ದುನಿಯಾ ವಿಜಯ್ ನಟಿಸಿ, ನಿರ್ದೆಶಿಸಿರುವ 'ಭೀಮ' ಸಿನಿಮಾ ಪ್ರೇಕ್ಷಕರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಎಲ್ಲೆಡೆ ಉಲ್ಭಣಗೊಂಡಿರುವ ಗಾಂಜಾ, ಡ್ಸಗ್ಸ್ ವಿಚಾರವನ್ನು ಈ ಚಿತ್ರ ಒಳಗೊಂಡಿದೆ. ಯುವಕರೂ ಸೇರಿದಂತೆ ಸಮಾಜಕ್ಕೊಂದು ಸಂದೇಶ ಸಾರುವ ಚಿತ್ರಕ್ಕೆ ಬಹುತೇಕ ಮೆಚ್ಚುಗೆ ವ್ಯಕ್ತವಾಗಿದೆ. ಡ್ಸಗ್ಸ್ ದಂಧೆ ಮಟ್ಟಹಾಕುವ ಪ್ರಯತ್ನದಲ್ಲಿ ನಾಯಕ ನಟ ದುನಿಯಾ ವಿಜಯ್ ಕೂಡ ತಮ್ಮ ಕೈ ಜೋಡಿಸಿದ್ದಾರೆ. ಇದೀಗ, ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿರುವ ವಿಡಿಯೋವೊಂದನ್ನು ಅವರನ್ನು ಹಂಚಿಕೊಂಡಿದ್ದಾರೆ.
''ವಿಜಯ್ ನಾಯಕತ್ವದ ಭೀಮ ಚಿತ್ರವು ಮುಖ್ಯವಾಗಿ ಯುವಜನತೆಯ ದೃಷ್ಠಿಯಿಂದ ಮಾಡಿರುವಂತಹದು. ಬಹಳಷ್ಟು ಯುವಕ, ಯುವತಿಯರು ಮಾದಕವಸ್ತು ಹಾವಳಿಗೆ ಬಲಿಯಾಗಿ, ತಮ್ಮ ಭವಿಷ್ಯ ಹಾಳುಮಾಡಿಕೊಳ್ಳುವಂತಹ ಅನೇಕ ಸನ್ನಿವೇಶಗಳನ್ನು ನೋಡುತ್ತಿದ್ದೇವೆ. ಈ ಚಿತ್ರದ ಉದ್ದೇಶ, ಯುವ ಸಮೂಹ ಡ್ರಗ್ಸ್ ಹಾವಳಿಯಿಂದ ದೂರವಿದ್ದು, ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕೆನ್ನುವಂಥದ್ದು. ಅದು ಸಫಲವಾದರೆ, ಸಿನಿಮಾ ಮಾಡಿದ್ದಕ್ಕೂ ಸಾರ್ಥಕ ಎಂದು ನನಗನಿಸುತ್ತದೆ. ದುನಿಯಾ ವಿಜಯ್ ಅವರು ಇಂಥ ಒಂದು ಸಿನಿಮಾವನ್ನು ಮಾಡಿರುವಂಥದ್ದು ಬಹಳ ಒಳ್ಳೆಯ ವಿಚಾರ, ಸಮಾಜದ ದೃಷ್ಟಿಯಿಂದಲೂ ಮತ್ತು ಯುವ ಸಮೂಹದ ದೃಷ್ಟಿಯಿಂದಲೂ. ಇದು ಯಶಸ್ವಿಯಾಗ್ಲಿ ಎಂದು ನಾನು ಪ್ರಾರ್ಥಿಸುತ್ತೇನೆ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾರೈಸಿದ್ದಾರೆ.
