ಲಾಸ್ ಏಂಜಲೀಸ್: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭಾರಿ ಪ್ರಮಾಣದ ಕಾಡ್ಗಿಚ್ಚು ಸಂಭವಿಸಿದೆ. ಕೆಟ್ಟ ಹವಾಮಾನದಿಂದಾಗಿ ದಕ್ಷಿಣ ಕ್ಯಾಲಿಫೋರ್ನಿಯಾ ಪ್ರದೇಶದಲ್ಲಿ ಉದ್ಭವಿಸಿರೋ ಭೀಕರ ಕಾಡ್ಗಿಚ್ಚಿನ ಹಿನ್ನೆಲೆ, ಜನವರಿ 17 ರಂದು ನಿಗದಿಯಾಗಿದ್ದ 97ನೇ ಅಕಾಡೆಮಿ ಪ್ರಶಸ್ತಿಗಳ ನಾಮನಿರ್ದೇಶನ ಪ್ರಕಟಣೆಯನ್ನು ಜನವರಿ 19ಕ್ಕೆ ಮುಂದೂಡಲಾಗಿದೆ.
ವರದಿ ಪ್ರಕಾರ, ದಿನಾಂಕ ಬದಲಾವಣೆಗಳ ಕುರಿತು ಅಕಾಡೆಮಿ ಸಿಇಒ ಬಿಲ್ ಕ್ರಾಮರ್ ಅವರಿಂದ ಸದಸ್ಯರಿಗೆ ಬುಧವಾರ ಮಧ್ಯಾಹ್ನ ಇಮೇಲ್ ಕಳುಹಿಸಲಾಗಿದೆ.
ರೇಸ್ನಲ್ಲಿದೆ ಭಾರತದ 5 ಸಿನಿಮಾಗಳು: ದಕ್ಷಿಣ ಚಿತ್ರರಂಗದ ಖ್ಯಾತ ನಟ ಸೂರ್ಯ ಹಾಗೂ ಬಾಲಿವುಡ್ ಸೂಪರ್ ಸ್ಟಾರ್ ಬಾಬಿ ಡಿಯೋಲ್ ಅಭಿನಯದ 'ಕಂಗುವ' ಚಿತ್ರ 2025ರ ಆಸ್ಕರ್ ಪ್ರಶಸ್ತಿಗೆ ಪ್ರವೇಶ ಪಡೆದುಕೊಂಡಿದೆ. ಕಂಗುವ ಜೊತೆಗೆ, ಭಾರತೀಯ ಚಿತ್ರಗಳಾದ ಗರ್ಲ್ಸ್ ವಿಲ್ ಬಿ ಗರ್ಲ್ಸ್, ಆಡುಜೀವಿತಂ (ದಿ ಗೋಟ್ ಲೈಫ್ - ಹಿಂದಿ), ಸಂತೋಷ್, ಸ್ವಾತಂತ್ರ್ಯ ವೀರ್ ಸಾವರ್ಕರ್ ಮತ್ತು ಆಲ್ ವಿ ಇಮ್ಯಾಜಿನ್ ಆ್ಯಸ್ ಲೈಟ್ (ಮಲಯಾಳಂ+ಹಿಂದಿ) ಸಹ ಈ ರೇಸ್ನಲ್ಲಿದೆ.
"ದಕ್ಷಿಣ ಕ್ಯಾಲಿಫೋರ್ನಿಯಾದಾದ್ಯಂತ ಸಂಭವಿಸಿರೋ ವಿನಾಶಕಾರಿ ಕಾಡ್ಗಿಚ್ಚಿನಿಂದ ಹಾನಿಗೊಳಗಾದವರಿಗೆ ನಮ್ಮ ಸಂತಾಪಗಳು. ನಮ್ಮ ಅನೇಕ ಸದಸ್ಯರು ಮತ್ತು ಇಂಡಸ್ಟ್ರಿ ಸಹೋದ್ಯೋಗಿಗಳು ಲಾಸ್ ಏಂಜಲೀಸ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ, ಜೊತೆಗೆ ಕೆಲಸ ಮಾಡುತ್ತಿದ್ದಾರೆ ಮತ್ತು ನಾವು ನಿಮ್ಮ ಬಗ್ಗೆ ಯೋಚಿಸುತ್ತಿದ್ದೇವೆ" ಎಂದು ಇಮೇಲ್‌ನಲ್ಲಿ ತಿಳಿಸಲಾಗಿದೆ.
