ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಎರಡನೇ ಆರೋಪಿ ನಟ ದರ್ಶನ್ ತೂಗುದೀಪ ಅವರು ಮನೆ ಊಟಕ್ಕೆ ವ್ಯವಸ್ಥೆ ಮಾಡುವುದಕ್ಕೆ ಅವಕಾಶ ಕಲ್ಪಿಸುವಂತೆ ಕೋರಿದ್ದ ಅರ್ಜಿಯನ್ನು ಹೈಕೋರ್ಟ್ ಶುಕ್ರವಾರ ಮಧ್ಯಾಹ್ನ 2:30ಕ್ಕೆ ಮುಂದೂಡಿದೆ. ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣ ಕುಮಾರ್ ಅವರಿದ್ದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಮುಂದೂಡಿದೆ.
ವಿಚಾರಣೆ ಪ್ರಾರಂಭವಾಗುತ್ತಿದ್ದಂತೆ ದರ್ಶನ್ ಪರ ವಕೀಲರು, ಅರ್ಜಿಯ ತುರ್ತು ವಿಚಾರಣೆ ನಡೆಸಬೇಕು ಎಂದು ಕೋರಿದರು. ಅರ್ಜಿ ಸಬಂಧ ಸರ್ಕಾರ ಮತ್ತು ತನಿಖಾಧಿಕಾರಿಗಳು ಆಕ್ಷೇಪಣೆ ಸಲ್ಲಿಸಿದ್ದಾರೆ. ಆದರೆ, ತನಿಖಾಧಿಕಾರಿ ಆಕ್ಷೇಪಣೆ ಸಲ್ಲಿಸುವುದಕ್ಕೆ ಅವಕಾಶವಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಈ ವೇಳೆ ಸರ್ಕಾರದ ಪರ ವಕೀಲರು, ಅರ್ಜಿಗೆ ಸಂಬಂಧಿಸಿದಂತೆ ವಾದ ಮಂಡಿಸಲು ಸೋಮವಾರದವರೆಗೆ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಇದಕ್ಕೆ ಪೀಠ, ಮನೆ ಊಟದ ಬಗ್ಗೆ ಕಾನೂನು ಏನು ಹೇಳುತ್ತದೆ? ಮನೆ ಊಟ, ಹಾಸಿಗೆ, ಪುಸ್ತಕ ಪಡೆಯಬಹುದೇ? ಅವಕಾಶವಿದ್ದರೆ ಅರ್ಜಿದಾರರಿಗೆ ಒದಗಿಸಬಹುದೇ? ಎಂಬ ಪ್ರಶ್ನೆಗಳು ಉದ್ಭವಿಸಿವೆ ಎಂದು ತಿಳಿಸಿ ನಾಳೆ(ಶುಕ್ರವಾರ) ಮಧ್ಯಾಹ್ನಕ್ಕೆ ವಿಚಾರಣೆ ಮುಂದೂಡಿದೆ.
ಅರ್ಜಿಯಲ್ಲಿ ಏನಿತ್ತು?: ಕಾರಾಗೃಹದಲ್ಲಿ ನೀಡುತ್ತಿರುವ ಆಹಾರ ಅರ್ಜಿದಾರರಿಗೆ ಸೂಕ್ತರೀತಿಯಲ್ಲಿ ಜೀರ್ಣವಾಗುತ್ತಿಲ್ಲ. ಹೀಗಾಗಿ ಕೆಲ ದಿನಗಳಿಂದ ಅತಿಸಾರ(ಭೇದಿ)ದಿಂದ ಬಳಲುತ್ತಿದ್ದಾರೆ. ಜೈಲಿನ ಆರೋಗ್ಯಾಧಿಕಾರಿ ಪರಿಶೀಲನೆ ನಡೆಸಿದ್ದ ಆಹಾರದಲ್ಲಿ ವಿಷಕಾರಿ ಸೂಕ್ಷ್ಮ ಜೀವಿಗಳು ಸೇರಿವೆ ಎಂದು ತಿಳಿಸಿದ್ದಾರೆ. ಜತೆಗೆ, ಅರ್ಜಿದಾರರು ತೂಕ ಕಳೆದುಕೊಂಡಿದ್ದಾರೆ. ಇದರಿಂದ ಕಾರಾಗೃಹದಲ್ಲಿ ವಿತರಣೆ ಮಾಡುತ್ತಿರುವ ಆಹಾರ ಸೇವನೆ ಮಾಡುವುದಕ್ಕೆ ಸಾಧ್ಯವಾಗದ ಪರಿಸ್ಥಿತಿಗೆ ತಲುಪಿಸಿದ್ದಾರೆ. ಹೀಗಾಗಿ ಮನೆ ಆಹಾರ ತರಿಸಿಕೊಳ್ಳುವುದಕ್ಕೆ ಅವಕಾಶ ನೀಡಬೇಕು ಎಂದು ಜೈಲು ಅಧಿಕಾರಿಗಳಿಗೆ ಈಗಾಗಲೇ ಮೌಖಿಕವಾಗಿ ಮನವಿ ಮಾಡಿದ್ದಾರೆ. ಆದರೆ, ಅಧಿಕಾರಿಗಳು ಹೈಕೋರ್ಟ್ ಆದೇಶವಿಲ್ಲದೇ, ಅರ್ಜಿದಾರರ ಕುಟುಂಬಸ್ಥರು ಮನೆಯಲ್ಲಿ ಸಿದ್ಧಪಡಿಸಿದ ಆಹಾರವನ್ನು ಒದಗಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ತಿಳಿಸಿ ನಿರಾಕರಿಸಿದ್ದಾರೆ. ಹಾಗಾಗಿ, ಅರ್ಜಿದಾರರು ದೊಡ್ಡ ಪ್ರಮಾಣವಾಗಿ ತೂಕ ಕಳೆದುಕೊಳ್ಳುತ್ತಿದ್ದಾರೆ. ಇದೇ ರೀತಿ ಮುಂದುವರೆದಲ್ಲಿ ಆರೋಗ್ಯ ಹದಗೆಡುವ ಸಾಧ್ಯತೆಯಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಮನೆಯೂಟ, ಹಾಸಿಗೆ, ಪುಸ್ತಕಗಳಿಗೆ ದರ್ಶನ್ ಅರ್ಜಿ: ಜೈಲಧಿಕಾರಿಗಳಿಗೆ ಹೈಕೋರ್ಟ್ ನೋಟಿಸ್ - High Court
ಅಲ್ಲದೇ, ಕರ್ನಾಟಕ ಬಂಧೀಖಾನೆ ಕಾಯ್ದೆ 1963 ರ ಸೆಕ್ಷನ್ 30ರ ಪ್ರಕಾರ ವಿಚಾರಣಾಧೀನ ಕೈದಿಗಳು ಹೊರಗಡೆಯಿಂದ ಆಹಾರ, ಬಟ್ಟೆ ಮತ್ತು ಹಾಸಿಗೆಯನ್ನು ಪಡೆದುಕೊಳ್ಳುವುದಕ್ಕೆ ಅವಕಾಶವಿದೆ. ಜತೆಗೆ, ಅರ್ಜಿದಾರರು ಅಪರಾಧಿಯಾಗಿಲ್ಲ. ಆದ್ದರಿಂದ, ಊಟ, ಹಾಸಿಗೆ, ಪುಸ್ತಕಗಳು ಮತ್ತು ಸುದ್ದಿಪತ್ರಿಕೆಗಳನ್ನು ಮನೆಯಿಂದ ತರಿಸಿಕೊಂಡಲ್ಲಿ ಸರ್ಕಾರದ ಖಜಾನೆಗೆ ಆಗುವ ವೆಚ್ಚವೂ ಕಡಿಮೆಯಾಗಲಿದೆ. ಅಲ್ಲದೇ, ಅರ್ಜಿದಾರರಿಗೆ ಮನೆ ಆಹಾರ ನೀಡದಿರುವ ಜೈಲು ಅಧಿಕಾರಿಗಳ ಕ್ರಮ ಅಮಾನವೀಯವಾಗಿದ್ದು, ಸಂವಿಧಾನದ ಪರಿಚ್ಛೇದ 21ರ ಬದುಕುವ ಹಕ್ಕು ಉಲ್ಲಂಘಿಸಿದಂತಾಗಲಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ: ಆರೋಪಿಗಳ ಸಿಸಿಟಿವಿ ದೃಶ್ಯಗಳು FSL, CID ತಾಂತ್ರಿಕ ಘಟಕಕ್ಕೆ ರವಾನೆ - Darshan Case
