ಬಿಡುಗಡೆ ಹೊಸ್ತಿಲಲ್ಲಿರುವ ಬಹುನಿರೀಕ್ಷಿತ ಚಿತ್ರ 'ಭೂಲ್ ಭುಲೈಯ್ಯಾ 3'ರ ಟ್ರೇಲರ್ ಇಂದು ರಿಲೀಸ್ ಆಗಿದೆ. ಬಾಲಿವುಡ್ನ ಯಂಗ್ ಸೂಪರ್ ಸ್ಟಾರ್ ಕಾರ್ತಿಕ್ ಆರ್ಯನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರವು ಹಾಸ್ಯ, ಸಸ್ಪೆನ್ಸ್, ಸೂಪರ್ನ್ಯಾಚುರಲ್ ಥ್ರಿಲ್ಲಿಂಗ್ ಅಂಶಗಳನ್ನು ಒಳಗೊಂಡಿದೆ. ಸಿನಿಮಾ ತನ್ನ ಹಿಂದಿನ ಎರಡು ಭಾಗಗಳನ್ನು ಅನುಸರಿಸಲಿದೆ.
ಯಶಸ್ವಿ ಭೂಲ್ ಭುಲೈಯ್ಯಾ ಫ್ರ್ಯಾಂಚೈಸ್‌ನ ಮೂರನೇ ಅಧ್ಯಾಯವಾಗಿ ಈ ಚಲನಚಿತ್ರ ಒಂದೊಳ್ಳೆ ಸಿನಿಮೀಯ ಅನುಭವ ಕೊಡಲಿದೆ ಎಂಬ ಭರವಸೆಯನ್ನು ಇಂದು ಬಿಡುಗಡೆ ಆಗಿರುವ ಟ್ರೇಲರ್ ಮೂಡಿಸಿದೆ.
ಬಾಲಿವುಡ್ನಲ್ಲಿ ತನ್ನದೇ ಬೇಡಿಕೆ ಹೊಂದಿರುವ ಯಂಗ್ ಸೂಪರ್ ಸ್ಟಾರ್ ಕಾರ್ತಿಕ್ ಆರ್ಯನ್ ತಮ್ಮ ರೂಹ್ ಬಾಬಾ ಪಾತ್ರವನ್ನು ಪುನರಾವರ್ತಿಸಿದ್ದಾರೆ. ರೂಹ್ ಬಾಬಾ ಎಂದೂ ಕರೆಯಲ್ಪಡುವ ಹಾಸ್ಯಮಯ ಹಾಗೂ ನಿರ್ಭೀತ ರುಹಾನ್ ರಾಂಧವಾ ಪಾತ್ರದಲ್ಲಿ ನಿಮ್ಮೆದುರು ಬರಲು ಸಜ್ಜಾಗಿದ್ದಾರೆ. ಅಶುಭ, ಪವರ್ಫುಲ್ ಪರಿಸ್ಥಿತಿಯನ್ನು ಎದುರಿಸುತ್ತಾರೆ. ಟ್ರೇಲರ್, ಪ್ರಾರಂಭದಿಂದಲೇ ಸಸ್ಪೆನ್ಸ್ ಅಂಶಗಳನ್ನು ಒಳಗೊಂಡಿದೆ.
ಚಿತ್ರದ ಟ್ರೇಲರ್ ಸ್ಪೂಕಿ ಮಹಲುಗಳು, ಮಂದವಾಗಿ ಬೆಳಗಿದ ಕಾರಿಡಾರ್‌ಗಳು ಮತ್ತು ನೆರಳಿನ ಆಕೃತಿಗಳ ಮಿಶ್ರಣವಾಗಿದೆ. ಅದು ಕಥೆಯ ಸುತ್ತಲಿನ ಕುತೂಹಲವನ್ನು ಹೆಚ್ಚಿಸುತ್ತದೆ. ಅಲ್ಲದೇ ಈ ಟ್ರೇಲರ್ ಕಾರ್ತಿಕ್ ಆರ್ಯನ್ ಅವರ ಬಹುಮುಖ ಪ್ರತಿಭೆಯ ಒಂದು ನೋಟವನ್ನು ಒದಗಿಸಿದೆ. ಹೌದು, ನಟ ತಮ್ಮ ಸಿಗ್ನೇಚರ್ ಹ್ಯೂಮರ್ ಜೊತೆಗೆ ಹಾರರ್ ಅಂಶಗಳನ್ನೂ ಸಲೀಸಾಗಿ ಬ್ಯಾಲೆನ್ಸ್ ಮಾಡಿದೆ. ಹಿನ್ನೆಲೆ ಸಂಗೀತ ದೃಶ್ಯಗಳನ್ನು ಮತ್ತಷ್ಟು ಆಕರ್ಷೀಯಗೊಳಿಸಿದೆ. ಅದಾಗ್ಯೂ ಒಂದಿಷ್ಟು ದೃಶ್ಯಗಳು ಸಿನಿಮಾದ ಹಿಂದಿನ ಭಾಗವನ್ನೇ ನೆನಪಿಸುವಂತಿವೆ.
