ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ನಟಿ ಕಾಜೋಲ್ ಅಭಿನಯದ ವೆಬ್ ಸಿರೀಸ್ 'The Trial' ನಲ್ಲಿ ಸಹ ನಟಿಯಾಗಿ ಪಾತ್ರ ನಿರ್ವಹಿಸಿದ್ದ, ಮಾಜಿ ಗಗನಸಖಿ ನೂರ್ ಮಾಲಾಬಿಕಾ ದಾಸ್ ಅವರು ಶವವಾಗಿ ಪತ್ತೆಯಾಗಿದ್ದು, ಬಾಲಿವುಡ್ ಚಿತ್ರಂಗಕ್ಕೆ ಆಘಾತವನ್ನುಂಟು ಮಾಡಿದೆ. ಅನುಮಾನಾಸ್ಪದವಾಗಿ 31 ವರ್ಷ ವಯಸ್ಸಿನ ನಟಿ ಮಾಲಾಬಿಕಾ ಅವರ ಮೃತದೇಹ ಪತ್ತೆಯಾಗಿದ್ದು, ಸಾವಿನ ಸುತ್ತ ಅನುಮಾನಗಳು ವ್ಯಕ್ತವಾಗಿವೆ.
ಒಶಿವಾರಾ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ನಟಿಯ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆ ಶಂಕೆ ಕೂಡ ವ್ಯಕ್ತವಾಗಿದೆ. ಆದ್ರೆ ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.
2023 ರಲ್ಲಿ 'ದಿ ಟ್ರೈಲ್' ಎಂಬ ವೆಬ್ ಸಿರೀಸ್ನಲ್ಲಿ ನಟಿಸಿದ್ದ ಬಾಲಿವುಡ್ ನಟಿ ನೂರ್ ಮಾಲಾಬಿಕಾ ದಾಸ್ ತಾವು ವಾಸವಾಗಿದ್ದ ಫ್ಲ್ಯಾಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಸೋಮವಾರ ಮಾಹಿತಿ ನೀಡಿದ್ದಾರೆ.
ನಟಿ ವಾಸವಾಗಿದ್ದ ಅಪಾರ್ಟ್ನಿಂದ ದುರ್ವಾಸನೆ ಬರುತ್ತಿರುವುದರ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದರು ಎಂದು ಅಧಿಕಾರಿ ಹೇಳಿದರು.
ಪೊಲೀಸರು ಸ್ಥಳಕ್ಕಾಗಮಿಸಿ ಮನೆಯ ಬಾಗಿಲು ಮುರಿದು ಒಳಹೋಗಿ ನೋಡಿದಾಗ ನಟಿಯ ಮೃತದೇಹ ಆತ್ಮಹತ್ಯೆಗೆ ಶರಣಾಗಿರುವ ಸ್ಥಿತಿಯಲ್ಲಿ ಕಂಡುಬಂದಿದೆ. ಮನೆಯೊಳಗೆ ಒಂದು ಟೇಬಲ್ ಮತ್ತು ಹಗ್ಗ ಸಹ ಪತ್ತೆಯಾಗಿದೆ. ನಟಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಮತ್ತು ಇದಕ್ಕಾಗಿ ಔಷಧಿ ತೆಗೆದುಕೊಳ್ಳುತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ನಟಿ ವಾಸವಾಗಿದ್ದ ಫ್ಲ್ಯಾಟ್ನಲ್ಲಿ ಯಾವುದೇ ಡೆತ್ನೋಟ್ ಸಿಕ್ಕಿಲ್ಲ. ಇದೊಂದು ಅಸಹಜ ಸಾವು ಪ್ರಕರಣವೆಂದು ಕೇಸ್ ದಾಖಲಿಸಿಕೊಂಡಿರುವುದಾಗಿ ಅವರು ಮಾಹಿತಿ ನೀಡಿದರು.