'ಅಭಿನಯದ ಚಕ್ರವರ್ತಿ' ಸುದೀಪ್ ನಿರೂಪಣೆಯ ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ ಸೀಸನ್ 10ರ ಫಿನಾಲೆ ಪ್ರಾರಂಭವಾಗಿದೆ. ಗ್ರ್ಯಾಂಡ್ ಫಿನಾಲೆಯ ಒಂದು ಭಾಗ ಶನಿವಾರ ಸಂಜೆ ಪ್ರಸಾರವಾಗಿತ್ತು. ಇಂದು ವಿಜೇತರ ಹೆಸರು ಘೋಷಣೆಯಾಗಲಿದೆ. ಕಾರ್ತಿಕ್ ಮಹೇಶ್, ವಿನಯ್ ಗೌಡ, ವರ್ತೂರ್ ಸಂತೋಷ್, ಪ್ರತಾಪ್, ಸಂಗೀತಾ ಶೃಂಗೇರಿ ಪ್ರಶಸ್ತಿ ರೇಸ್‌ನಲ್ಲಿದ್ದಾರೆ. ಈ ಪೈಕಿ ತುಕಾಲಿ ಸಂತೋಷ್ ಅವರು 5ನೇ ರನ್ನರ್ ಅಪ್ ಆಗಿ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಇಂದು ಫಿನಾಲೆಯ ಮತ್ತೊಂದು ಭಾಗ ಪ್ರಸಾರ ಆಗಲಿದೆ. 'ಕಿಚ್ಚ ಮೇಲೆತ್ತೋ ಕೈ ಯಾರದ್ದು?' ಎಂಬ ಶೀರ್ಷಿಕೆಯಡಿ ಫಿನಾಲೆಯ ಪ್ರೋಮೋ ಅನಾವರಣಗೊಂಡಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಾಗಿದೆ. ಇದೇ ಮೊದಲ ಬಾರಿಗೆ ಸ್ಪರ್ಧಿಗಳಿಗೆ ಕೋಟಿ ಲೆಕ್ಕದಲ್ಲಿ ಮತಗಳು ಬಂದಿವೆ. ಇದು ಬಿಗ್ ಬಾಸ್ನ ಜನಪ್ರಿಯತೆ ಎಷ್ಟಿದೆ ಎಂಬುದನ್ನು ತೋರಿಸಿವೆ.
ಶನಿವಾರ ಸಂಜೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಫಿನಾಲೆಯ ಒಂದು ಭಾಗ ಪ್ರಸಾರ ಕಂಡಿದೆ. ಕಾರ್ಯಕ್ರಮ ಬಹಳ ಅದ್ಧೂರಿಯಾಗಿ ನಡೆದಿದೆ. ನಟ ಸುದೀಪ್ ಅದ್ಧೂರಿಯಾಗಿ ವೇದಿಕೆ ಪ್ರವೇಶಿಸಿದ್ದರು. ಮಾಜಿ ಸ್ಪರ್ಧಿಗಳು ಭರ್ಜರಿ ಪ್ರದರ್ಶನ ನೀಡುವ ಮೂಲಕ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು. ಫೈನಲಿಸ್ಟ್ಗಳ ಮನೆಮಂದಿ ಕೂಡ ಕಾರ್ಯಕ್ರಮದಲ್ಲಿದ್ದರು. ಸುದೀಪ್ ಎಂದಿನಂತೆ ಮನೆಯೊಳಗಿರುವ ಸ್ಪರ್ಧಿಗಳೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ವರ್ತೂರ್ ಸಂತೋಷ್ ಮತ್ತು ಡ್ರೋಣ್ ಪ್ರತಾಪ್ ವಿಚಾರ ವೀಕ್ಷಕರ ಗಮನ ಸೆಳೆಯಿತು.
ಹುಲಿ ಉಗುರು ಪೆಂಡೆಂಟ್ ಧರಿಸಿದ ಆರೋಪ ವರ್ತೂರ್ ಸಂತೋಷ್ ಮೇಲಿತ್ತು. ಈ ವಿಚಾರ ರಾಜ್ಯಾದ್ಯಂತ ಸದ್ದು ಮಾಡಿ, ಹಲವರು ವಿಚಾರಣೆಗೊಳಗಾದರು. ವರ್ತೂರ್ ಸಂತೋಷ್ ಬಿಗ್ ಬಾಸ್ ಮನೆಯಿಂದ ಹೊರಹೋಗಿ ಮತ್ತೆ ಒಳಬಂದಿದ್ದರು. ಬಳಿಕ ನನಗಿಲ್ಲಿ ಇರಲು ಆಗುತ್ತಿಲ್ಲ, ನಾನು ಹೊರಡುವೆ ಎನ್ನುವ ಮೂಲಕ ಎಲ್ಲರಿಗೂ ಶಾಕ್ ಕೊಟ್ಟಿದ್ದರು. ವರ್ತೂರ್ ತಾಯಿಯೇ ಮನೆಯೊಳಗೆ ಬಂದು ಸಮಾಧಾನಪಡಿಸಿದ್ದರು. ಬಳಿಕ ಸಂತೋಷ್ ಮನೆಯಲ್ಲಿರಲು ನಿರ್ಧರಿಸಿದ್ದರು.