ಭೂಲ್ ಭುಲೈಯ್ಯಾ 3ಕ್ಕೆ ಅನೀಸ್ ಬಾಜ್ಮಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಭೂಲ್ ಭುಲೈಯಾ 2ರ ಅದ್ಭುತ ಯಶಸ್ಸಿನ ನಂತರ ಮತ್ತೆ ಪ್ರೇಕ್ಷಕರೆದುರು ಬರುತ್ತಿದ್ದಾರೆ. ಎರಡನೇ ಭಾಗದಲ್ಲೂ ಕಾರ್ತಿಕ್ ಆರ್ಯನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಮತ್ತೆ ಈ ಇಬ್ಬರ ಕಾಂಬಿನೇಶನ್ನಲ್ಲಿ ಭೂಲ್ ಭುಲೈಯ್ಯಾ 3 ರೆಡಿಯಾಗಿದೆ. ಟಿ-ಸೀರೀಸ್ ಮತ್ತು ಸಿನಿ1 ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಭೂಷಣ್ ಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಇದನ್ನೂ ಓದಿ: ಸರಳತೆಯ ಸಾಹುಕಾರ: ನೂಕುನುಗ್ಗಲಿನ ನಡುವೆ ತಾಳ್ಮೆಯಿಂದ ಸೆಲ್ಫಿಗೆ ಪೋಸ್ ಕೊಟ್ಟ ಸೂಪರ್ ಸ್ಟಾರ್
ಕಾರ್ತಿಕ್ ಆರ್ಯನ್ ಜೊತೆಗೆ, ಚಿತ್ರದಲ್ಲಿ ವಿದ್ಯಾ ಬಾಲನ್, ತೃಪ್ತಿ ದಿಮ್ರಿ, ಮಾಧುರಿ ದೀಕ್ಷಿತ್ ಮತ್ತು ರಾಜ್‌ಪಾಲ್ ಯಾದವ್ ಸೇರಿದಂತೆ ಹಲವರು ತಮ್ಮ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಬಾಲಿವುಡ್ ಕಿಲಾಡಿ ಖ್ಯಾತಿಯ ಅಕ್ಷಯ್ ಕುಮಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಆದ್ರೆ ನಟ ಈ ಊಹಾಪೋಹಗಳನ್ನು ಅಲ್ಲಗೆಳೆದಿದ್ದಾರೆ. ಚಿತ್ರ ದೀಪಾವಳಿಗೆ, ನವೆಂಬರ್ 3ರಂದು ಬಿಡುಗಡೆಯಾಗಲಿದೆ. ಹಾರರ್, ಕಾಮಿಡಿ ಮತ್ತು ಥ್ರಿಲ್ಲಿಂಗ್ ಅಂಶಗಳ ಮಿಶ್ರಣದಿಂದ ಪ್ರೇಕ್ಷಕರನ್ನು ಆಕರ್ಷಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ: 'ಪ್ರೇಕ್ಷಕರಾಗಿ ನಾವು ನಕಾರಾತ್ಮಕವಾಗಿದ್ದೇವೆ': ಸೂಪರ್ ಸ್ಟಾರ್ ಜೂ.ಎನ್ಟಿಆರ್ ಹೀಗಂದಿದ್ದೇಕೆ?
ಇನ್ನು ಕಾರ್ತಿಕ್ ಆರ್ಯನ್ ಅವರ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಟ್ರೇಲರ್ ರಿಲೀಸ್ ಈವೆಂಟ್ ಸಲುವಾಗಿ ಇಂದು ಎಕಾನಮಿ ಕ್ಲಾಸ್‌ನಲ್ಲಿ ಜೈಪುರಕ್ಕೆ ವಿಮಾನ ಪ್ರಯಾಣ ಕೈಗೊಂಡರು. ಪ್ಲೇನ್ನಲ್ಲಿದ್ದ ಅಭಿಮಾನಿಗಳು ನಟನನ್ನು ಸುತ್ತುವರೆದರು. ನಗುಮೊಗದಲ್ಲೇ ಅಭಿಮಾನಿಗಳ ಮಾತಿಗೆ ಸ್ಪಂದಿಸಿದ ನಟ, ನೂಕುನುಗ್ಗಲ ನಡುವೆಯೂ ಸೆಲ್ಫಿಗೆ ಪೋಸ್ ಕೊಟ್ಟರು.