ಬೆಂಗಳೂರು: ದೈವಾರಾಧನೆ ಕಥೆಯನ್ನೊಳಗೊಂಡು ಬಂದ 'ಕಾಂತಾರ' ಕನ್ನಡ ಚಿತ್ರರಂಗದ ಕೀರ್ತಿ ಹೆಚ್ಚಿಸಿದೆ. ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸನ್ನು ಕಂಡಿರುವ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲೂ ಕಮಾಲ್ ಮಾಡಿದೆ. ಅದರಂತೆ ದೈವ ಕುರಿತು ಕನ್ನಡದಲ್ಲಿ ಮತ್ತೊಂದು ಚಿತ್ರ ಬರುತ್ತಿರುವುದು ನಿಮಗೆ ತಿಳಿದಿರುವ ವಿಚಾರವೇ.
''ಕೊರಗಜ್ಜ'' ಶೀರ್ಷಿಕೆಯ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳಿವೆಯಾದರೂ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಈ ಹಿನ್ನೆಲೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲೇಖಕ ಮತ್ತು ಈ ಚಿತ್ರದ ನಿರ್ದೇಶಕ ಸುಧೀರ್ ಅತ್ತಾವರ್ ಮಾತನಾಡಿ, ''ತಮ್ಮ ಸಿನಿಮಾವನ್ನು ವಿರೋಧಿಸಲು ಯಾವುದೇ ಸೂಕ್ತ ಕಾರಣವಿಲ್ಲ, ನಾನೂ ಕೂಡಾ ಕೊರಗಜ್ಜನ ಭಕ್ತ'' ಎಂದು ಹೇಳಿಕೊಂಡಿದ್ದಾರೆ.
ಅದ್ಬುತ ಕಥೆಯನ್ನು ಜಗತ್ತಿಗೆ ಹೇಳಲು ಬಯಸುತ್ತೇನೆ: "ತುಳುನಾಡಿನ ದೈವಾರಾಧನೆ ಸಂಪ್ರದಾಯದ ಪ್ರಮುಖ ದೈವಗಳಲ್ಲಿ ಒಂದಾದ ಕೊರಗಜ್ಜನ ಅದ್ಭುತ ಕಥೆಯನ್ನು ನಾನು ಈ ಜಗತ್ತಿಗೆ ಹೇಳಲು ಬಯಸುತ್ತೇನೆ" ಎಂದು ಅತ್ತಾವರ್ ಸುದ್ದಿ ಸಂಸ್ಥೆಗೆ ತಿಳಿಸಿದರು.
ಸರಿಸುಮಾರು 4,000 ದೈವಗಳನ್ನು ಪೂಜಿಸುವ ರಾಜ್ಯದ ಒಂದು ಪ್ರದೇಶದ ಜನರು, ವಿಶೇಷವಾಗಿ ತುಳುನಾಡಿನವರು (ಕೆಲವರು) ತಮ್ಮ ಧಾರ್ಮಿಕ ನಂಬಿಕೆಗಳನ್ನು ಅಪಹಾಸ್ಯ ಮಾಡುತ್ತಾರೆ ಎಂದು ಆರೋಪಿಸಿ ಈ ಚಿತ್ರವನ್ನು ನಿಷೇಧಿಸುವಂತೆ ಕರೆ ನೀಡಿದ್ದಾರೆ.
ನಿರ್ದೇಶಕರ ಸ್ಪಷ್ಟನೆ ಹೀಗಿದೆ; ''ಸಿನಿಮಾ ಶೂಟಿಂಗ್ ವೇಳೆಯೂ ಕೆಲವರು ತಮ್ಮ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದೆವು. ಅಂದು ಶೂಟಿಂಗ್ ನಿಲ್ಲಿಸಬೇಕಾಯಿತು. ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದೇನೆ. ಏಕೆ ನಮ್ಮ ಮೇಲೆ ಆ ರೀತಿ ಹಲ್ಲೆಯಾಯಿತು ಎಂಬದು ನಮಗೆ ನಿಜವಾಗಿಯೂ ಗೊತ್ತಿಲ್ಲ. ನಾನು ದೈವಾರಾಧನೆ ಅಥವಾ ದೇವರನ್ನು ಅಪಹಾಸ್ಯ ಮಾಡುವ ಉದ್ದೇಶ ಹೊಂದಿಲ್ಲ. ನಾನು ದೈವಭಕ್ತ, ಚಿತ್ರೀಕರಣ ಪ್ರಾರಂಭವಾಗುವ ಮೊದಲು ಭೂತ ಕೋಲದಲ್ಲಿ ಭಾಗಿಯಾಗಿ ಕೊರಗಜ್ಜನಿಂದ ಅನುಮತಿ ಪಡೆದುಕೊಂಡಿದ್ದೇನೆ" - ನಿರ್ದೇಶಕ ಸುಧೀರ್ ಅತ್ತಾವರ್.
