ಕನ್ನಡ ಚಿತ್ರರಂಗದಲ್ಲಿನ ಹೊಸ ಪ್ರಯತ್ನಗಳಿಗೆ ಕನ್ನಡಿಗರು ಬೆಂಬಲ ನೀಡುತ್ತಾ ಬಂದಿದ್ದಾರೆ. ಇದೀಗ ಹಾರರ್ ಚಿತ್ರವೊಂದು ರೆಡಿಯಾಗಿದೆ. ವಿಭಿನ್ನ ಕಥೆಯ ಬಹುನಿರೀಕ್ಷಿತ ಹಾರರ್ ಸಿನಿಮಾ "ಕಪ್ಪು ಬಿಳುಪಿನ ನಡುವೆ". ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದೊಂದಿಗೆ ನಂಟಿರುವ ವಸಂತ್ ವಿಷ್ಣು ಮೊದಲ ಬಾರಿಗೆ ನಿರ್ದೇಶಿಸಿ, ಅಭಿನಯ ಮಾಡಿರೋ ಚಿತ್ರವೇ ಈ 'ಕಪ್ಪು ಬಿಳುಪಿನ ನಡುವೆ'. ಶೂಟಿಂಗ್ ಪೂರ್ಣಗೊಂಡಿರುವ ಈ ಚಿತ್ರದ ಬಗ್ಗೆ ಚಿತ್ರತಂಡ ಕೆಲ ವಿಚಾರಗಳನ್ನು ಹಂಚಿಕೊಂಡಿದೆ.
ನಿರ್ದೇಶಕನಾಗಿ ಇದು ನನ್ನ ಚೊಚ್ಚಲ ಚಿತ್ರ ಎಂದು ಮಾತು ಆರಂಭಿಸಿದ ನಿರ್ದೇಶಕ - ನಾಯಕ ನಟ ವಸಂತ್ ವಿಷ್ಣು, ''ನಾನು ಈ ಹಿಂದೆ ನಾಲ್ಕು ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದೇನೆ. ನಿರ್ದೇಶನ ವಿಭಾಗದಲ್ಲೂ ಕಾರ್ಯ ನಿರ್ವಹಿಸಿದ್ದೇನೆ. ಪೂರ್ಣ ಪ್ರಮಾಣದ ನಿರ್ದೇಶಕನಾಗಿ ನನ್ನ ಚೊಚ್ಚಲ ಚಿತ್ರವಿದು. ನಮ್ಮ ಈ ಕಪ್ಪು ಬಿಳುಪಿನ ನಡುವೆ ಕುರಿತು ಹೇಳಬೇಕೆಂದರೆ, ಕಪ್ಪು ಬಿಳುಪನ್ನು ಕತ್ತಲು - ಬೆಳುಕಿಗೆ ಹೋಲಿಸಬಹುದು. ಪಾಸಿಟಿವ್ ಹಾಗೂ ನೆಗಟಿವ್ ಎನರ್ಜಿ ಅಂತಲೂ ಎನ್ನಬಹುದು. ಇದೊಂದು ಯೂಟ್ಯೂಬರ್ಗಳ ಕುರಿತಾದ ಚಿತ್ರ. ಹಾರರ್ ಚಿತ್ರವೂ ಹೌದು. ಹಾಗಂತ ಇಲ್ಲಿ ಭಯ ಪಡಿಸುವ ದೆವ್ವಗಳಿಲ್ಲ. ಹಾರರ್ ಜಾನರ್ನಲ್ಲೇ ಹೊಸ ಪ್ರಯತ್ನವಿದು. ಕನಕಪುರದಿಂದ 30 ಕಿಲೋಮೀಟರ್ ದೂರದ ದಟ್ಟ ಕಾನನದಲ್ಲಿ ಹೆಚ್ಚಿನ ಚಿತ್ರೀಕರಣವಾಗಿದೆ. ಕನ್ನಡ ಹಾಗೂ ತಮಿಳಿನಲ್ಲಿ ನಿರ್ಮಾಣವಾಗಿರುವ ಈ ಚಿತ್ರ ತೆರೆಗೆ ಬರಲು ಅಣಿಯಾಗಿದೆ. ಸಿನಿಮಾ ಉತ್ತಮವಾಗಿ ಬರಲು ಸಹಕಾರ ನೀಡಿದ ನಿರ್ಮಾಪಕರಿಗೆ ಹಾಗೂ ನನ್ನ ತಂಡಕ್ಕೆ ಧನ್ಯವಾದಗಳು'' ಎಂದು ತಿಳಿಸಿದರು.
