ಬೆಂಗಳೂರು: ನಟ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮ್ ಅವರ ಪಾರ್ಥೀವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿದ್ದು ಚಿತ್ರರಂಗ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಅಂತಿಮ ದರ್ಶನ ಪಡೆದಿದ್ದಾರೆ. ಇದೇ ವೇಳೆ ಬೆಳಗ್ಗೆ ಅಂತ್ಯಸಂಸ್ಕಾರ ನಡೆಸುವ ಸ್ಥಳದ ಸಲುವಾಗಿ ಛಲವಾದಿ ಮಹಾಸಭಾ ಸಂಘದವರು ಪ್ರತಿಭಟನೆ ನಡೆಸಿದರು.
ಕೆಂಗೇರಿಯ ಛಲವಾದಿ ಮಹಾಸಭಾದ ಆವರಣದಲ್ಲೇ ಕೆ.ಶಿವರಾಮ್ ಅಂತ್ಯಕ್ರಿಯೆ ನಡೆಸಬೇಕೆಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ. ಈ ಕುರಿತು ಬೆಂಬಲಿಗರು ಸರ್ಕಾರಕ್ಕೆ ಮನವಿ ಮಾಡಿದ್ದು, ಈವರೆಗೆ ಯಾವುದೇ ಅಧಿಕೃತ ಆದೇಶ ಬಂದಿಲ್ಲ. ಇದರಿಂದಾಗಿ ಶಿವರಾಮ್ ಕುಟುಂಬಸ್ಥರು ಬೇಸರಗೊಂಡಿದ್ದಾರೆ. ನಟ ದುನಿಯಾ ವಿಜಯ್ ಹಾಗೂ ಅಳಿಯ ಪ್ರದೀಪ್ ಅವರು ಸಿಎಂ ಸಿದ್ದರಾಮಯ್ಯರಿಗೆ ಈ ಬಗ್ಗೆ ಒತ್ತಾಯಿಸಿದ್ದಾರೆ.
ಐಎಎಸ್ ಮಾಡುವ ಕನಸಿರುವ ಯುವಜನತೆಗೆ ಸ್ಫೂರ್ತಿಯಾಗಿರುವ ಕೆ.ಶಿವರಾಮ್ ಅವರಿಗೆ ರಾಜ್ಯ ಸರ್ಕಾರ ಅಗೌರವ ತೋರುತ್ತಿದೆ ಎಂದು ಆರೋಪಿಸಿ ಪ್ರದೀಪ್ ಅಸಮಾಧಾನ ಹೊರಹಾಕಿದರು. ಅಭಿಮಾನಿಗಳು, ರಾಜ್ಯದ ಜನತೆ ಹೇಳುವ ಸ್ಥಳದಲ್ಲೇ ಅಂತ್ಯಸಂಸ್ಕಾರ ಮಾಡಲು ಸ್ಥಳಾವಕಾಶ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬೆಳಗ್ಗೆ ಶಿವರಾಮ್ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಸಂಸದ ಡಿ.ಕೆ.ಸುರೇಶ್, ''ಶಿವರಾಮ್ ರಾಮನಗರದ ಉರಳ್ಳಿಗ್ರಾಮದಿಂದ ಬಂದ ಹಳ್ಳಿ ಪ್ರತಿಭೆ. ನಮ್ಮದು ಮೂವತ್ತು ವರ್ಷಗಳ ಪರಿಚಯ. ಸದಾ ಬಡವರು, ದಲಿತರ ಪರವಾಗಿ ಕೆಲಸ ಮಾಡುತ್ತಿದ್ದರು. ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ವ್ಯಕ್ತಿತ್ವ ಅವರದ್ದು. ಛಲವಾದಿ ಭೂಮಿಯಲ್ಲಿ ಶಿವರಾಮ್ ಅಂತ್ಯಸಂಸ್ಕಾರ ನಡೆಸಲು ಸಿ.ಎಂ ಸಿದ್ದರಾಮಯ್ಯನವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅರ್ಧ ಗಂಟೆಯಲ್ಲಿ ಸರ್ಕಾರದಿಂದ ಆದೇಶ ಬರಲಿದೆ'' ಎಂದು ತಿಳಿಸಿದ್ದರು.
ಇದನ್ನೂ ಓದಿ: ಚಲನಚಿತ್ರೋತ್ಸವದಲ್ಲಿ ಸಿನಿಮಾರಂಗದ ಪರವಾಗಿ ಬೇಡಿಕೆ ಇಟ್ಟ ಧನಂಜಯ್: ಡಾಲಿ ಮಾತಿಗೆ ಸಿಎಂ ಸಮ್ಮತಿ
ಸಚಿವ ಪ್ರಿಯಾಂಕ್ ಖರ್ಗೆ ಕೂಡ ಶಿವರಾಮ್ ಅಂತಿಮ ದರ್ಶನ ಪಡೆದರು. ಈ ವೇಳೆ ಶಿವರಾಮ್ ಪತ್ನಿ ವಾಣಿ ಅಸಮಾಧಾನ ವ್ಯಕ್ತಪಡಿಸಿ, "ಯಾಕೆ ಬಂದ್ರು ಅವರು?, ದಯವಿಟ್ಟು ಕಳುಹಿಸಿ" ಎಂದರು. ಛಲವಾದಿ ಮಹಾಸಭಾದಲ್ಲಿ ಅಂತ್ಯಸಂಸ್ಕಾರ ಮಾಡಲು ಅನುಮತಿ ಕೊಟ್ಟಿಲ್ಲ ಎಂಬ ಕಾರಣಕ್ಕೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರವೀಂದ್ರ ಕಲಾಕ್ಷೇತ್ರದಲ್ಲಿ ಕೆ.ಶಿವರಾಮ್ ಅಂತಿಮ ದರ್ಶನ: ಚಿತ್ರರಂಗ, ರಾಜಕೀಯ ಗಣ್ಯರಿಂದ ಅಂತಿಮ ನಮನ
ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನ ನಡೆಯುತ್ತಿದ್ದು, ಅಂತ್ಯಕ್ರಿಯೆ ಸ್ಥಳದ ಮಾತುಕತೆ ಮುಂದುವರಿದಿದೆ. ಸಚಿವ ಹೆಚ್.ಸಿ.ಮಹಾದೇವಪ್ಪ ಅವರಿಗೂ ಈ ಕುರಿತು ಮನವಿ ಮಾಡಲಾಗಿದೆ. ಸಿಎಂ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದರು. ಸರ್ಕಾರ ಅನುಮತಿ ಕೊಟ್ಟರೆ ಕೆಂಗೇರಿಯಲ್ಲಿರುವ ಛಲವಾದಿ ಸಭಾಂಗಣದ ಆವರಣದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಇಲ್ಲವಾದಲ್ಲಿ ಬಿಡದಿಯಲ್ಲಿರುವ ಶಿವರಾಮ್ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ.