ಬಾಲಿವುಡ್ನ ಯುವನಟ ಕಾರ್ತಿಕ್ ಆರ್ಯನ್ ನಟನೆಯ 'ಚಂದು ಚಾಂಪಿಯನ್' ತೆರೆಕಂಡ ಎರಡು ದಿನಗಳಲ್ಲಿ 13.1 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ನಿರ್ಮಾಪಕ ಇಂದು ಬಹಿರಂಗಪಡಿಸಿದ್ದಾರೆ. ಕಬೀರ್ ಖಾನ್ ಆ್ಯಕ್ಷನ್ ಕಟ್ ಹೇಳಿರುವ ಸ್ಪೋರ್ಟ್ಸ್ ಡ್ರಾಮಾ ಭಾರತದ ಮೊದಲ ಪ್ಯಾರಾಲಿಂಪಿಕ್ ಗೋಲ್ಡ್ ಮೆಡಲ್ ವಿಜೇತ ಮುರಳಿಕಾಂತ್ ಪೇಟ್ಕರ್ ಅವರ ಜೀವನವನ್ನಾಧರಿಸಿದೆ.
ಶುಕ್ರವಾರ ಚಿತ್ರಮಂದಿರ ಪ್ರವೇಶಿಸಿದ 'ಚಂದು ಚಾಂಪಿಯನ್' ಮೊದಲ ದಿನ 5.40 ಕೋಟಿ ರೂ. ಕಲೆಕ್ಷನ್ ಮಾಡಿದೆ. ಎರಡು ದಿನಗಳ ಒಟ್ಟು ಗಳಿಕೆ 13.1 ಕೋಟಿ ರೂಪಾಯಿ ಆಗಿದೆ. ಚಿತ್ರ ನಿರ್ಣಾಯಕ ಹಂತ ಮೊದಲ ಸೋಮವಾರದ ಪರೀಕ್ಷೆಯಲ್ಲಿ ಉತ್ತೀರ್ಣವಾಗಲು ಬಾಕ್ಸ್ ಆಫೀಸ್‌ನಲ್ಲಿ ಇದೇ ರೀತಿ ಉತ್ತಮ ಸಂಖ್ಯೆಗಳೊಂದಿಗೆ ಸಾಗಬೇಕಿದೆ.
ನಿರ್ಮಾಪಕರು ತಮ್ಮ ಹೇಳಿಕೆಯಲ್ಲಿ, 'ಚಂದು ಚಾಂಪಿಯನ್' ಎರಡನೇ ದಿನ ಬಾಕ್ಸ್ ಆಫೀಸ್‌ನಲ್ಲಿ ಏರಿಕೆ ಕಂಡಿದೆ. "ಕಾರ್ತಿಕ್ ಆರ್ಯನ್ ಅವರ ಚಂದು ಚಾಂಪಿಯನ್ ಕಲೆಕ್ಷನ್ನಲ್ಲಿ ಎರಡನೇ ದಿನದಂದು ಶೇ. 45ರಷ್ಟು ಏರಿಕೆಯಾಗಿದೆ. ಎರಡನೇ ದಿನ 7.70 ಕೋಟಿ ರೂ. ಸಂಪಾದಿಸಿದೆ. ಮೊದಲ ದಿನದ 5.40 ಕೋಟಿ ರೂ. ಗಳಿಕೆಯೊಂದಿಗೆ, ಚಿತ್ರ ಒಟ್ಟು 13.10 ಕೋಟಿ ರೂ.ನ ವ್ಯವಹಾರ ನಡೆಸಿದೆ" ಎಂದು ತಿಳಿಸಿದ್ದಾರೆ.
