ಜೈಪುರ: ಪ್ರಸಿದ್ಧ ಧ್ರುಪದ್ ಗಾಯಕ ಪಂಡಿತ್ ಲಕ್ಷ್ಮಣ್ ಭಟ್ ತೈಲಾಂಗ್ (Pandit Laxman Bhatt Tailang) ಇನ್ನಿಲ್ಲ. ಧ್ರುಪದ್ ಗಾಯನದಲ್ಲಿ ಪರಿಣತರಾಗಿದ್ದ ತೈಲಾಂಗ್ ಅವರಿಗೆ 93 ವರ್ಷ ವಯಸ್ಸಾಗಿತ್ತು. ರಾಜಸ್ಥಾನದ ಜೈಪುರದ ದುರ್ಲಭ್ಜಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಪದ್ಮಶ್ರೀ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದ ತೈಲಾಂಗ್: ಇತ್ತೀಚೆಗಷ್ಟೇ, ಗಣರಾಜ್ಯೋತ್ಸವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತೈಲಾಂಗ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಿತ್ತು. ಆದರೆ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸುವ ಮುನ್ನವೇ ನಿಧನರಾಗಿದ್ದಾರೆ. ಕೆಲ ಸಮಯದಿಂದ ಇವರು ನ್ಯುಮೋನಿಯಾ ಮತ್ತು ಇತರೆ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು.
ಪುತ್ರಿ, ಪ್ರೊಫೆಸರ್ ಮಧು ಭಟ್ ತೈಲಾಂಗ್ ಪ್ರಕಾರ, ಪಂಡಿತ್ ತೈಲಾಂಗ್ ಅವರ ಆರೋಗ್ಯ ದಿನೇ ದಿನೇ ಕ್ಷೀಣಿಸುತ್ತಿತ್ತು. ಜೈಪುರದ ದುರ್ಲಭ್ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ಬೆಳಿಗ್ಗೆ 9ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.
ಪಂಡಿತ್ ಲಕ್ಷ್ಮಣ್ ಭಟ್ ತೈಲಾಂಗ್ ತಮ್ಮ ಜೀವನವನ್ನು ಧ್ರುಪದ್ ಗಾಯನಕ್ಕೆ ಸಮರ್ಪಿಸಿದ್ದರು. ರವಿಶಂಕರ್, ಶೋಭಾ, ಉಷಾ, ನಿಶಾ, ಮಧು, ಪೂನಂ ಮತ್ತು ಆರತಿ ಸೇರಿದಂತೆ ತಮ್ಮ ಮಕ್ಕಳಿಗೂ ಸಂಗೀತ ಶಿಕ್ಷಣ ನೀಡಿದ್ದರು. ವಿವಿಧ ಸಂಗೀತ ಪ್ರಕಾರಗಳಲ್ಲಿ ಮಕ್ಕಳ ಪ್ರತಿಭೆ ಪೋಷಿಸುವ ಕೆಲಸ ಮಾಡಿದ್ದರು.
ಇದನ್ನೂ ಓದಿ: ಹಿರಿಯ ನಟ ಮಿಥುನ್ ಚಕ್ರವರ್ತಿಗೆ ಬ್ರೈನ್ ಸ್ಟ್ರೋಕ್: ಹೇಗಿದೆ ಆರೋಗ್ಯ? ಹೆಲ್ತ್ ಅಪ್‌ಡೇಟ್ಸ್
ತೈಲಾಂಗ್ ಅವರು ಬನಸ್ಥಲಿ ವಿದ್ಯಾಪೀಠ ಮತ್ತು ರಾಜಸ್ಥಾನ ಸಂಗೀತ ಸಂಸ್ಥೆಗಳಲ್ಲಿ ಸಂಗೀತ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. 1985ರಲ್ಲಿ ಜೈಪುರದಲ್ಲಿ 'ರಸ್ಮಂಜರಿ ಸಂಗೀತೋಪಸ್ನ ಕೇಂದ್ರ' ಮತ್ತು 2001ರಲ್ಲಿ ಜೈಪುರದಲ್ಲಿ 'ಇಂಟರ್ನ್ಯಾಷನಲ್ ಧ್ರ ಪದ್-ಧಾಮ್ ಟ್ರಸ್ಟ್' ಸ್ಥಾಪಿಸಿದ್ದರು.
ಇದನ್ನೂ ಓದಿ: ಅಪಾಯಕಾರಿ ಸ್ಟಂಟ್: ಬಾಲಿವುಡ್ ನಟ ವಿದ್ಯುತ್ ಜಮ್ವಾಲ್ ರೈಲ್ವೆ ಪೊಲೀಸ್ ವಶಕ್ಕೆ