ನಮೋ ಭೂತಾತ್ಮಾ ಹಾಗೂ ಉಂಡೇನಾಮ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುಡ್ ಕಮ್ ಬ್ಯಾಕ್ ಮಾಡಿರೋ ನಟ ಕೋಮಲ್ ಕುಮಾರ್. ಒಟ್ಟೊಟ್ಟಿಗೆ ನಾಲ್ಕೈದು ಸಿನಿಮಾಗಳ ಮಾಡ್ತಾ ಇರೋ ಕೋಮಲ್ ಅವರು ಈಗ ಮತ್ತೊಂದು ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ವಿಶೇಷ ಅಂದ್ರೆ ಕೋಮಲ್ ನಾಯಕ ನಟನಾಗಿ ಅಭಿನಯಿಸುತ್ತಿರೋ 25ನೇ ಸಿನಿಮಾ ಇದು.
ಈ ಚಿತ್ರಕ್ಕೆ 'ಕುಟೀರ' ಅಂತಾ ಹೆಸರಿಟ್ಟಿದ್ದು, ನಿರ್ದೇಶಕ ಅನೂಪ್ ಅಂಟೋನಿ ನಿರ್ದೇಶನದ ಈ ಚಿತ್ರದ ಮುಹೂರ್ತ ಸಮಾರಂಭ ಹಾಗೂ ಶೀರ್ಷಿಕೆ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ಅದ್ಧೂರಿಯಾಗಿ ನೆರವೇರಿತು. ಚಿತ್ರರಂಗದ ಸಾಕಷ್ಟು ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಸಮಾರಂಭದಲ್ಲಿ ಭಾಗಿಯಾಗಿದ್ದರು.
ನಟ ಕೋಮಲ್ ಕುಮಾರ್ ಮಾತನಾಡಿ, "ನಾನು ಈವರೆಗೂ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. ಆದರೆ ನಾಯಕನಾಗಿ ನಟಿಸುತ್ತಿರುವ 25 ನೇ ಚಿತ್ರವಿದು. ನಾನು ಬಹಳ ಇಷ್ಟಪಡುವ ಹಾರರ್ ಕಾಮಿಡಿ ಫ್ಯಾಂಟಸಿ ಜಾನರ್ನ ಚಿತ್ರ ಇದು. ಈ ಹಿಂದೆ ನಾನು ಕೆಲವು ಹಾರರ್ ಕಾಮಿಡಿ ಚಿತ್ರಗಳಲ್ಲಿ ನಟಿಸಿದ್ದೇನೆ. ಆದರೆ, ಈ ಚಿತ್ರದ ಕಥೆ ಸ್ವಲ್ಪ ವಿಭಿನ್ನ. ಚಿತ್ರದ ಹೆಸರೆ ಹೇಳುವಂತೆ 'ಕುಟೀರ' ಎಂದರೆ ಮನೆ. ಈ ಚಿತ್ರದಲ್ಲೂ ಒಂದು ದೊಡ್ಡ ಮನೆ ಇರುತ್ತದೆ. ಅಲ್ಲಿಗೆ ಬಂದು ಸಿಕ್ಕಿ ಹಾಕಿಕೊಳ್ಳುವ ನನಗೆ ದೆವ್ವಗಳು ಏನು ಮಾಡುತ್ತವೆ? ಎಂಬುದನ್ನು ನಿರ್ದೇಶಕರು ಕಾಮಿಡಿ ಮೂಲಕ ತೋರಿಸಲಿದ್ದಾರೆ. ಈ ಚಿತ್ರದಲ್ಲಿ ಸಿಜಿ ವರ್ಕ್ಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ನುರಿತ ತಂತ್ರಜ್ಞರು ಹಾಗೂ ಅನುಭವಿ ಕಲಾವಿದರ ತಾರಾಬಳಗ ಈ ಚಿತ್ರದಲ್ಲಿದೆ" ಎಂದರು.
ನಿರ್ದೇಶಕ ಅನೂಪ್ ಆಂಟೋನಿ ಮಾತನಾಡಿ, "ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ಯೋಗೇಶ್ ಅವರಿಗೆ ಧನ್ಯವಾದ. ಈ ಕಥೆ ಬರೆದಾಗಲೇ ಕೋಮಲ್ ಅವರೇ ನಾಯಕ ಅಂದುಕೊಂಡಿದ್ದೆ. ನಿರ್ಮಾಪಕರ ಬಳಿಯೂ ಇದನ್ನು ಹೇಳಿದ್ದೆ. ಕೋಮಲ್ ಅವರು ಕಥೆ ಕೇಳಿ ಇಷ್ಟಪಟ್ಟರು. ಬಿ.ಜಿ.ಭರತ್ ಸಂಗೀತ ನಿರ್ದೇಶನ, ಅರುಣ್ ಸುರೇಶ್ ಛಾಯಾಗ್ರಹಣ ಹಾಗೂ ಎನ್ ಎಂ ವಿಶ್ವ ಅವರ ಸಂಕಲನವಿರುವ ಈ ಚಿತ್ರಕ್ಕೆ ಶಂಕರ್ ರಾಮನ್ ಸಂಭಾಷಣೆ ಬರೆಯುತ್ತಿದ್ದಾರೆ" ಎಂದು ತಿಳಿಸಿದರು.
ಕೋಮಲ್ಗೆ ಜೊತೆಯಾಗಿ ಪ್ರಿಯಾಂಕಾ ತಿಮ್ಮೇಶ್ ನಟಿಸುತ್ತಿದ್ದು, ಈ ಚಿತ್ರದಲ್ಲಿ ಆಂಗ್ಲೋ ಇಂಡಿಯನ್ ಪಾತ್ರ ಮಾಡುತ್ತಿದ್ದಾರೆ. ಇದರ ಜೊತೆಗೆ ಯೋಗೇಶ್, ಯಶ್ ಶೆಟ್ಟಿ, ಕಾಕ್ರೋಜ್ ಸುಧೀ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿದ್ದಾರೆ. ಕಂಸಾಳೆ ಫಿಲಂಸ್ ಲಾಂಛನದಲ್ಲಿ ಮಧು ಮರಿಸ್ವಾಮಿ ಅವರು ಮೊದಲ ಬಾರಿಗೆ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮಾರ್ಚ್ ಎರಡನೇ ವಾರದಲ್ಲಿ ಕುಟೀರ ಸಿನಿಮಾ ಶೂಟಿಂಗ್ ಪ್ರಾರಂಭಿಸಲು ಚಿತ್ರತಂಡ ಪ್ಲಾನ್ ಮಾಡಿದೆ. ಹೆಚ್ಚಿನ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆಯಲಿದೆ.
ಇದನ್ನೂ ಓದಿ: ರಾಷ್ಟ್ರೀಯ ಕಿರುಚಿತ್ರೋತ್ಸವದಲ್ಲಿ ಕುಣಿದು ಕುಪ್ಪಳಿಸಿದ ಗುರುಕಿರಣ್, ಪ್ರೇಮ್