ಡ್ರೀಮ್ ವಾರಿಯರ್ ಪಿಕ್ಚರ್ಸ್ ಸಂಸ್ಥೆಯು ದಕ್ಷಿಣ ಭಾರತೀಯ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಲ್ಲಿ ಒಂದು. ಧೀರನ್, ಅರುವಿ, ಎನ್‌ಜಿಕೆ, ರಾಕ್ಷಸಿ, ಖೈದಿ, ಭೋಲಾ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳು ಈ ಸಂಸ್ಥೆಯಡಿ ನಿರ್ಮಾಣಗೊಂಡಿವೆ. ಇದೀಗ ಡ್ರೀಮ್ ವಾರಿಯರ್ ಪಿಕ್ಚರ್ಸ್ ಸಂಸ್ಥೆಯು ತಮಿಳಿನ ಸೂಪರ್ ಸ್ಟಾರ್ ಸೂರ್ಯ ಜೊತೆ ಕೈ ಜೋಡಿಸಿದೆ. ನಮ್ಮ ಸಂಸ್ಥೆಯಡಿ ಸೂರ್ಯ ಅವರ ಮುಂಬರುವ 45ನೇ ಚಿತ್ರ ನಿರ್ಮಾಣವಾಗಲಿದೆ ಡ್ರೀಮ್ ವಾರಿಯರ್ ಪಿಕ್ಚರ್ಸ್ ಹೇಳಿಕೊಂಡಿದೆ.
'ಮೂಕುತಿ ಅಮ್ಮನ್' ಮತ್ತು 'ವೀಟ್ಲ ವಿಶೇಷಂ' ಅಂತಹ ಸಾಮಾಜಿಕ ಜವಾಬ್ದಾರಿಯುತ ಚಿತ್ರಗಳನ್ನು ನಿರ್ದೇಶಿಸಿ ಹೆಸರುವಾಸಿಯಾಗಿರುವ ಆರ್‌ಜೆ ಬಾಲಾಜಿ ಅವರು ಸೂರ್ಯ ಅವರ 45ನೇ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಆರ್‌ಜೆ ಬಾಲಾಜಿ ಪ್ರಸ್ತುತ ಈ ಸಿನಿಮಾದ ಪ್ರೀ-ಪ್ರೊಡಕ್ಷನ್ ಕೆಲಸಲ್ಲಿ ಬ್ಯುಸಿಯಾಗಿದ್ದಾರೆ.
ಆರ್‌ಜೆ ಬಾಲಾಜಿ ಅವರ ಚಿತ್ರಕಥೆ ಇಷ್ಟಪಟ್ಟಿರುವ ಆಸ್ಕರ್ ವಿಜೇತ ಎ.ಆರ್.ರೆಹಮಾನ್ ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಲು ಸಮ್ಮತಿ ಸೂಚಿಸಿದ್ದಾರೆ. ಈ ಹಿಂದೆ ಸೂರ್ಯ ಹಾಗೂ ರೆಹಮಾನ್ 'ಸಿಲ್ಲುನು ಒರು ಕಾದಲ್', 'ಆಯುಧ ಎಳುತ್ತು' ಮತ್ತು '24'ನಂತಹ ಕ್ಲಾಸಿಕ್ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.
ಆರ್‌ಜೆ ಬಾಲಾಜಿ ಮತ್ತು ಡ್ರೀಮ್ ವಾರಿಯರ್ ಪಿಕ್ಚರ್ಸ್ ಈ ಪ್ರತಿಷ್ಠಿತ ಪ್ರಾಜೆಕ್ಟ್ಗೆ ಸೂರ್ಯ ಜೊತೆಗೆ ಹಲವು ದೊಡ್ಡ ತಾರಾಬಳಗ ಸೇರ್ಪಡೆಯಾಗಲಿದೆ. ನವೆಂಬರ್ 2024 ಶೂಟಿಂಗ್ ಹೊರಡಲಿರುವ ಚಿತ್ರತಂಡ 2025ರ ದ್ವಿತೀಯಾರ್ಧದಲ್ಲಿ ಬಹು ಭಾಷೆಗಳಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದೆ.
ಚಿತ್ರಕ್ಕೆ ತಾತ್ಕಾಲಿಕವಾಗಿ '45' ಎಂದು ಹೆಸರಿಡಲಾಗಿದೆ.
ಇದನ್ನೂ ಓದಿ: ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್' ಸಿನಿಮಾ ಶೀಘ್ರದಲ್ಲೇ ಒಟಿಟಿಗೆ