ಕನ್ನಡ ಚಿತ್ರರಂಗಕ್ಕೆ ಹೊಸ ಪ್ರತಿಭೆಗಳ ಆಗಮನವಾಗುತ್ತಿದೆ. ನಾಯಕ, ನಾಯಕಿ, ಪೋಷಕ ಕಲಾವಿದರಾಗಿ ಹೆಚ್ಚಿನವರು ಆಗಮಿಸಿದರೆ, ನಿರ್ದೇಶಕ, ಗಾಯಕ ಸೇರಿದಂತೆ ವಿವಿಧ ವಲಯಗಳಲ್ಲೂ ನವ ಪ್ರತಿಭೆಗಳು ಬರುತ್ತಿದ್ದಾರೆ. ಈ ಸಾಲಿಗೀಗ ಹೆಚ್.ಎಂ.ರಾಮಚಂದ್ರ ಹೊಸ ಸೇರ್ಪಡೆ. 'ಕೋಟಿ ಕೋಟಿ ರೊಕ್ಕ ಗಳಿಸಿ' ಶೀರ್ಷಿಕೆಯ ಹಾಡಿಗೆ ಇವರು ದನಿಯಾಗಿದ್ದು, ಗೀತೆ ಇತ್ತೀಚೆಗೆ ರಿಲೀಸ್ ಆಗಿದೆ.
ಸಾಮಾಜಿಕ ಸಂದೇಶದ ಗೀತೆ: ಹೆಚ್.ಎಂ.ರಾಮಚಂದ್ರ (ಹೂಡಿ ಚಿನ್ನಿ) ಅವರೀಗ ಗಾಯಕ ಕೂಡಾ ಹೌದು. ಮಂಜುಕವಿ ಬರೆದು ಸಂಗೀತ ನೀಡಿರುವ 'ಕೋಟಿ ಕೋಟಿ ರೊಕ್ಕ ಗಳಿಸಿ' ಹಾಡಿಗೆ ಇವರು ಧ್ವನಿಯಾಗಿದ್ದಾರೆ. ವಿನು ಮನಸು ವಾದ್ಯ ಸಂಯೋಜಿಸಿದ್ದಾರೆ. ಇದೊಂದು ಸಾಮಾಜಿಕ ಸಂದೇಶ ಸಾರುವ ಗೀತೆಯಾಗಿದೆ.
ಇತ್ತೀಚೆಗೆ ಹಾಡು ಬಿಡುಗಡೆ ಸಮಾರಂಭ ಅದ್ಧೂರಿಯಾಗಿ ನೆರವೇರಿತು. ಶ್ರೀಮಹದೇವ ಸ್ವಾಮೀಜಿ, ವೃಕ್ಷಮಾತೆ ಸಾಲುಮರದ ತಿಮ್ಮಕ್ಕ, ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗಡೆ, ನಟ ಚೇತನ್ ಅಹಿಂಸಾ, ನಿರ್ದೇಶಕ ಋಷಿ, ಭಾರತೀಯ ಸೇವಾ ಸಮಿತಿ ರಾಜ್ಯಾಧ್ಯಕ್ಷ ಅಮರ್ ಕಾರ್ಯಕ್ರಮದಲ್ಲಿದ್ದರು.
ಈ ಹಾಡಿನಲ್ಲಿರುವ ಸಾಹಿತ್ಯಕ್ಕೂ ಹಾಗೂ ಹೂಡಿ ಚಿನ್ನಿ ಅವರ ಗುಣಕ್ಕೂ ಹೊಂದಾಣಿಕೆ ಆಗುತ್ತದೆ. ಹಾಗಾಗಿ ಹಾಡನ್ನು ಅವರಿಂದಲೇ ಹಾಡಿಸಬೇಕೆನಿಸಿತು. ಅವರು ಮೊದಲು ಒಪ್ಪಲಿಲ್ಲ. ಆ ನಂತರ ಅಭ್ಯಾಸ ಮಾಡಿ ಹಾಡಿದ್ದಾರೆ. ಎಂ.ಕೆ.ಆಡಿಯೋ ಯೂಟ್ಯೂಬ್ ಚಾನಲ್ನಲ್ಲಿ ಹಾಡು ಕೇಳಿ ಆನಂದಿಸಿ ಎಂದು ಮಂಜುಕವಿ ತಿಳಿಸಿದರು.
ಎಲ್ಲ ಗಣ್ಯರಿಗೂ ಶರಣೆಂದು ಮಾತು ಆರಂಭಿಸಿದ ಹೂಡಿ ಚಿನ್ನಿ, "ಮಂಜುಕವಿ ಬರೆದಿರುವ ಈ ಹಾಡು ಎಲ್ಲರ ಮನ ಮುಟ್ಟುವಂತಿದೆ. ಗೀತೆಯನ್ನು ನೀವೇ ಹಾಡಿ ಅಂದಾಗ ನಾನು ಬೇಡ, ಬೇರೆ ಜನಪ್ರಿಯ ಗಾಯಕರು ಹಾಡಲಿ ಎಂದಿದ್ದೆ. ಆದರೆ ಸ್ನೇಹಿತರ ಒತ್ತಾಯಕ್ಕೆ ಮಣಿದು ಅಭ್ಯಾಸ ಮಾಡಿ ಹಾಡಿದ್ದೇನೆ. ಇದೊಂದು ಸಾಮಾಜಿಕ ಸಂದೇಶ ಸಾರುವ ಗೀತೆ. ಕೇಳುಗರಿಗೆ ಇಷ್ಟವಾಗಲಿದೆ" ಎಂದರು.
ಇದನ್ನೂ ಓದಿ: ಆ.1ಕ್ಕೆ 'ಪೌಡರ್' ಪಾರ್ಟಿ: ದಿಗಂತ್ ಚಿತ್ರತಂಡದಿಂದ ಆಹ್ವಾನ - Powder Party