ಹೈದರಾಬಾದ್: ಜೂನಿಯರ್ ಮಹಿಳಾ ನೃತ್ಯ ಸಂಯೋಜಕಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಜಾಮೀನು ರಹಿತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರ ತಂಡ ಗುರುವಾರ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಅವರನ್ನು ಬಂಧಿಸಿದೆ.
ಜಾನಿ ಮಾಸ್ಟರ್ ನಿಜವಾದ ಹೆಸರು ಶೇಕ್ ಜಾನಿ ಬಾಷಾ ಆಗಿದ್ದು, ಅವರನ್ನು ಸೈಬರಾಬಾದ್ ಪೊಲೀಸರು ಗೋವಾದಲ್ಲಿ ಬಂಧಿಸಿದ್ದಾರೆ. ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನ್ಯಾಯಾಲಯದಿಂದ ಟ್ರಾನ್ಸಿಟ್ ವಾರೆಂಟ್ ಪಡೆದು ಹೈದರಾಬಾದ್‌ಗೆ ಕರೆತರಲಾಗುತ್ತಿದೆ.
ಪ್ರಕರಣದ ಸಂತ್ರಸ್ತೆಗೆ ಈಗ 21 ವರ್ಷ ವಯಸ್ಸು. ನೃತ್ಯ ನಿರ್ದೇಶಕ 2019 ರಲ್ಲಿ ಮೊದಲ ಬಾರಿಗೆ ತನ್ನ ಮೇಲೆ ಅತ್ಯಾಚಾರವೆಸಗಿದ್ದರು ಎಂದು ಸಂತ್ರಸ್ತೆ ಆರೋಪಿಸಿದರು. ಜಾನಿ ಮಾಸ್ಟರ್ ಅನೇಕ ಸಂದರ್ಭಗಳಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಆರಂಭದಲ್ಲಿ ಆರೋಪಿ ಮೇಲೆ ಅತ್ಯಾಚಾರ, ಕ್ರಿಮಿನಲ್ ಬೆದರಿಕೆ ಮತ್ತು ಹಲ್ಲೆ ಪ್ರಕರಣಗಳನ್ನು ದಾಖಲಿಸಿದ್ದರು. ಜಾನಿ ಮಾಸ್ಟರ್ ಅವರು ಅಪ್ರಾಪ್ತ ವಯಸ್ಸಿನಿಂದಲೂ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರುದಾರರು ಆರೋಪಿಸಿದಂತೆ, ಪೊಲೀಸರು ಲೈಂಗಿಕ ಅಪರಾಧದಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳನ್ನು ಸಹ ಸೇರಿಸಿದ್ದಾರೆ. ಜಾನಿ ಮಾಸ್ಟರ್ನ ಬೆದರಿಕೆಯಿಂದ ಆರಂಭದಲ್ಲಿ ಸುಮ್ಮನಿದ್ದೆ ಎಂದು ಜ್ಯೂನಿಯರ್ ಕೋರಿಯೋಗ್ರಾಫರ್ ಹೇಳಿದ್ದಾರೆ.
ರಾಷ್ಟ್ರಪ್ರಶಸ್ತಿ ವಿಜೇತ ನೃತ್ಯ ಸಂಯೋಜಕ ಬುಧವಾರ ತಡರಾತ್ರಿ ತನ್ನ ನಿವಾಸದಿಂದ ನಾಪತ್ತೆಯಾಗಿದ್ದು, ಅವರ ಫೋನ್ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದರು. ಅವರನ್ನು ಬಂಧಿಸುವ ಪ್ರಯತ್ನಗಳಲ್ಲಿ ಆಂಧ್ರಪ್ರದೇಶದ ನೆಲ್ಲೂರು ಮತ್ತು ಲಡಾಖ್ಗೆ ಪೊಲೀಸ್ ತಂಡಗಳನ್ನು ಕಳುಹಿಸಿದ್ದರು. ಅಲ್ಲಿ ಅವರು ಚಲನಚಿತ್ರ ಶೂಟಿಂಗ್ ಕೆಲಸ ಮಾಡುತ್ತಿದ್ದಾರೆ ಎಂದು ನಂಬಲಾಗಿತ್ತು. ಸೆಪ್ಟೆಂಬರ್ 15 ರಂದು ಜಾನಿ ಮಾಸ್ಟರ್ ವಿರುದ್ಧ ಎಫ್‌ಐಆರ್ ದಾಖಲಿಸಿದ ಬಳಿಕ ತನಿಖೆ ಪ್ರಾರಂಭವಾಗಿತ್ತು. ನಂತರ ಹೆಚ್ಚಿನ ವಿಚಾರಣೆಗಾಗಿ ನಾರ್ಸಿಂಗ್ ಪೊಲೀಸ್ ಠಾಣೆಗೆ ಕೇಸ್ನ್ನು ವರ್ಗಾಯಿಸಲಾಯಿತು.
ಪೊಲೀಸರು ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಂಡು ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಅಧಿಕಾರಿಗಳ ನೆರವಿನೊಂದಿಗೆ ಸಾಕ್ಷ್ಯ ಸಂಗ್ರಹಿಸಿದ್ದಾರೆ. ಭರೋಸಾ ಕೇಂದ್ರದ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ತನಿಖಾಧಿಕಾರಿಗಳು ಆಕೆಯಿಂದ ಎಲ್ಲಾ ವಿವರಗಳನ್ನು ಸಂಗ್ರಹಿಸಿದ್ದಾರೆ. 2017 ರಲ್ಲಿ ನೃತ್ಯ ಸಂಯೋಜಕನ ಸಂಪರ್ಕಕ್ಕೆ ಬಂದೆ ಮತ್ತು 2019 ರಲ್ಲಿ ಜಾನಿ ಮಾಸ್ಟರ್ಗೆ ಯುವತಿ ಸಹಾಯಕಳಾಗಿದ್ದಳು ಎಂದು ದೂರಿನಲ್ಲಿ ಪೊಲೀಸರಿಗೆ ತಿಳಿಸಿದ್ದರು.