ಬೆಂಗಳೂರು: ಮಹಿಳೆಯರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದಡಿ ನಟ ದರ್ಶನ್ ವಿರುದ್ಧ ಮಹಿಳೆಯರ ಗುಂಪೊಂದು ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. ಇಂದು ಠಾಣೆ ಬಳಿ ಜಮಾಯಿಸಿದ ವಿವಿಧ ಸಂಘಟನೆಗಳ 50ಕ್ಕೂ ಹೆಚ್ಚಿನ ಮಹಿಳೆಯರ ಗುಂಪೊಂದು ಕನ್ನಡದ ಜನಪ್ರಿಯ ನಟನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಿದೆ.
ಇತ್ತೀಚಿಗೆ ತೆರೆಕಂಡ 'ಕಾಟೇರ' ಸಿನಿಮಾದ ಯಶಸ್ಸು ಹಾಗೂ ಚಿತ್ರರಂಗದಲ್ಲಿ ನಟ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಫೆಬ್ರವರಿ 17ರಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಬೆಳ್ಳಿ ಪರ್ವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ನಿರ್ಮಲಾನಂದ ಸ್ವಾಮೀಜಿ, ವಿನಯ್ ಗುರೂಜಿ, ಸಂಸದೆ ಸುಮಲತಾ ಅಂಬರೀಶ್, ನಟರಾದ ವಿನೋದ್ ರಾಜ್, ಪ್ರೇಮ್ ಸೇರಿದಂತೆ ಸಾಕಷ್ಟು ಗಣ್ಯರು ಆಗಮಿಸಿದ್ದರು. ಆ ಸಂದರ್ಭ ಮಹಿಳೆಯರ ಕುರಿತು ನೀಡಿದ್ದರು ಎನ್ನಲಾದ ಹೇಳಿಕೆಗೆ ಖಂಡನೆ ವ್ಯಕ್ತವಾಗುತ್ತಿದೆ.
ಮಹಿಳೆಯರು ಸಲ್ಲಿಸಿರುವ ದೂರಿನಲ್ಲಿರುವ ವಿಚಾರಗಳಿವು: ''ರಾಜ್ಯದಲ್ಲಿ ಜನಪ್ರಿಯ ನಟನಾಗಿರುವ ದರ್ಶನ್ ಅವರು ಹಲವು ಬಾರಿ ಮಹಿಳೆಯರಿಗೆ ಅವಮಾನ ಆಗುವ ರೀತಿಯಲ್ಲಿ ಮಾತನಾಡಿದ್ದಾರೆ. ಕೆಲ ಸಂದರ್ಶನಗಳಲ್ಲಿ, ವೇದಿಕೆಗಳಲ್ಲಿ ಅವಹೇಳನಾಕಾರಿ ಹೇಳಿಕೆ ನೀಡಿದ್ದಾರೆ. ಇದನ್ನೆಲ್ಲವನ್ನು ಬಹಳ ದಿನಗಳಿಂದ ಸಹಿಸಿಕೊಂಡು ಬಂದ ನಮಗೆ ಇನ್ನು ಮುಂದೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಶ್ರೀರಂಗಪಟ್ಟಣದಲ್ಲಿ 25ನೇ ವರ್ಷದ ಬೆಳ್ಳಿ ಪರ್ವ ಸಂಭ್ರಮದಲ್ಲಿ ದರ್ಶನ್ ಅವರು ಮಹಿಳೆಯರಿಗೆ ಅವಮಾನವಾಗುವ ರೀತಿಯಲ್ಲಿ ಮಠಾಧೀಶರು, ಗಣ್ಯ ವ್ಯಕ್ತಿಗಳು ಹಾಗೂ ಸಾರ್ವಜನಿಕರ ನಡುವೆ ಹೀಗೆ ಮಾತನಾಡಿದ್ದಾರೆ. ಈ ರೀತಿ ಪದೇ ಪದೇ ಹೇಳಿಕೆ ನೀಡಿ ಮಹಿಳೆಯರಿಗೆ ಮಾನಸಿಕವಾಗಿ ತೊಂದರೆ ನೀಡುತ್ತಿರುವ ನಟನ ವಿರುದ್ಧ ಸೂಕ್ತವಾದ ಕಾನೂನು ಕ್ರಮ ಜರುಗಿಸಿ ಬಂಧಿಸಬೇಕು'' ಎಂದು ದೂರಿನ ಮೂಲಕ ಆಗ್ರಹಿಸಲಾಗಿದೆ.
ಆರ್.ಆರ್ ನಗರ ಠಾಣೆಯಲ್ಲಿಯೂ ಎರಡು ದೂರುಗಳು ಸಲ್ಲಿಕೆಯಾಗಿವೆ. ಕರ್ನಾಟಕ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆ ಪರವಾಗಿ ಗಣೇಶ್ ಗೌಡ ಹಾಗೂ ಜಗದೀಶ್ ಎನ್ನುವವರು ಠಾಣಾ ಮೆಟ್ಟಿಲೇರಿದ್ದು ನಟ ದರ್ಶನ್ ವಿರುದ್ಧ ದೂರು ಸಲ್ಲಿಸಿದ್ದಾರೆ.
ಇದನ್ನೂ ಓದಿ: 'ಫಾರ್ ರಿಜಿಸ್ಟ್ರೇಷನ್' ರಿಲೀಸ್: ಭಾರಿ ಮೊತ್ತಕ್ಕೆ ತೆಲುಗು ಡಬ್ಬಿಂಗ್ ರೈಟ್ಸ್ ಸೇಲ್
ಮಹಿಳೆಯರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂಬ ಆರೋಪದಡಿ ನಟ ದರ್ಶನ್ ವಿರುದ್ಧ ಮಹಿಳಾ ಆಯೋಗಕ್ಕೆ ನಿನ್ನೆ ಕೂಡಾ ದೂರು ಸಲ್ಲಿಕೆಯಾಗಿದೆ. ಗೌಡತಿಯರ ಸೇನೆ ಹೆಸರಿನ ಮಹಿಳಾ ಸಂಘಟನೆಯೊಂದು ನಟನ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿತ್ತು.
’’ಈ ನಾಯಕ ಯುವಜನತೆಗೆ ನೀಡುತ್ತಿರುವ ಸಂದೇಶವೇನು ಎನ್ನುವುದರ ಬಗ್ಗೆ ಸ್ಪಷ್ಟನೆ ನೀಡಿ, ಕ್ಷಮೆ ಕೇಳಬೇಕು. ದರ್ಶನ್ ಸಂಪೂರ್ಣವಾಗಿ ಬದಲಾಗಬೇಕು. ತೆರೆಯ ಮೇಲೆ ಹೆಣ್ಣು ಮಕ್ಕಳನ್ನು ಗೌರವಿಸುವಂತೆ ತೆರೆಯ ಹಿಂದೆಯೂ ಗೌರವಿಸಬೇಕು. ಈ ನಿಟ್ಟಿನಲ್ಲಿ ಮಹಿಳಾ ಆಯೋಗ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಮುಂದೆ ಸಾರ್ವಜನಿಕವಾಗಿ ಈ ರೀತಿ ಮಾತನಾಡದಂತೆ ಎಚ್ಚರಿಕೆ ನೀಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ" ಎಂದು ದೂರಿನ ಮೂಲಕ ಗೌಡತಿಯರ ಸೇನೆ ಎಚ್ಚರಿಕೆ ನೀಡಿತ್ತು.