ಮಹಾರಾಷ್ಟ್ರ: ಬಾಲಿವುಡ್ ನಟ ಗೋವಿಂದ ಅರುಣ್ ಅಹುಜಾ ಮತ್ತೊಮ್ಮೆ ರಾಜಕೀಯ ಪ್ರವೇಶಿಸಲು ಸಜ್ಜಾಗಿದ್ದಾರೆ. ಇತ್ತೀಚೆಗೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ವರ್ಷಾ ನಿವಾಸದಲ್ಲಿ ಭೇಟಿ ಆಗಿದ್ದರು. ವಾಯವ್ಯ ಕ್ಷೇತ್ರದಿಂದ ಗೋವಿಂದ ಸ್ಪರ್ಧೆಗಿಳಿಯುವ ಚರ್ಚೆ ನಡೆಯುತ್ತಿದೆ. ಆದ್ರೆ, ಶಿಂಧೆ ಬಣದಿಂದ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಲೋಕಸಮರಕ್ಕೆ ಮುಹೂರ್ತ ನಿಗದಿ ಆಗಿದೆ. ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದ ಚುನಾವಣೆ ಏಪ್ರಿಲ್ 19ಕ್ಕೆ ಆರಂಭ ಆದರೆ, ಜೂನ್ 1ರ ವರೆಗೆ ಮತದಾನ ನಡೆಯಲಿದ್ದು, ಜೂನ್ 4ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ವಿವಿಧ ಪಕ್ಷಗಳು ಒಂದರ ಹಿಂದೆ ಒಂದರಂತೆ ತಮ್ಮ ಅಭ್ಯರ್ಥಿಗಳನ್ನು ಘೋಷಿಸುತ್ತಿವೆ. ಬಹುತೇಕ ಕ್ಷೇತ್ರಗಳಿಗೆ ಅಭ್ಯರ್ಥಿಗಳು ಅಂತಿಮವಾಗಿದ್ದಾರೆ. ಇದೀಗ ಮುಂಬೈನ ವಾಯವ್ಯ ಕ್ಷೇತ್ರಕ್ಕೆ ಬಾಲಿವುಡ್ ನಟ ಗೋವಿಂದ ಹೆಸರು ಕೇಳಿಬರುತ್ತಿದ್ದು, ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.
ಗೋವಿಂದ ರಾಜಕೀಯ ಜೀವನ: ಹಿಂದಿ ಚಿತ್ರರಂಗದಲ್ಲಿ ಬಹುಸಮಯದಿಂದ ಗುರುತಿಸಿಕೊಂಡಿರುವ ಗೋವಿಂದ 2004ರಲ್ಲಿ ಉತ್ತರ ಮುಂಬೈ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಬಿಜೆಪಿಯ ರಾಮ್ ನಾಯ್ಕ್ ವಿರುದ್ಧ ಸ್ಪರ್ಧಿಸಿದ್ದರು. ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧೆಗಿಳಿದಿದ್ದ ನಟ, ಹೆಚ್ಚಿನ ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು. ಆ ಸಂದರ್ಭ ಗೋವಿಂದ ಯಶಸ್ಸಿನ ಉತ್ತುಂಗದಲ್ಲಿದ್ದರು. ಆ ಸಂದರ್ಭ ಯುವಜನತೆ, ಸಿನಿಮಾಪ್ರಿಯರಲ್ಲಿ ನಟನ ಬಗ್ಗೆ ಸಖತ್ ಕ್ರೇಜ್ ಇತ್ತು.
ಇದನ್ನೂ ಓದಿ: ದುಬೈನಲ್ಲಿ ತಮ್ಮ ಮೇಣದ ಪ್ರತಿಮೆ ಉದ್ಘಾಟಿಸಲಿದ್ದಾರೆ ಅಲ್ಲು ಅರ್ಜುನ್ - Allu Arjun Wax Statue
ಅಂದಿನ ದಿನಮಾನಗಳಿಗೆ ಹೋಲಿಸಿದರೆ ಗೋವಿಂದ ಸದ್ಯ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿಲ್ಲ. ಹೀಗಾಗಿ ಇವರನ್ನು ನಾಮನಿರ್ದೇಶನ ಮಾಡುವುದರಿಂದ ಎಷ್ಟು ಲಾಭವಾಗುತ್ತದೆ ಅನ್ನೋದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಇದೇ ಕ್ಷೇತ್ರಕ್ಕೆ ಗಜಾನನ ಕೀರ್ತಿಕರ್ ಅವರ ಹೆಸರಿದೆ. ಅವರ ಬದಲಿಗೆ ಜನಪ್ರಿಯ ಅಭ್ಯರ್ಥಿಯನ್ನು ನೇಮಿಸಬೇಕಾಗಿದೆ. ಇದಕ್ಕೆ ನಟ ಗೋವಿಂದ ಅವರ ಕಡೆ ಎಲ್ಲರ ಗಮನವಿದೆ. ಗೋವಿಂದ ಶೀಘ್ರದಲ್ಲೇ ಅಧಿಕೃತವಾಗಿ ಶಿವಸೇನೆ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಕುರಿತು ಶಿವಸೇನೆ ವಕ್ತಾರ ಅರುಣ್ ಸಾವಂತ್ ಅವರನ್ನು ಸಂಪರ್ಕಿಸಿದಾಗ, ಮಾಧ್ಯಮಗಳಲ್ಲಿ ಈ ವಿಷಯ ಪ್ರಾಥಮಿಕ ಹಂತದಲ್ಲಿ ಮಾತ್ರ ಚರ್ಚೆಯಾಗುತ್ತಿದೆ. ಆದರೆ, ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ. ಒಟ್ಟಾರೆ ಸದ್ಯ ಕೇಳಿಬರುತ್ತಿರುವುದು ಒಂದು ಊಹೆ ಅಷ್ಟೇ. ಯಾವುದಕ್ಕೂ ಶಿಂಧೆ ಬಣದಿಂದ ಅಥವಾ ಸ್ವತಃ ನಟ ಗೋವಿಂದ ಅವರಿಂದ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ: ಸುಡು ಬಿಸಿಲಿಗೆ ಬಸವಳಿದಿದ್ದ ಕುಂದಾನಗರಿ ಜನರಿಗೆ ತಂಪೆರೆದ ಮಳೆ - Belagavi Rain