ಗೌರಿ ಗಣೇಶ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಕರುನಾಡಿನಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಆಚರಣೆಗೆ ತಯಾರಿ ಜೋರಾಗೇ ಇದೆ. ನಿರ್ದೇಶಕ ಗುರುದೇಶಪಾಂಡೆ ಅವರು ಜಿ ಸಿನಿಮಾಸ್ ಅಕಾಡೆಮಿಯಲ್ಲಿ ಒಂದು ದಿನ ಮುಂಚಿತವಾಗಿ ಗೌರಿ ಹಾಗೂ ಗಣೇಶನನ್ನು ಕೂರಿಸಿ ಪೂಜೆ ಸಲ್ಲಿಕೆ ಮಾಡಲಾಯಿತು.
ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್, ನಿರ್ದೇಶಕ ಜಟ್ಟ ಗಿರಿರಾಜ್, ನಿರ್ಮಾಪಕ ಗುರುದೇಶಪಾಂಡೆ ಸೇರಿ 'ರಾಮರಸ' ಶೀರ್ಷಿಕೆಯ ಸಿನಿಮಾ ಮಾಡುತ್ತಿರುವುದು ನಿಮಗೆ ತಿಳಿದಿರುವ ವಿಚಾರ. ಇದಿಗ ಇಡೀ ಚಿತ್ರತಂಡ ನಿರ್ಮಾಪಕ ಗುರುದೇಶಪಾಂಡೆ ಅವರ ನಾಗರಭಾವಿಯಲ್ಲಿರುವ ಜೀ ಸಿನಿಮಾಸ್ ಅಕಾಡೆಮಿಯಲ್ಲಿ ಗೌರಿ ಗಣೇಶನನ್ನು ಕೂರಿಸುವ ಮೂಲಕ ವಿಶೇಷ ಪೂಜೆ ಸಲ್ಲಿಸಿದೆ. ನಿರ್ಮಾಪಕ ಗುರುದೇಶಪಾಂಡೆ ಹಾಗೂ ಅವರ ಪತ್ನಿ ಗಣೇಶನಿಗೆ ಪೂಜೆ ಸಲ್ಲಿಸಿದರು.
ರಾಮರಸ ಚಿತ್ರದ ಫಸ್ಟ್ ಲುಕ್ ಅನ್ನು ಈ ಹಿಂದೆ ಜನಪ್ರಿಯ ನಟ ಕಿಚ್ಚ ಸುದೀಪ್ ಅನಾವರಣಗೊಳಿಸುವ ಮೂಲಕ ಗೆಳೆಯ ಗುರುದೇಶಪಾಂಡೆ ಹಾಗೂ ಬಿಗ್ ಬಾಸ್ ಕೊನೆ ಸೀಸನ್ನ ವಿಜೇತ ಕಾರ್ತಿಕ್ ಸಿನಿಮಾಗೆ ಸಪೋರ್ಟ್ ಮಾಡಿದ್ದರು. ಚಿತ್ರಕ್ಕೆ ಬಿ.ಜೆ ಭರತ್ ಸಂಗೀತ ನೀಡುತ್ತಿದ್ದಾರೆ. ಎ.ವಿ ಕೃಷ್ಣಕುಮಾರ್, ಅರ್ಜುನ್ ಕಿಟ್ಟು ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಮುರಳಿ ಮಾಸ್ಟರ್ ಅವರ ನೃತ್ಯ ನಿರ್ದೇಶನ ಹಾಗೂ ಪುನೀತ್ ಆರ್ಯ ಅವರ ಗೀತೆರಚನೆ ಇರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಸುನೀಲ್ ಹೆಚ್.ಸಿ ಗೌಡ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ರಾಮರಸ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಈ ಮಧ್ಯೆ ಗೌರಿ ಗಣೇಶ ಹಬ್ಬದ ಅಂಗವಾಗಿ ಗಣೇಶನನ್ನು ಕೂರಿಸುವ ಮೂಲಕ ಗಮನ ಸೆಳೆದಿದೆ ಚಿತ್ರತಂಡ.
ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಮಲೆಯಾಳಂ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದೆ. ಈ ಬೆನ್ನಲ್ಲೇ ಸ್ಯಾಂಡಲ್ವುಡ್ನಲ್ಲಿ ನಟಿಯರು ಎದುರಿಸುತ್ತಿರುವ ಲೈಂಗಿಕ ದೌರ್ಜನ್ಯ ಸಮಸ್ಯೆಗಳನ್ನು ಅಧ್ಯಯನ ಮಾಡಿ ವರದಿ ನೀಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸುವಂತೆ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (ಫೈರ್) ನಿಯೋಗ ಒತ್ತಾಯಿಸಿದೆ. ಇಂದು ಕಾವೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ನಿಯೋಗ ಮನವಿ ಪತ್ರ ಸಲ್ಲಿಸಿದೆ. ಈ ಬಗ್ಗೆ 'ರಾಮರಸ' ನಾಯಕ ನಟ ಕಾರ್ತಿಕ್ ಅವರಿಗೆ ಪ್ರಶ್ನೆ ಎದುರಾಯಿತು.
ಅದಕ್ಕೆ ಪ್ರತಿಕ್ರಿಯಿಸಿದ ನಟ, ಕನ್ನಡ ಚಿತ್ರರಂಗದಲ್ಲಿ ಫೈರ್ ಫಿಲ್ಮ್ ಇಂಡಸ್ಟ್ರಿ ಫಾರ್ ಈಕ್ವಾಲಿಟಿ ಎಂಬುದಿದೆ ಅನ್ನೋದನ್ನು ಕೇಳಿದ್ದೇನೆ. ನಟಿಯರ ವೈಯಕ್ತಿಕ ವಿಚಾರ. ನಾನು ಆ ಬಗ್ಗೆ ಹೆಚ್ಚು ಮಾತನಾಡಲು ಸಾಧ್ಯವಿಲ್ಲ. ಸೇಫ್ಟಿ ಅನ್ನೋದು ಎಲ್ಲ ಕಡೆ ಇರುತ್ತದೆ. ಇದಕ್ಕೆ ಹೇಗೆ ಉತ್ತರಿಸುವುದು ಎಂಬುದು ನನಗೆ ಗೊತ್ತಿಲ್ಲ. ಸೇಫ್ಟಿ ಇರುತ್ತದೆ. ನಾವು ಹೇಗೆ ಬೌಂಡರಿ ಹಾಕಿಕೊಂಡಿರುತ್ತೇವೆ ಎಂಬುದರ ಮೇಲೆ ಡಿಪೆಂಡ್ ಅಂತಾ ನನಗನಿಸುತ್ತದೆ ಎಂದು ತಿಳಿಸಿದರು.