ಹೈದರಾಬಾದ್: ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್ (SIIMA-ಸೈಮಾ) ಸಮಾರಂಭ ಕಳೆದ ಶನಿವಾರ ಮತ್ತು ಭಾನುವಾರ ದುಬೈನಲ್ಲಿ ಅದ್ಧೂರಿಯಾಗಿ ಜರುಗಿತು. ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಎ, ಕಾಟೇರ ಸೇರಿದಂತೆ ಹಲವು ಚಿತ್ರಗಳು ಮತ್ತು ಕಲಾವಿದರು ಪ್ರತಿಷ್ಠಿತ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಈವೆಂಟ್ನ ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಬಹುಭಾಷೆಗಳನ್ನು ಮಾತನಾಡುವ ಕನ್ನಡ ಚಿತ್ರರಂಗದ ಖ್ಯಾತ ನಟ ಸುದೀಪ್ ಓರ್ವ ಅಪ್ಪಟ ಕನ್ನಡಿಗ. ತಮ್ಮ ಕನ್ನಡಾಭಿಮಾನವನ್ನು ಆಗಾಗ್ಗೆ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಹೆಸರಾಂತ ನಟನ ಕನ್ನಡ ಪ್ರೇಮಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತದೆ.
ಕನ್ನಡ್ ಅಲ್ಲ 🚫 ಕನ್ನಡ ✅
— Kiccha Sudeep Trends™ (@TheSudeepTrends) September 15, 2024
Pride of Karnataka 💛❤️
@KicchaSudeep #KicchaSudeep #MaxTheMovie pic.twitter.com/qWMzL3jzhe
ಇದೇ ಸೆಪ್ಟೆಂಬರ್ 14 ಮತ್ತು 15ರಂದು ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ಅದ್ಧೂರಿಯಾಗಿ ನಡೆದಿದೆ. ಸ್ಯಾಂಡಲ್ವುಡ್ ತಾರೆಗಳು ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ಸುದೀಪ್ ಕೂಡಾ ಕಾಣಿಸಿಕೊಂಡಿದ್ದರು. ವೇದಿಕೆಯಲ್ಲಿ ಚಿತ್ರರಂಗದ ಗಣ್ಯರು 'ಕನ್ನಡ್' ಎಂಬ ಪದ ಬಳಕೆ ಮಾಡಿದ್ದಾರೆ. ಸ್ಟೇಜ್ನಲ್ಲಿದ್ದ ಸುದೀಪ್ ಅವರು ಅದೇ ಕ್ಷಣ ಆ ಪದವನ್ನು ಸರಿಪಡಿಸಿದ್ದಾರೆ. ಕನ್ನಡ್ ಅಲ್ಲ ಕನ್ನಡ ಎಂದು ತಿದ್ದಿದ್ದಾರೆ. ''ನಾನು ಮುಂಬೈನವರು ಮಾತ್ರ ಕನ್ನಡ್ ಅನ್ನು ಕನ್ನಡ ಎಂದು ಹೇಳ್ತಾರೆ ಅಂದುಕೊಂಡಿದ್ದೆ. ಆದ್ರೆ ಹೈದರಾಬಾದ್ನವರಾದ ನೀವೂ ಕೂಡಾ ಕನ್ನಡ್ ಅಂತೀರಲ್ವಾ ಎಂದು ಪ್ರಶ್ನಿಸಿದ್ದಾರೆ. ಈ ವಿಡಿಯೋ ಸಕತ್ ವೈರಲ್ ಆಗುತ್ತಿದ್ದು, ಕಿಚ್ಚನ ಕನ್ನಡಾಭಿಮಾನಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಅದ್ಭುತ ಸಿನಿಮಾಗಳು, ಅಮೋಘ ಅಭಿನಯದ ಮೂಲಕ ಭಾರತೀಯರನ್ನು ಮನರಂಜಿಸುತ್ತಾ ಬಂದಿರುವ ಸುದೀಪ್ ನಿರೂಪಣೆಯಲ್ಲೂ ಎತ್ತಿದ ಕೈ. ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ನಡೆಸಿಕೊಡುವ ಮೂಲಕ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಇವರ ನಿರೂಪಣಾ ಶೈಲಿ ಅನೇಕ ಅಭಿಮಾನಿಗಳನ್ನು ಸಂಪಾದಿಸಿದೆ. ಸುದೀಪ್ ಕಾಣಿಸಿಕೊಳ್ಳುವ ಶನಿವಾರ ಮತ್ತು ಭಾನುವಾರದ ಕಾರ್ಯಕ್ರಮ ವೀಕ್ಷಿಸಲೆಂದೇ ಅದೆಷ್ಟೋ ಜನರು ಕಾತರರಾಗಿರುತ್ತಾರೆ. ಆದ್ರೆ ಮುಂದಿನ ಸೀಸನ್ಗೆ ಬೇರೆ ಆ್ಯಂಕರ್ಗಳು ಬರಲಿದ್ದಾರೆ ಎಂಬ ವದಂತಿ ಹರಡಿತ್ತು. ಆದ್ರೆ ಮುಂದಿನ ಸೀಸನ್ಗೂ ಸುದೀಪ್ ಅವರೇ ಆ್ಯಂಕರ್ ಆಗಿರಲಿದ್ದಾರೆ.
ಇದನ್ನೂ ಓದಿ: ವಜ್ರಮುನಿ ಗೆಟಪ್ನಲ್ಲಿ ನಟ ಕೋಮಲ್: 'ಯಲಾಕುನ್ನಿ' ಟೀಸರ್ಗೆ ಮೆಚ್ಚುಗೆ - Yela Kunni Teaser
ಕಲರ್ಸ್ ಕನ್ನಡ ವಾಹಿನಿ ಇತ್ತೀಚೆಗಷ್ಟೇ ಆ್ಯಂಕರ್ ಇಂಟ್ರೊಡಕ್ಷನ್ ಗ್ಲಿಂಪ್ಸ್ ಅನಾವರಣಗೊಳಿಸಿತ್ತು. ಈ ಪೋಸ್ಟ್ಗೆ, ''ಬದಲಾವಣೆ ಜಗದ ನಿಯಮ, ಅದಕ್ಕೆ ಬಿಗ್ ಬಾಸ್ ಕೂಡಾ ಹೇಳೋದು 'ಹೌದು ಸ್ವಾಮಿ'. ಆದ್ರೆ ಇವರ ವಿಚಾರದಲ್ಲಿ ಬದಲಾವಣೆ 'ನೋ ವೇ, ಛಾನ್ಸೇ ಇಲ್ಲ'! ಬಿಗ್ ಬಾಸ್ ಕನ್ನಡ ಸೀಸನ್ 11. ಸೆಪ್ಟೆಂಬರ್ 29ರಿಂದ ಎಂದು ಬರೆದುಕೊಂಡಿದೆ. ವಿಡಿಯೋದಲ್ಲಿ ಸುದೀಪ್ ಎಂಟ್ರಿ ಬಹಳ ರೋಚಕವಾಗಿ ಮೂಡಿ ಬಂದಿದೆ.