ಇದನ್ನೂ ಓದಿ: 'ಗಾಡ್ ಪ್ರಾಮಿಸ್' ನಿರ್ದೇಶಿಸಲಿದ್ದಾರೆ 'ಕಾಂತಾರ'ದ ಫಾರೆಸ್ಟ್ ಗಾರ್ಡ್
ಚಿತ್ರದಲ್ಲಿ ವಸಂತ್ ವಿಷ್ಣು ಜೊತೆ ವಿದ್ಯಾಶ್ರೀ ಗೌಡ ಜೋಡಿಯಾಗಿದ್ದಾರೆ. ಇವರ ಜೊತೆ ಹಿರಿಯ ನಟ ಬಿರಾದಾರ್, ಹಾಸ್ಯ ನಟ ಹರೀಶ್, ನವೀನ್, ಮಾಹೀನ್ ಮತ್ತು ತೇಜಸ್ವಿನಿ ಅಭಿನಯಿಸಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಖ್ಯಾತ ನಟ ಶರತ್ ಲೋಹಿತಾಶ್ವ ಕಾಣಿಸಿಕೊಳ್ಳಲಿದ್ದಾರೆ. ಮೂರು ಹಾಡುಗಳಿವೆ. ವಿ. ನಾಗೇಂದ್ರಪ್ರಸಾದ್ ಅವರು ಈ ಮೂರು ಹಾಡುಗಳನ್ನು ಬರೆದಿದ್ದಾರೆ. "ಕೆ.ಜಿ.ಎಫ್" ಖ್ಯಾತಿಯ ಸಂತೋಷ್ ವೆಂಕಿ ಹಾಗೂ ಶ್ರೀಧರ್ ಕಶ್ಯಪ್ ಹಾಡಿದ್ದಾರೆ. ಝೀ ಮ್ಯೂಸಿಕ್ ಸೌತ್ ಮೂಲಕ ಹಾಡುಗಳು ಬಿಡುಗಡೆಯಾಗಿವೆ. ಸಂಗೀತ ನಿರ್ದೇಶಕ ರಿಶಾಲ್ ಸಾಯಿ ಅವರು ಈ ಚಿತ್ರದ ಭಾಗವಾಗಿದ್ದಾರೆ. ವೃತ್ತಿಯಲ್ಲಿ ಪಾರಂಪರಿಕ ಆಯುರ್ವೇದ ವೈದ್ಯರಾಗಿರುವ ಧರ್ಮೇಂದ್ರ ಅವರು ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಹಾಗೇ ಲಿಂಗೇಗೌಡ ಹಾಗೂ ಶಣ್ಮಗಸುಂದರಂ ನಿರ್ಮಾಣದ ಹೊಣೆ ಹೊತ್ತಿಕೊಂಡಿದ್ದಾರೆ. ಸದ್ಯ ಶೂಟಿಂಗ್ ಮುಗಿಸಿರೋ ಕಪ್ಪು ಬಿಳುಪಿನ ನಡುವೆ ಚಿತ್ರ ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.
ಇದನ್ನೂ ಓದಿ: 'ದಿಗಂತ್ ನನ್ನ ಕ್ರಶ್'- ಸಂಗೀತಾ ಶೃಂಗೇರಿ; ತೆರೆ ಹಂಚಿಕೊಂಡ 'ಮಾರಿಗೋಲ್ಡ್' ಜೋಡಿಯ ಸುಂದರ ಫೋಟೋಗಳಿಲ್ಲಿವೆ