ಚಂದು ಚಾಂಪಿಯನ್ ಚಿತ್ರದ ಕಥಾಹಂದರ ಕಾರ್ತಿಕ್ ಆರ್ಯನ್ ಅವರ ಪಾತ್ರ ಮುರಳಿಕಾಂತ್ ಪೇಟ್ಕರ್ ಸುತ್ತ ಸುತ್ತುತ್ತದೆ. ಭಾರತೀಯ ಸೇನೆಯ ಸೈನಿಕ, ಕುಸ್ತಿಪಟು, 1965ರ ಯುದ್ಧದ ಅನುಭವ ಮತ್ತು ಈಜುಗಾರನಾಗಿ ಅವರ ಜೀವನದ ವಿವಿಧ ಅಂಶಗಳನ್ನು ತೋರಿಸಿದೆ.
ಕಬೀರ್ ಖಾನ್ ಅವರ ಕೊನೆ ಚಿತ್ರ '83'. 2021ರ ಡಿಸೆಂಬರ್ನಲ್ಲಿ ಮೂರನೇ ಹಂತದ ಕೋವಿಡ್ ಅಲೆ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ತೆರೆಕಂಡು, ಹಿನ್ನಡೆ ಎದುರಿಸಿತು. ಅದಾದ ಬಳಿಕ ಚಂದು ಚಾಂಪಿಯನ್ ಮೂಲಕ ಡೈರೆಕ್ಷನ್ ಕ್ಯಾಪ್ ಧರಿಸಿದರು. ರಣ್ವೀರ್ ಸಿಂಗ್ ಅವರನ್ನು ಒಳಗೊಂಡ '83', ಕ್ರಿಕೆಟ್ ಲೋಕದ ಭಾರತದ ಐತಿಹಾಸಿಕ ವಿಶ್ವಕಪ್ ಗೆಲುವನ್ನು ಆಧರಿಸಿದೆ.
ಇದನ್ನೂ ಓದಿ: ಜೂ.23ಕ್ಕೆ 'ಕಲ್ಕಿ ಎಡಿ 2898' ಎರಡನೇ ಟ್ರೇಲರ್ ರಿಲೀಸ್? - Kalki AD Second Trailer
ಸಾಜಿದ್ ನಾಡಿಯಾಡ್ವಾಲಾ ಅವರ ನಾಡಿಯಾಡ್ವಾಲಾ ಗ್ರ್ಯಾಂಡ್‌ಸನ್ ಎಂಟರ್‌ಟೈನ್‌ಮೆಂಟ್ ಮತ್ತು ಕಬೀರ್ ಖಾನ್ ಫಿಲ್ಮ್ಸ್ ನಿರ್ಮಾಣದ ಚಂದು ಚಾಂಪಿಯನ್‌ನಲ್ಲಿ ವಿಜಯ್ ರಾಜ್, ಭುವನ್ ಅರೋರಾ ಮತ್ತು ರಾಜ್‌ಪಾಲ್ ಯಾದವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ಸೆಲೆಬ್ರಿಟಿಗಳ ಅವಾಂತರಗಳ 'ದರ್ಶನ': ಈ ವಾರ ಸದ್ದು ಮಾಡಿದ ವಿವಾದಗಳಿವು - Celebrities Controversies
ಉತ್ತಮ ಸಿನಿಮಾಗಳನ್ನು ಕೊಡುತ್ತಿರುವ ಕಾರ್ತಿಕ್ ಆರ್ಯನ್ ಮತ್ತು '83' ಬಳಿಕ 'ಚಂದು ಚಾಂಪಿಯನ್'ನೊಂದಿಗೆ ಬಂದ ಕಬೀರ್ ಖಾನ್ ಅವರಿಗೆ ಈ ಚಿತ್ರದ ಗೆಲುವು ಬಹಳ ಮುಖ್ಯವಾಗಿದೆ. ಎರಡು ದಿನಗಳಲ್ಲಿ 13.1 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ ಈ ಸ್ಪೋರ್ಟ್ಸ್ ಡ್ರಾಮಾದ ಒಟ್ಟು ಗಳಿಕೆ ಎಷ್ಟಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.