ದೇಶದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ದಂಪತಿಯ ಕಿರಿಯ ಪುತ್ರ ಅನಂತ್ ಅಂಬಾನಿ ಇದೇ ಜುಲೈ 12ರಂದು ತಮ್ಮ ಬಹುಕಾಲದ ಗೆಳತಿ ರಾಧಿಕಾ ಮರ್ಚೆಂಟ್ ಕೈ ಹಿಡಿಯಲಿದ್ದಾರೆ. ಎರಡು ವೈಭವೋಪೇತ ವಿವಾಹಪೂರ್ವ ಕಾರ್ಯಕ್ರಮಗಳ ಮೂಲಕ ವಿಶ್ವದ ಗಮನ ಸೆಳೆದಿರುವ ಏಷ್ಯಾದ ಅತ್ಯಂತ ಶ್ರೀಮಂತ ಕುಟುಂಬದಲ್ಲೀಗ ಮದುವೆಯ ಸಂಭ್ರಮ.
ಮುಂದಿನ ಶುಕ್ರವಾರ ನಡೆಯಲಿರುವ ಮದುವೆಗೆ ಈಗಾಗಲೇ ಕಾರ್ಯಕ್ರಮಗಳು ಆರಂಭಗೊಂಡಿವೆ. ಮುಂಬೈನ ಅಂಬಾನಿ ನಿವಾಸ ವಿದ್ಯುತ್ ದೀಪಾಲಂಕಾರಗಳಿಂದ ಜಗಮಗಿಸುತ್ತಿದೆ. ಅದ್ಧೂರಿ ಮದುವೆಗೆ ಹೈ ಪ್ರೊಫೈಲ್ ಅತಿಥಿಗಳನ್ನು ಆಹ್ವಾನಿಸಲಾಗುತ್ತಿದೆ. ಇದೀಗ ವಿಶ್ವವಿಖ್ಯಾತ ಗಾಯಕ ಜಸ್ಟಿನ್ ಬೀಬರ್ ಭಾರತಕ್ಕೆ ಆಗಮಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಸಂಗೀತ ಸಮಾರಂಭದಲ್ಲಿ ಜಸ್ಟಿನ್ ಬೀಬರ್ ತಮ್ಮ ಸೂಪರ್ ಹಿಟ್ ಹಾಡುಗಳನ್ನು ಹಾಡಲು ಸಜ್ಜಾಗಿದ್ದಾರೆ. ಇಂದು ನವಜೋಡಿಗಳ ಸಂಗೀತ ಸಮಾರಂಭ ನಡೆಯಲಿದ್ದು, ಪಾಪರಾಜಿಗಳು ಗಾಯಕನ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿದ್ದಾರೆ.
ಈ ವಿಡಿಯೋಗಳಲ್ಲಿ, ಜಸ್ಟಿನ್ ಬೀಬರ್ ಮುಂಬೈ ವಿಮಾನ ನಿಲ್ದಾಣದಿಂದ ಹೊರಬರುತ್ತಿರುವುದನ್ನು ಕಾಣಬಹುದು. ಗಾಯಕ ಎಂದಿನಂತೆ ತಮ್ಮ ಸಿಗ್ನೇಚರ್ ಸ್ಟೈಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ಸಡಿಲ ಪಿಂಕ್ ಟೀ-ಶರ್ಟ್, ಬ್ಲ್ಯೂ ಪ್ಯಾಂಟ್, ರೆಡ್ ಕ್ಯಾಪ್ ಧರಿಸಿದ್ದರು.
