ಕನ್ನಡ ಚಿತ್ರರಂಗಕ್ಕೆ 80 ವರ್ಷಗಳ ಇತಿಹಾಸವಿದೆ. ಸ್ಯಾಂಡಲ್‍ವುಡ್ ಕಳೆದ 5 ವರ್ಷಗಳಿಂದ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡುತ್ತಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಪ್ಯಾನ್ ಇಂಡಿಯಾ ಸಿನಿಮಾಗಳ ಸಂಸ್ಕೃತಿ ಹೆಚ್ಚಾಗುತ್ತಿದೆ. ಆದರೆ, ದೊಡ್ಡ ದೊಡ್ಡ ಸ್ಟಾರ್ಗಳು ಮೊದಲು ಕಡಿಮೆ ಬಜೆಟ್ನ ಸಿನಿಮಾ ಮಾಡುವಲ್ಲಿ ಬಹಳ ಉತ್ಸುಕರಾಗಿದ್ದರು. ಸದ್ಯ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿರುವುದರಿಂದ ಕಡಿಮೆ ಬಜೆಟ್ ಸಿನಿಮಾಗಳನ್ನು ಮಾಡುತ್ತಿಲ್ಲ ಎಂಬುದು ಚಿತ್ರರಂಗದಲ್ಲಿ ಕೆಲ ನಿರ್ಮಾಪಕರು ಹೇಳುತ್ತಿರುವ ಮಾತು. ಈ ಬಗ್ಗೆ ಪರ ವಿರೋಧ ಚರ್ಚೆ ಮುಂದುವರಿದಿದೆ. ಇದರ ಬೆನ್ನಲ್ಲೇ ನಾದಬ್ರಹ್ಮ ಹಂಸಲೇಖ ಪ್ಯಾನ್ ಇಂಡಿಯಾ ಸಿನಿಮಾ ಸಂಸ್ಕೃತಿ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಗೌರಿ' ಚಿತ್ರದ ಹಾಡು ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸಂಗೀತ ನಿರ್ದೇಶಕ ಹಂಸಲೇಖ, ಕನ್ನಡದ ನಟರು ಹನಿಮೂನ್ ನಂತೆ ಬೇರೆ ಭಾಷೆಗಳಿಗೆ ಹೋಗಿ ಬರಬಹುದೇ ಹೊರತು ಅಲ್ಲಿರುವುದಕ್ಕೆ ಸಾಧ್ಯವೇ ಇಲ್ಲ. ಹಾಗಾಗಿ ಕನ್ನಡದಲ್ಲಿ ಹೆಚ್ಚು ಚಿತ್ರಗಳನ್ನು ಮಾಡಿ ಎಂದು ಸ್ಟಾರ್ ನಟರಿಗೆ ಕಿವಿ ಮಾತು ಹೇಳಿದ್ದಾರೆ.
ಪ್ಯಾನ್ ಇಂಡಿಯಾ ಸಿನಿಮಾ ಸಂಸ್ಕೃತಿ ಬಗ್ಗೆ ಮಾತನಾಡಿ, ಪ್ಯಾನ್ ಇಂಡಿಯಾ ಸಿನಿಮಾದ ಹುಚ್ಚು ಬಂದು ಕನ್ನಡದ ಹೀರೋಗಳಿಗೆ ಕನ್ನಡದ ಬೇರುಗಳು ಕಟ್ ಆಗಿವೆ. ಇವರೆಲ್ಲಾ ಭಾರತದಾದ್ಯಂತದ ಸ್ಟಾರ್ ಡಮ್ ಭ್ರಮೆಯಲ್ಲಿದ್ದಾರೆ. ದಕ್ಷಿಣದಲ್ಲಿ ಯಾರಾದರೂ ಸುಂದರ ನಾಯಕಿಯರಿದ್ದರೆ, ಉತ್ತರ ಭಾರತದಲ್ಲಿ 20 ವರ್ಷ ಬದುಕಬಹುದೇ ಹೊರತು ರಜನಿಕಾಂತ್ ಆಗಲೀ, ಕಮಲ್ ಹಾಸನ್, ಮೋಹನ್ ಲಾಲ್, ಮಮ್ಮೂಟ್ಟಿ ಅವರುಗಳು ಮುಂಬೈನಲ್ಲಿ 2 ವರ್ಷ ಇರಲು ಸಾಧ್ಯವಿಲ್ಲ. ವಾಪಸ್ ಬಂದುಬಿಡ್ತಾರೆ. ನಮ್ಮ ಹೀರೋಗಳು ಹನಿಮೂನ್ ತರಹ ಹೋಗಿ ಪ್ಯಾನ್ ಇಂಡಿಯಾ ಎಲ್ಲಾ ಸುತ್ತಾಡಿಕೊಂಡು ಬರಬಹುದು. ಅದೆಲ್ಲೇ ಸುತ್ತಿದರೂ ಕೊನೆಗೆ ಕನ್ನಡಕ್ಕೆ ಬರಲೇಬೇಕು ಎಂದರು.