ಇದನ್ನೂ ಓದಿ: ಬಿಗ್ ಬಾಸ್ 5ನೇ ರನ್ನರ್ ಅಪ್ ತುಕಾಲಿ ಸಂತೋಷ್
ಈ ಹತ್ತು ಸೀಸನ್‌ಗಳಲ್ಲಿ ಇಷ್ಟು ಸುದ್ದಿ ಮಾಡಿದ ಸೀಸನ್ ಬೇರೆ ಇಲ್ಲ ಎಂದು ಸ್ವತಃ ಕಿಚ್ಚ ಸುದೀಪ್ ಅವರೇ ಹೇಳಿದ್ದಾರೆ. ವರ್ತೂರು ಸಂತೋಷ್ ಅವರು ಜೈಲಿಗೆ ಹೋಗಿದ್ದ ಸಂಗತಿಯನ್ನು ಸುದೀಪ್ ರಿವೀಲ್ ಮಾಡುತ್ತಿದ್ದ ಹಾಗೆಯೇ ಮನೆಯೊಳಗಿನ ಉಳಿದ ಸ್ಪರ್ಧಿಗಳ ಮುಖದಲ್ಲಿ ಅಚ್ಚರಿ ಮೂಡಿತು. ವರ್ತೂರ್ ಕಣ್ಣುಗಳಲ್ಲಿ ನೀರು ತುಂಬಿತು. ಹೊರಗೆ ಕುಳಿತಿದ್ದ ವರ್ತೂರು ಸಂತೋಷ್ ಅಮ್ಮನೂ ಸೆರಗಿನಲ್ಲಿ ಕಣ್ಣೀರೊರೆಸಿಕೊಂಡರು. ವರ್ತೂರ್ ಬಹಳ ನೋವು ಅನುಭವಿಸಿದ್ದರೆಂದು ಸುದೀಪ್ ಹೇಳುತ್ತಿದ್ದಂತೆ, ''ನೀವು ಅಂದು ಹೇಳಿದ ಮಾತು, ಬಿಗ್ ಬಾಸ್ ಕೊಟ್ಟ ಅವಕಾಶ, ಎಲ್ಲದಕ್ಕೂ ನಾನು ಸಾಯುವವರೆಗೂ ಕೃತಜ್ಞ'' ಎಂದು ಸಂತೋಷ್ ಹೇಳಿದರು.
ಡ್ರೋಣ್ ಪ್ರತಾಪ್ ಪೋಷಕರೂ ಸಹ ಹೃದಯಸ್ಪರ್ಶಿ ಮಾತುಗಳನ್ನಾಡಿದ್ದಾರೆ. "ಈ ವೇದಿಕೆ ಮಗನನ್ನು ಮನುಷ್ಯನನ್ನಾಗಿ ಮಾಡಿತು. ನಮ್ಮ ಮಗನನ್ನು ನಮಗೆ ವಾಪಸ್ ಕೊಟ್ಟಿದ್ದೀರಿ. ಈ ವೇದಿಕೆಗೆ ಚಿರಋಣಿ" ಎಂದು ಭಾವುಕರಾದರು. ಎಲ್ಲರ ಮುಖದಲ್ಲಿಯೂ ಬಿಗ್ ಬಾಸ್ ವೇದಿಕೆ ಮೇಲಿನ ಕೃತಜ್ಞತಾ ಭಾವ ಎದ್ದು ಕಾಣುತ್ತಿತ್ತು.
ಇದನ್ನೂ ಓದಿ: ಮಾತಿನ ಮಲ್ಲ ತುಕಾಲಿ ಸಂತೋಷ್ ಬಿಗ್ ಬಾಸ್ ಪಯಣ
ಇನ್ನಷ್ಟು ಪ್ರದರ್ಶನ, ಕಲರ್ಫುಲ್ ಡ್ಯಾನ್ಸ್, ಕಚಗುಳಿಯ ಮಾತುಕತೆಗಳೆಲ್ಲವೂ ತಂಬಿರುವ ಬಿಗ್ ಬಾಸ್ ಕನ್ನಡ ಸೀಸನ್ 10 ಫಿನಾಲೆ ಇಂದು ಸಂಜೆ 7.30ಕ್ಕೆ ಪ್ರಸಾರವಾಗಲಿದೆ. ಕಾರ್ತಿಕ್ ಮಹೇಶ್, ವಿನಯ್ ಗೌಡ, ವರ್ತೂರ್ ಸಂತೋಷ್, ಪ್ರತಾಪ್, ಸಂಗೀತಾ ಶೃಂಗೇರಿ ಪೈಕಿ ಓರ್ವರು ಗೆಲುವಿನ ನಗೆ ಬೀರಲಿದ್ದಾರೆ.