ಭೀಮ ಚಿತ್ರದ ನಾಯಕ ನಟ ಮತ್ತು ನಿರ್ದೇಶಕರೂ ಆಗಿರುವ ದುನಿಯಾ ವಿಜಯ್ ಮುಖ್ಯಮಂತ್ರಿ ಅವರೊಂದಿಗೆ ಸ್ವತಃ ಈ ವಿಡಿಯೋ ಪಡೆದು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್ಗೆ ಥ್ಯಾಂಕ್ ಯೂ ಸಿದ್ದರಾಮಯ್ಯ ಸರ್ ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ. ವಿಡಿಯೋ ಕೊನೆಯಲ್ಲಿ ವಿಜಯ್ ಕೈಮುಗಿಯುತ್ತಾ, ಧನ್ಯವಾದಗಳು ಸರ್ ಎಂದು ಸಿಎಂ ಪಾದ ಸ್ಪರ್ಶಿಸಿ ಆಶೀರ್ವಾದ ಪಡೆಯುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ: 'ಪ್ರಶಸ್ತಿ ಜವಾಬ್ದಾರಿ ಹೆಚ್ಚಿಸಿದೆ'; ಯಶ್, ವಿಕ್ರಮ್ ಕರೆಮಾಡಿ ವಿಶ್ ಮಾಡಿದ್ರು: ರಿಷಬ್ ಶೆಟ್ಟಿ - Rishab Shetty
ಕಳೆದ ಶುಕ್ರವಾರ ತೆರೆಗಪ್ಪಳಿಸಿದ 'ಭೀಮ' ಸಿನಿಮಾ ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಂಡಿದೆ. ಬಾಕ್ಸ್ ಆಫೀಸ್ನಲ್ಲೂ ಉತ್ತಮ ವ್ಯವಹಾರ ನಡೆಸಿದೆ. ಹಾಗಾಗಿ ಇತ್ತೀಚೆಗಷ್ಟೇ ಚಿತ್ರತಂಡ ಸಕ್ಸಸ್ ಮೀಟ್ ಹಮ್ಮಿಕೊಂಡಿತ್ತು. ಅಂದು ಕಾರ್ಯಕ್ರಮದಲ್ಲಿ ಮಾತನಾಡಿದ್ದ ಚಿತ್ರದ ನಾಯಕ ನಟ ಡ್ರಗ್ಸ್ನಿಂದಾಗಿ ಹೆಚ್ಚಿನವರು ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ದಾಖಲೆಗಳಿದ್ದು, ಪೊಲೀಸರ ಗಮನಕ್ಕೆ ತರುತ್ತೇನೆ. ಹಾಗೆಯೇ, ಗೃಹ ಮಂತ್ರಿಗಳಿಗೂ ಮಾಹಿತಿ ನೀಡುತ್ತೇನೆಂದು ಹೇಳಿದ್ದರು. ದಾಖಲೆಯ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುವುದಕ್ಕೆ ಕೆಲ ಗಾಂಜಾ ಮಾಫಿಯಾದವರು ಫೋನ್ ಮೂಲಕ ನನಗೆ ಬೆದರಿಕೆ ಹಾಕುತ್ತಿದ್ದಾರೆ. ಯಾವುದೇ ಬೆದರಿಕೆಗಳಿಗೆ ಹೆದರಲ್ಲ. ಯುವಕ, ಯುವತಿಯರ ರಕ್ಷಣೆಯ ದೃಷ್ಟಿಯಿಂದ ನನ್ನದೊಂದು ಪ್ರಯತ್ನವಿದು ಎಂದು ತಿಳಿಸಿದ್ದರು.
ಸದ್ಯ ಸಿಎಂ ಸಿದ್ದರಾಮಯ್ಯ ಅವರ ಜೊತೆಗಿರುವ ವಿಡಿಯೋವನ್ನು ಬಹುತೇಕರು ಮೆಚ್ಚಿಕೊಂಡು, ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ರಿಯಲ್ ಹೀರೋ, ಇಂಥ ನಟ ನಮಗೆ ಬೇಕು ಎಂದೆಲ್ಲಾ ಕಾಮೆಂಟ್ಗಳು ಹರಿದುಬಂದಿವೆ.