ಇದನ್ನೂ ಓದಿ: ಸ್ಯಾಂಡಲ್ವುಡ್ನ ಕಾಮಿಡಿ ಸ್ಟಾರ್ ಈಗ ಖಡಕ್ ವಿಲನ್: ಈ ನಟನನ್ನು ಗುರುತಿಸುವಿರೇ? - Villain role Photoshoot
ಇನ್ನೂ, ಕನ್ನಡ ಚಿತ್ರರಂಗವನ್ನು ಬೇರೆ ಯಾವ ಭಾಷೆಯ ಚಿತ್ರರಂಗದ ಜೊತೆ ಹೋಲಿಸುವುದಕ್ಕೂ ಸಾಧ್ಯವಿಲ್ಲ. ಏಕೆಂದರೆ ನಮ್ಮ ಪ್ರಾದೇಶಿಕ ಭಾಷೆಗೆ ಅದರದ್ದೇ ಆದ ಗೌರವ ಇದೆ. ಅದರಲ್ಲಿ ಕೇಳೋದಕ್ಕೆ ಬಹಳ ಅರ್ಥಗರ್ಭಿತವಾದ ಶೀರ್ಷಿಕೆ ಎಂದರೆ ಅದು ಸ್ಯಾಂಡಲ್‍ವುಡ್. ಅದನ್ನು ನಾವು ಅಚ್ಚಕನ್ನಡದಲ್ಲಿ ಚಂದನವನ ಎಂದು ಕರೆಯುತ್ತೇವೆ. ಸ್ಯಾಂಡಲ್‍ವುಡ್ ಅನ್ನು ಬೇರೆ ಯಾವುದೇ ವುಡ್ ಜೊತೆಗೆ ಹೋಲಿಸುವುದಕ್ಕೆ ಸಾಧ್ಯವಾ? ಬಾಲಿವುಡ್, ಕಾಲಿವುಡ್ ಏನೇನೋ ಇದೆ. ಅದ್ಯಾವುದರ ಜೊತೆಗೂ ಹೋಲಿಸಲು ಸಾಧ್ಯವೇ ಇಲ್ಲ.
ಇದನ್ನೂ ಓದಿ: 'ಮ್ಯಾಕ್ಸ್' ಆಟ ಶುರು: ಆ್ಯಕ್ಷನ್ ಅವತಾರದಲ್ಲಿ ಅಬ್ಬರಿಸಿದ ಅಭಿನಯ ಚಕ್ರವರ್ತಿ - Sudeep Max Teaser
ಏಕೆಂದರೆ ಸ್ಯಾಂಡಲ್‍ವುಡ್ ಅಂದರೆ ಅದೊಂದು ಪರಿಮಳ. ಗಂಧದ ಪರಿಮಳ. ಅದಕ್ಕೆ ಗಂಧದ ಮರದ ಗುಣಗಳಿವೆ. ಗಂಧದ ಮರ ಸುತ್ತ ಬೇರೆ 20-30 ಸಸಿ ನೆಟ್ಟರೆ ಮಾತ್ರ ಅದು ಉಳಿಯುತ್ತದೆ. ಎಲ್ಲರೊಳಗೂ ಒಳಗೊಂಡು ಬೆಳೆಯುವುದೇ ಸ್ಯಾಂಡಲ್‍ವುಡ್. ಒಬ್ಬರೇ ಬೆಳೆಯುವುದಲ್ಲ. ಎಲ್ಲರ ಜೊತೆಗೆ ಬೆಳೆಯುವುದು ಮುಖ್ಯ. ಇದಕ್ಕೊಂದು ಪರಂಪರೆ ಇದೆ. ಭಾಷೆಯಿಂದಲೇ ಕನ್ನಡ ಚಿತ್ರರಂಗವನ್ನು ಬೆಳೆಸಿದ ದೊಡ್ಡ ಪರಂಪರೆ ಇದೆ. ಆ ಪರಂಪರೆಯಿಂದ ಬಂದು ಪ್ಯಾನ್ ಇಂಡಿಯಾ ಅಂತಾ ಹೋದರೆ ಸ್ವಲ್ಪ ವ್ಯಾಪಾರ ಜಾಸ್ತಿ ಆಗುತ್ತೆ. ಆದರೆ ಹೆಚ್ಚು ದಿನ ಇರಲು ಆಗುವುದಿಲ್ಲ. ಹಾಗಾಗಿ ನಮ್ಮ ಕನ್ನಡದ ಸ್ಟಾರ್ ನಟರು ಒಳ್ಳೆ ಕಥೆಯನ್ನು ಇಟ್ಟುಕೊಂಡು ಕನ್ನಡ ಸಿನಿಮಾ ಮಾಡಲಿ ಎಂದು ಕಿವಿಮಾತು ಹೇಳಿದ್ದಾರೆ.