ಹೈದರಾಬಾದ್: ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದಲ್ಲಿ ಬೇಡಿಕೆ ನಟಿಯಾಗಿರುವ ಕನ್ನಡತಿ ರಶ್ಮಿಕಾ ಮಂದಣ್ಣ ಇದೇ ಫೆಬ್ರವರಿಯಲ್ಲಿ ವಿಜಯ ದೇವರಕೊಂಡ ಅವರ ಜೊತೆ ನಿಶ್ಚಿತಾರ್ಥಕ್ಕೆ ಮುಂದಾಗಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಸದ್ದು ಮಾಡಿದೆ. ಆದರೆ, ಈ ಬಗ್ಗೆ ಇಬ್ಬರೂ ಕೂಡ ಅಧಿಕೃತವಾಗಿ ತಿಳಿಸಿರಲಿಲ್ಲ. ಸದ್ಯ ಈ ವಿಷಯದ ಕುರಿತು ಮೌನ ಮುರಿದಿರುವ ನಟ ವಿಜಯ ದೇವರಕೊಂಡ ಇದೆಲ್ಲಾ ಗಾಳಿ ಸುದ್ದಿ, ಯಾವುದೇ ನಿಶ್ಚಿತಾರ್ಥ ಅಥವಾ ಮದುವೆಗೆ ನಾನು ಸಿದ್ಧನಿಲ್ಲ ಎಂದಿದ್ದಾರೆ.
ತಮ್ಮ ಮದುವೆ ವಿಚಾರ ಪದೇ ಪದೇ ಸುದ್ದಿಯಾಗುತ್ತಿರುವ ಕುರಿತು ಒತ್ತಡಕ್ಕೆ ಒಳಗಾಗಿರುವ ಅವರು ಈ ಕುರಿತು ಕೊಂಚ ಖಾರವಾಗಿ ಪ್ರತಿಕ್ರಿಯಿಸಿದ್ದು, ಮಾಧ್ಯಮಗಳು ಪ್ರತಿ ಎರಡು ವರ್ಷಕ್ಕೆ ಒಮ್ಮೆ ತಮ್ಮ ಮದುವೆ ಕುರಿತು ಈ ರೀತಿ ಬಿತ್ತರಿಸುತ್ತಲೇ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸದಾ ಸುದ್ದಿ ಮಾಡುತ್ತಲೇ ಇರುತ್ತದೆ. ಸದ್ಯ ಮದುವೆ, ನಿಶ್ಚಿತಾರ್ಥಕ್ಕೆ ನಾನು ಸಿದ್ಧನಿಲ್ಲ. ಸದ್ಯ ತಮ್ಮ ವೃತ್ತಿ ಜೀವನದತ್ತ ನನ್ನ ಗುರಿ ಹೊಂದಿದ್ದೇನೆ ಎಂದಿದ್ದಾರೆ.
ನಾನು ಫೆಬ್ರವರಿಯಲ್ಲಿ ಯಾವುದೇ ನಿಶ್ಚಿತಾರ್ಥ ಅಥವಾ ಮದುವೆಗೆ ಒಳಗಾಗುತ್ತಿಲ್ಲ. ಮಾಧ್ಯಮಗಳು ಪ್ರತಿ ಎರಡು ವರ್ಷಕ್ಕೆ ಒಮ್ಮೆ ಮದುವೆ ಮಾಡಲು ಮುಂದಾಗುತ್ತಿದ್ದಾರೆ. ಈ ಕುರಿತು ಪ್ರತಿ ವರ್ಷ ಸುದ್ದಿ ಹಬ್ಬುತ್ತದೆ. ಅವರು ಉದ್ದೇಶ ನನ್ನನ್ನು ಹಿಡಿದು ಮದುವೆ ಮಾಡಿಸಬೇಕು ಎಂಬುದಾಗಿದೆ ಎಂದು ವೆಬ್ಲಾಯ್ಡ್ಗೆ ವಿಜಯ್ ದೇವರಕೊಂಡ ಪ್ರತಿಕ್ರಿಯಿಸಿದ್ದಾರೆ.
2018ರಲ್ಲಿ ಗೀತಾ ಗೋವಿಂದ ಚಿತ್ರ ಬಿಡುಗಡೆಯಾದ ಬಳಿಕ ರಶ್ಮಿಕಾ ಮತ್ತು ವಿಜಯ್ ನಡುವೆ ಪ್ರೀತಿ ಇದೆ ಎಂಬ ಸುದ್ದಿ ಹೆಚ್ಚಿತು. ಆದರೆ, ತಮ್ಮ ಈ ಸಂಬಂಧದ ಕುರಿತು ಇಬ್ಬರೂ ಕೂಡ ಯಾವುದೇ ಹೇಳಿಕೆಯನ್ನು ನೀಡಿರಲಿಲ್ಲ. ಅಧಿಕೃತ ದೃಢೀಕರಣದ ಹೊರತಾಗಿ ಇವರಿಬ್ಬರು ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಇವರ ನಡುವಿನ ಸಂಬಂಧಕ್ಕೆ ಪುಷ್ಠಿ ನೀಡಿದ್ದರು.
ಸದ್ಯ ಈ ಇಬ್ಬರೂ ನಟರು ಸಿನಿ ಉದ್ಯಮದಲ್ಲಿ ತಮ್ಮ ಯಶಸ್ಸನ್ನು ಅನುಭವಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಸದ್ಯ ಹಿಂದಿ ಸಿನಿಮಾ 'ಅನಿಮಲ್' ಯಶಸ್ಸಿನಲ್ಲಿದ್ದು, ಇದೀಗ ಅಲ್ಲು ಅರ್ಜುನ್ ನಟನೆಯ ಬಹು ನಿರೀಕ್ಷಿತ 'ಪುಷ್ಪಾ 2' ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ 'ಗರ್ಲ್ಫ್ರೆಂಡ್' ಎಂಬ ಮತ್ತೊಂದು ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ತಮಿಳು- ತೆಲುಗು ಎರಡೂ ಭಾಷೆಯಲ್ಲೂ ನಿರ್ಮಾಣವಾಗುತ್ತಿರುವ 'ರೈನ್ಬೋ' ಎಂಬ ಪ್ರಾಜೆಕ್ಟ್ನಲ್ಲೂ ಕೆಲಸ ನಿರ್ವಹಿಸುತ್ತಿದ್ದಾರೆ.
ಇತ್ತ ವಿಜಯ್ ದೇವರಕೊಂಡ ಕಡೆಯದಾಗಿ ನಟಿ ಸಮಂತಾ ಜೊತೆಗೆ 'ಖುಷಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ಫ್ಯಾಮಿಲಿ ಸ್ಟಾರ್' ಅವರ ಮುಂದಿನ ಪ್ರಾಜೆಕ್ಟ್ ಆಗಿದ್ದು, ಇದರ ಜೊತೆಗೆ ಗೌತಮ್ ಅವರ ಮುಂದಿನ ಚಿತ್ರದಲ್ಲಿ ನಟಿಸಲಿದ್ದಾರೆ.
ಇದನ್ನೂ ಓದಿ: ಸೀರೆಯಲ್ಲಿ ಸರಳ ಸುಂದರಿ ರಶ್ಮಿಕಾ ಮಂದಣ್ಣ ಮಿಂಚಿಂಗ್!