ಕೆನಡಾ ಗಾಯಕ ಬಿಗಿ ಭದ್ರತೆಯಲ್ಲಿ ಕಾರ್ ಏರಿದರು. ಜಸ್ಟಿನ್ ನೋಟ ಸೆರೆಹಿಡಿಯಲು ಪಾಪರಾಜಿಗಳು ಹರಸಾಹಸಪಡಬೇಕಾಯಿತು. ಅಂಬಾನಿ ಮದುವೆ ಸಮಾರಂಭದಲ್ಲಿ ಕಾರ್ಯಕ್ರಮ ನೀಡುತ್ತಾರೆಂಬ ನಿರೀಕ್ಷೆಯಿರುವ ಅಂತಾರಾಷ್ಟ್ರೀಯ ತಾರೆಯರ ಪಟ್ಟಿಯಲ್ಲಿ ಬೀಬರ್ ಪ್ರಮುಖರು. ಸಮಾರಂಭಗಳಲ್ಲಿ ಪ್ರದರ್ಶನ ನೀಡಲು ಅಡೆಲೆ, ಡ್ರೇಕ್ ಮತ್ತು ಲಾನಾ ಡೆಲ್ ರೇ ಜೊತೆ ಮಾತುಕತೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.
ಮತ್ತೊಂದು ಅಂತಾರಾಷ್ಟ್ರೀಯ ಮ್ಯಾಗಜಿನ್ ವರದಿ ಪ್ರಕಾರ, ಸಂಗೀತ ಕಾರ್ಯಕ್ರಮ ನೀಡಲು ಗಾಯಕನಿಗೆ 83 ಕೋಟಿ ($10 ಮಿಲಿಯನ್) ರೂ. ಪಾವತಿಸಲಾಗುತ್ತಿದೆ. ಈ ಹಿಂದೆ ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ಗಾಯಕಿ ರಿಹಾನ್ನಾ, ಜಾಮ್‌ನಗರದಲ್ಲಿ ನಡೆದ ಅನಂತ್ ರಾಧಿಕಾ ಅವರ ಮೊದಲ ಪ್ರೀ ವೆಡ್ಡಿಂಗ್ ಪಾರ್ಟಿಯಲ್ಲಿ ಪ್ರದರ್ಶನ ನೀಡಿದ್ದರು. ವರದಿಗಳನ್ನು ನಂಬುವುದಾದರೆ, ಗಾಯಕಿ 65-75 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು. ಇದೀಗ, ರಿಹಾನ್ನಾಗಿಂತ ಜಸ್ಟಿನ್ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ.
ಜಾಮ್‌ನಗರದ ಕಾರ್ಯಕ್ರಮದ ನಂತರ, ಜೂನ್‌ನಲ್ಲಿ ನಡೆದ ಕ್ರೂಸ್ ಪಾರ್ಟಿಯಲ್ಲಿ ದಿ ಬ್ಯಾಕ್‌ಸ್ಟ್ರೀಟ್ ಬಾಯ್ಸ್ ತಂಡ, ಇಟಾಲಿಯನ್ ಗಾಯಕಿ ಆ್ಯಂಡ್ರಿಯಾ ಬೊಸೆಲ್ಲಿ ಅವರು ಇಟಾಲಿಯನ್ ದ್ವೀಪ ಪೋರ್ಟೊಫಿನೊದಲ್ಲಿ ಲೈವ್ ಶೋ ನಡೆಸಿಕೊಟ್ಟಿದ್ದರು.
ಇದನ್ನೂ ಓದಿ: ಪ್ರಭಾಸ್ ಅಭಿನಯದ 'ಕಲ್ಕಿ' ನೋಡಲು ಹೈದರಾಬಾದ್‌ಗೆ ಬಂದ ಜಪಾನ್ ಫ್ಯಾನ್ಸ್ - Kalki Movie
ಅನಂತ್ ಅವರ ವಿವಾಹ ಕಾರ್ಯಕ್ರಮ ಜೂನ್ 29ರಂದು ಆರಂಭವಾಗಿದೆ. ಅಂಬಾನಿ ನಿವಾಸ ಆಂಟಿಲಿಯಾದಲ್ಲಿ ಪೂಜೆಯೊಂದಿಗೆ ಸಮಾರಂಭ ಪ್ರಾರಂಭವಾಯಿತು. ಜುಲೈ 12ರಂದು ದಾಂಪತ್ಯ ಜೀವನ ಆರಂಭಿಸಲಿದ್ದು, ಅದಕ್ಕೂ ಮುನ್ನ ಹಲವು ಕಾರ್ಯಕ್ರಮಗಳು ನಡೆಯಲಿವೆ.