ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್ ಅಭಿನಯದ ಬಹುನಿರೀಕ್ಷಿತ 'ಕೋಟಿ' ಸಿನಿಮಾ ಇಂದು ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಚೆನ್ನೈ ಮತ್ತು ಹೈದರಾಬಾದ್ನಲ್ಲೂ ಹಲವು ಶೋಗಳಿವೆ. ನಿನ್ನೆ, ಮೊನ್ನೆ ಬೆಂಗಳೂರು, ಮೈಸೂರು, ಶಿವಮೊಗ್ಗಗಳಲ್ಲಿ ಹೌಸ್‌ಫುಲ್ ಪೇಯ್ಡ್ ಪ್ರೀಮಿಯರ್ ಶೋಗಳು ನಡೆದಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಂದೂ ಕೂಡ ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸಿದವರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಬಹುತೇಕ ಮೆಚ್ಚುಗೆ ವ್ಯಕ್ತವಾಗಿದ್ದು, 'ಕೋಟಿ' ಕೋಟಿ ಗೆಲ್ಲುವ ಭರವಸೆ ಮೂಡಿಸಿದೆ.
ಧನಂಜಯ್ ಕೋಟಿ ಎಂಬ ಸಾಮಾನ್ಯ ಡ್ರೈವರ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಯಾರಿಗೂ ಮೋಸ ಮಾಡದೇ ಒಂದು ಕೋಟಿ ರೂಪಾಯಿ ಸಂಪಾದಿಸಿ, ಉತ್ತಮ ಜೀವನ ಸಾಗಿಸುವ ಆಸೆ ಆತನದ್ದು. ಕುಟುಂಬಸ್ಥರೆಲ್ಲರೂ ಒಟ್ಟಾಗಿ ಕುಳಿತು ನೋಡಬಹುದಾದ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಚಿತ್ರವಿದು.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸೆಲೆಬ್ರಿಟಿ ಪ್ರೀಮಿಯರ್ ಶೋನಲ್ಲಿ ಕನ್ನಡ ತಾರೆಯರು ಈ ಸಿನಿಮಾ ವೀಕ್ಷಿಸಿದರು. ಸಿನಿಮಾದಲ್ಲಿನ ಧನಂಜಯ್ ಅವರ ಕಾಮನ್ ಮ್ಯಾನ್ ಪಾತ್ರದ ಅಭಿನಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಯಿತು. ಥಿಯೇಟರ್ನ ಹೊರಗೂ ಸಿನಿಮಾ ಕ್ಲೈಮ್ಯಾಕ್ಸ್ ನೆರೆದಿದ್ದ ಜನರ ಮಾತಿನ ವಿಷಯವಾಗಿತ್ತು. ಇಂದು ರಾಜ್ಯದಲ್ಲಿ ತೆರೆಕಂಡಿರುವ ಕೋಟಿ ಮುಂದಿನ ದಿನಗಳಲ್ಲಿ ವಿದೇಶಗಳಲ್ಲೂ ತೆರೆಕಾಣಲಿದೆ. ರಿಲೀಸ್‌ಗೂ ಮುನ್ನವೇ ಸಾಕಷ್ಟು ಸದ್ದು ಮಾಡಿರುವ 'ಕೋಟಿ' ಕನ್ನಡ ಚಿತ್ರರಂಗದಲ್ಲಿ ಗೆಲುವಿನ ಭರವಸೆ ಮೂಡಿಸಿದೆ.
ಡಾಲಿ ಧನಂಜಯ್ಗೆ ಜೋಡಿಯಾಗಿ ಮೋಕ್ಷಾ ಕುಶಾಲ್ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ಅಭಿನಯಿಸಿದ್ದಾರೆ. ರಂಗಾಯಣ ರಘು, ತಾರಾ, ಸರ್ದಾರ್ ಸತ್ಯ, ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಸೇರಿದಂತೆ ಹಲವರು ಚಿತ್ರದ ತಾರಾ ಬಳಗದಲ್ಲಿದ್ದಾರೆ.
ಚಿತ್ರದಲ್ಲಿ ಐದು ಹಾಡುಗಳಿದ್ದು, ವಾಸುಕಿ ವೈಭವ್ ರಾಗ ಸಂಯೋಜಿಸಿದ್ದಾರೆ. ಯೋಗರಾಜ್ ಭಟ್ ಮತ್ತು ವಾಸುಕಿ ವೈಭವ್ ಸಾಹಿತ್ಯವಿದೆ. ಹಿನ್ನೆಲೆ ಸಂಗೀತ 777 ಚಾರ್ಲಿ ಖ್ಯಾತಿಯ ನೊಬಿನ್ ಪೌಲ್ ಅವರದ್ದು. ಸೂಪರ್ ಹಿಟ್ ಕಾಂತಾರ ಸಿನಿಮಾ ಕೆಲಸಕ್ಕೆ ಪ್ರಶಂಸೆ ಗಳಿಸಿದ್ದ ಪ್ರತೀಕ್ ಶೆಟ್ಟಿಯವರು ಕೋಟಿಯ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಅವರು ಈ ಸಿನಿಮಾದ ಕ್ಯಾಮರಾಮ್ಯಾನ್. ಜಿಯೋ ಸ್ಟುಡಿಯೋಸ್ ನಿರ್ಮಾಣದ ಈ ಚಿತ್ರಕ್ಕೆ ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಡಾಲಿಯ 'ಕೋಟಿ' ಪ್ರೀಮಿಯರ್ ಶೋ; ಸ್ಯಾಂಡಲ್ವುಡ್ ಗಣ್ಯರ ಮೆಚ್ಚುಗೆ - Kotee Movie