್ ಮತ್ತು UGM ಮೋಷನ್ ಪಿಕ್ಚರ್ಸ್ ಬ್ಯಾನರ್‌ಗಳ ಅಡಿಯಲ್ಲಿ ಲಿಸ್ಟಿನ್ ಸ್ಟೀಫನ್ ಮತ್ತು ಡಾ. ಜಕಾರಿಯಾ ಥಾಮಸ್ ಅವರು ನಿರ್ಮಿಸಿದ್ದಾರೆ.
ಕರ್ನಾಟಕದಲ್ಲಿ ಹೊಂಬಾಳೆ ಫಿಲ್ಮ್ ಫೇರ್ ಈ ಚಿತ್ರದ ವಿತರಣೆಯ ಹೊಣೆ ಹೊತ್ತಿದೆ. ಸೆಪ್ಟೆಂಬರ್ 12ರಂದು ಬಹುಭಾಷೆಗಳಲ್ಲಿ ಬಿಡುಗಡೆ ಆಗಲಿದೆ.