ಪಂಜುರ್ಲಿ ದೈವ ಮತ್ತು ಗುಳಿಗ ದೈವದ ಕುರಿತ 'ಕಾಂತಾರ' ಚಿತ್ರಕ್ಕೂ ಮುನ್ನವೇ 'ಕೊರಗಜ್ಜ' ಸಿನಿಮಾ ಆರಂಭಿಸಿರುವುದಾಗಿಯೂ ಅತ್ತಾವರ್ ತಿಳಿಸಿದರು. ಚಿತ್ರ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಸುಮಾರು 18 ತಿಂಗಳ ರಿಸರ್ಚ್ ಫಲವಾಗಿ ಈ ಚಿತ್ರ ಮೂಡಿ ಬಂದಿದೆ ಎಂದು ಅತ್ತಾವರ್ ಹೇಳಿದ್ದಾರೆ.
"ಕೊರಗಜ್ಜನ ಸುತ್ತ ಸಾಕಷ್ಟು ಕಥೆಗಳಿವೆ. ಹಾಗಾಗಿ ನಾನು ಕೆಲ ಸಾಹಿತ್ಯಗಳನ್ನು ಅಧ್ಯಯನ ಮಾಡಿದ್ದೇನೆ. ಬುಡಕಟ್ಟು ಜನರು ಸೇರಿದಂತೆ ಅನೇಕ ತಜ್ಞರನ್ನು ಸಂದರ್ಶಿಸಿದ್ದೇನೆ. ವಿಶೇಷವಾಗಿ, ಅವರು ಬೆಂಗಳೂರಿನ ಬಳಿ ವಾಸಿಸುತ್ತಿರುವ ಜನರನ್ನು. ಅವರು ತಮ್ಮನ್ನು ಕೊರಗಜ್ಜನ ಕುಟುಂಬದ ಭಾಗವೆಂದು ಹೇಳಿಕೊಳ್ಳುತ್ತಾರೆ. ಈ ಕಥೆಯು ಮನಮುಟ್ಟುವ ಚಿತ್ರವಾಗಲಿದೆ ಎಂಬುದನ್ನು ನಾನು ಅರಿತುಕೊಂಡೆ" ಎಂದು ಅತ್ತಾವರ್ ಹೇಳಿದರು.
ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಅವರಿಗೆ ಈ ಕಥೆಯನ್ನು ವಿವರಿಸಿದಾಗ, ಅವರು ತ್ರಿವಿಕ್ರಮ ಸಿನಿಮಾಸ್ ಬ್ಯಾನರ್ ಅಡಿ ನಿರ್ಮಿಸಲು ಆ ಕೂಡಲೇ ಒಪ್ಪಿಕೊಂಡರು. "ಸಿನಿಮಾ ರೂಪುಗೊಂಡಿರುವ ರೀತಿಗೆ ಸಂತಸ ವ್ಯಕ್ತಪಡಿಸಿರುವ ಸಪಲ್ಯ ಅವರು ನನಗೆ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ" ಎಂದು ಅತ್ತಾವರ್ ತಿಳಿಸಿದರು.
ಇದನ್ನೂ ಓದಿ: 'ಕೊರಗಜ್ಜ' ನಿರ್ದೇಶಕ ಸುಧೀರ್ ಅತ್ತಾವರ್ಗೆ ನಿರ್ಮಾಪಕರಿಂದ 20 ಲಕ್ಷದ ಕಾರ್ ಗಿಫ್ಟ್ - Koragajja
ಸಕ್ಸಸ್ ಫಿಲ್ಮ್ಸ್ನ ವಿದ್ಯಾಧರ್ ಶೆಟ್ಟಿ ಕೂಡಾ ಈ ಸಿನಿಮಾದ ಭಾಗವಾಗಿದ್ದಾರೆ. ಸಿನಿಮಾ ಸುತ್ತಲಿನ ಸಂಶೋಧನೆಗೆ ಸಹಾಯ ಮಾಡಿದರು. ಜೊತೆಗೆ ಅವರು ಚಿತ್ರದ ಸಂಪಾದಕರಲ್ಲಿ ಒಬ್ಬರು ಎಂದು ಅತ್ತಾವರ್ ಹೇಳಿದರು. ಭವ್ಯ, ಶ್ರುತಿ ಮತ್ತು ಸಂದೀಪ್ ಸೋಪರ್ಕರ್ ಅವರಲ್ಲದೇ ಬಾಲಿವುಡ್ ನಟ ಕಬೀರ್ ಬೇಡಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.