ಸರ್ಕಾರ ಸಲ್ಲಿಸಿರುವ ಆಕ್ಷೇಪಣೆಯಲ್ಲಿನ ಪ್ರಮುಖ ಅಂಶಗಳು : ರೇಣುಕಾಸ್ವಾಮಿ ಕೊಲೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಈ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಆರೋಗ್ಯವಾಗಿದ್ದಾರೆ. ಒಂದು ವೇಳೆ ಏನಾದರೂ ವ್ಯತ್ಯಯ ಉಂಟಾದರೆ ಜೈಲಿನಲ್ಲೇ ಉತ್ತಮ ಚಿಕಿತ್ಸಾ ಸೌಲಭ್ಯವಿದೆ. ಅಂತೆಯೇ, ಪ್ರತಿಯೊಬ್ಬ ಕೈದಿಯ ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕಾಂಶಯುಕ್ತ ಆಹಾರವನ್ನೇ ನೀಡಲಾಗುತ್ತಿದೆ ಎಂದು ವಿವರಿಸಲಾಗಿದೆ.
ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಕೈಪಿಡಿ-೨೦೨೧ರ ನಿಯಮ ೭೨೦ ಹಾಗೂ ೭೨೮ರ ಅನುಸಾರ ಕೊಲೆ ಪ್ರಕರಣದ ವಿಚಾರಣಾಧೀನ ಕೈದಿಗಳನ್ನು ಜೈಲಿನಲ್ಲಿ ವಿಶೇಷ ನಿಗಾದಲ್ಲಿಯೇ ಇರಿಸಬೇಕಾಗುತ್ತದೆ. ಅವರು ಪರಾರಿಯಾಗುವ ಅಥವಾ ಆತ್ಮಹತ್ಯೆಗೆ ಪ್ರಯತ್ನಿಸುವಂತಹ ಸಾಧ್ಯತೆಗಳಿರುತ್ತವೆ. ಇಂತಹವರಿಗೆ ಖಾಸಗಿಯಾಗಿ ಮನೆಯಿಂದ ಊಟ, ಬಟ್ಟೆ, ಹಾಸಿಗೆ, ಕುಡಿಯುವ ನೀರಿನ ಲೋಟ, ತಟ್ಟೆ, ಚಪ್ಪಲಿ, ಚಮಚ, ಫೋರ್ಕ್ ಹಾಗೂ ಇತರ ಅಗತ್ಯ ವಸ್ತುಗಳನ್ನು ತರಿಸಿಕೊಳ್ಳಲು ಅವಕಾಶವಿಲ್ಲ.
ಅಲ್ಲದೆ, ಬಂಧೀಖಾನೆ ಕಾಯಿದೆಯ ಪ್ರಕಾರ ಈ ರೀತಿಯ ಪ್ರಕರಣಗಳಲ್ಲಿ ಕೈದಿ ಮೊದಲು ಎಸ್ಪಿ, ಐಜಿಪಿಗೆ ಮನವಿ ಮಾಡಬೇಕು. ಅದನ್ನು ಹೊರತು ಪಡಿಸಿ ನೇರವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಪ್ರಕ್ರಿಯೆಯಲ್ಲಿ ಕಾನೂನು ಪಾಲನೆ ಆಗಿಲ್ಲ. ಆದ್ದರಿಂದ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೋರಲಾಗಿದೆ.
ದರ್ಶನ್, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದು, ಮ್ಯಾಜಿಸ್ಟ್ರೇಟ್ ನ್ಯಾಯಾಲದ ಆದೇಶದಂತೆ 12 ದಿನಗಳ ಪೊಲೀಸ್ ವಿಚಾರಣೆಯನ್ನು ಎದುರಿಸಿದ್ದಾರೆ. ಆ ಬಳಿಕ 2024ರ ಜೂನ್ 22ರಿಂದ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದ್ದು, ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾ ಕೈದಿಯಾಗಿದ್ದಾರೆ.