ಆಸ್ಕರ್ ನಾಮನಿರ್ದೇಶನ ಮತದಾನದ ಗಡುವನ್ನು ಎರಡು ದಿನಗಳವರೆಗೆ ಅಂದರೆ ಜನವರಿ 14ರವರೆಗೆ ವಿಸ್ತರಿಸಲಾಗಿದೆ. ಸುಮಾರು 10,000 ಅಕಾಡೆಮಿ ಸದಸ್ಯರಿಗೆ ಮತದಾನವು ಜನವರಿ 8ರಂದು ಪ್ರಾರಂಭವಾಯಿತು ಮತ್ತು ಮೂಲತಃ ಜನವರಿ 12 ರಂದು ಮುಕ್ತಾಯಗೊಳ್ಳಲು ನಿರ್ಧರಿಸಲಾಗಿತ್ತು. ಇದೀಗ ಮತದಾನದ ಪ್ರಕ್ರಿಯೆಯನ್ನು ಜನವರಿ 14ರವರೆಗೆ ವಿಸ್ತರಿಸಲಾಗಿದೆ.
ಮಾರ್ಚ್ 2ರಂದು ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿರುವ 2025ರ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕ್ಯಾನನ್ ಒ'ಬ್ರೇನ್ ಹೋಸ್ಟ್ ಮಾಡಲಿದ್ದಾರೆ.
ಇದನ್ನೂ ಓದಿ: ಬಾಕ್ಸ್ ಆಫೀಸ್ನಲ್ಲಿ ಮುಗ್ಗರಿಸಿದ್ರೂ ಆಸ್ಕರ್ಗೆ ಎಂಟ್ರಿ; ಇದು ಸೂರ್ಯ ನಟನೆಯ 'ಕಂಗುವ' ಸಾಧನೆ
ಅಮೆರಿಕ ಮಾಧ್ಯಮಗಳ ಪ್ರಕಾರ, ಬುಧವಾರ ರಾತ್ರಿ ಹಾಲಿವುಡ್ ಹಿಲ್ಸ್‌ನಲ್ಲಿ ಅಗ್ನಿ ಕಾಣಿಸಿಕೊಂಡು, ಹರಡಿತು. ಪರಿಣಾಮ, ಐದು ಜನರು ಪ್ರಾಣ ಕಳೆದುಕೊಂಡಿದ್ದಾರೆ. 100,000 ಜನರನ್ನು ಸ್ಥಳಾಂತರಿಸಲಾಗಿದೆ. ಅಗ್ನಿ ನಂದಿಸಲು ಅಗ್ನಿಶಾಮಕ ದಳದವರು ಹೋರಾಡುತ್ತಿದ್ದಾರೆ.
ಇದನ್ನೂ ಓದಿ: ಕ್ರಿಕೆಟರ್ ಚಹಾಲ್ ಡಿವೋರ್ಸ್ ವದಂತಿ: ಕೊನೆಗೂ ಮೌನ ಮುರಿದ ಪತ್ನಿ ಧನಶ್ರೀ ವರ್ಮಾ
ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿದ್ದ ಹಾಲಿವುಡ್ ಸೆಲೆಬ್ರಿಟಿಗಳಾದ ಬಿಲ್ಲಿ ಕ್ರಿಸ್ಟಲ್, ಮ್ಯಾಂಡಿ ಮೂರ್, ಪ್ಯಾರಿಸ್ ಹಿಲ್ಟನ್ ಮತ್ತು ಕ್ಯಾರಿ ಎಲ್ವೆಸ್ ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ.