''ಭೈರಾದೇವಿ'', ಸ್ಯಾಂಡಲ್ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ. ಕೆಲ ದಿನಗಳ ಹಿಂದೆ ಸೆಲೆಬ್ರಿಟಿಗಳು ವೀಕ್ಷಿಸಿ ಮೆಚ್ಚಿಕೊಂಡಿರುವ ''ಭೈರಾದೇವಿ'' ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಈ ಹಿನ್ನೆಲೆ ನಾಯಕ ನಟಿ ರಾಧಿಕಾ ಕುಮಾರಸ್ವಾಮಿ, ನಟ ರಮೇಶ್ ಅರವಿಂದ್, ನಟಿ ಅನು ಪ್ರಭಾಕರ್, ಹಿರಿಯ ನಟ ರಂಗಾಯಣ ರಘು, ನಿರ್ದೇಶಕ ಶ್ರೀ ಜೈ, ಸಾಹಸ ನಿರ್ದೇಶಕ ರವಿವರ್ಮಾ, ನಿರ್ಮಾಪಕ ರವಿರಾಜ್ ಈ ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಸಾಕಷ್ಟು ಅಧ್ಯಯನ ಮಾಡಿದ್ದೇನೆ: ನಿರ್ದೇಶಕ ಶ್ರೀ ಜೈ ಹೇಳುವ ಹಾಗೆ, ''ಹೆಣ್ಣು ಅಘೋರಿ ಬಗ್ಗೆ ಸಿನಿಮಾ ಮಾಡಬೇಕು ಅಂತಾ ಬಂದಾಗ ನಾನು ಸಾಕಷ್ಟು ರಿಸರ್ಚ್ ಮಾಡಿ ಈ ಚಿತ್ರವನ್ನು ಮಾಡಿದ್ದೇನೆ. ಸಾಕಷ್ಟು ಪುಸ್ತಕಗಳನ್ನು ಓದಿಕೊಂಡು, ಅಘೋರಿಗಳ ಬಗ್ಗೆ ತಿಳಿದುಕೊಂಡು ಈ ಸಿನಿಮಾ ಮಾಡಿದ್ದೇನೆ. ಸಾಮಾನ್ಯವಾಗಿ ಅಘೋರಿಗಳು ಯಾರ ಮುಂದೆಯೂ ಬರೋದಿಲ್ಲ. ನಾವು ನಾಗ ಸಾಧುಗಳನ್ನು ನೋಡಿರುತ್ತೇವೆ. ಆದರೆ ಅಘೋರಿಗಳು ನಮ್ಮ ಜೊತೆ ಮಾತುಕತೆಗೆ ಸಿಗುವುದಿಲ್ಲ. ಇನ್ನೂ ಈ ಚಿತ್ರದಲ್ಲಿ ಸಾಕಷ್ಟು ಮಂತ್ರ ಪಠಣೆಗಳು ನೈಜವಾಗಿವೆ. ಈ ಸಿನಿಮಾ ಮಾಡಬೇಕಾದ್ರೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದ್ದವು. ನಾವು ಅದೆನೆಲ್ಲವನ್ನು ಎದುರಿಸಿ ಫೈನಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದೇವೆ ಎಂದು ತಿಳಿಸಿದರು.
ದೆವ್ವದ ಕಥೆ ಇರುವ ಚಿತ್ರದಲ್ಲಿ ನಟಿಸಿದ್ದೇನೆ: ಬಳಿಕ ರಮೇಶ್ ಅರವಿಂದ್ ಮಾತನಾಡಿ, ಆಪ್ತಮಿತ್ರ ಸಿನಿಮಾ ಆದ್ಮೇಲೆ ಈ ಹಾರರ್ ಜೊತೆಗೆ ದೈವದ ಕಥೆ ಇರುವ ಚಿತ್ರದಲ್ಲಿ ನಟಿಸಿದ್ದೇನೆ. ಸಿನಿಮಾದಲ್ಲಿ ರಾಧಿಕಾ ಕುಮಾರಸ್ವಾಮಿ ಪಾತ್ರ ಪವರ್ ಫುಲ್ ಆಗಿದೆ. ಖಡಕ್ ಪೊಲೀಸ್ ಪಾತ್ರವಾಗಿದ್ರೂ ನಮ್ಮ ಕಣ್ಣಿಗೆ ಕಾಣದ ಶಕ್ತಿಯನ್ನ ಹೇಗೆ ಎದುರಿಸುತ್ತೀನಿ ಅನ್ನೋದೇ ನನ್ನ ಪಾತ್ರ. ಅನು ಪ್ರಭಾಕರ್ ನನ್ನ ಹೆಂಡತಿಯ ಪಾತ್ರ ನಿರ್ವಹಿಸಿದ್ದಾರೆ ಸಿನಿಮಾ ಕೂಡ ಚೆನ್ನಾಗಿ ಮೂಡಿಬಂದಿದೆ ಅಂದರು.
ಹಾರರ್ ಸಿನಿಮಾಗಳೆಂದರೆ ನನಗೆ ಇಷ್ಟ: ಮುಖ್ಯಭೂಮಿಕೆಯಲ್ಲಿರುವ ನಟಿ ರಾಧಿಕಾ ಕುಮಾರಸ್ವಾಮಿ ಮಾತನಾಡಿ, ನನಗೆ ಹೆಚ್ಚಾಗಿ ಹಾರರ್ ಸಿನಿಮಾಗಳನ್ನು ನೋಡೋದಂದ್ರೆ ಬಹಳ ಇಷ್ಟ. ದೆವ್ವ ಅಂದ್ರೆ ಬಹಳ ಭಯ. ಮನೆಯಲ್ಲಿರುವ ಒಂದು ರೂಮ್ನಿಂದ ಮತ್ತೊಂದು ರೂಮ್ಗೆ ಹೋಗಲು ಭಯ ಪಡುತ್ತೇನೆ. ರಾತ್ರಿ ಹೊತ್ತು ಸ್ಮಶಾನ ಅಂದ್ರೆ ಭಯ ಆಗುತ್ತಿತ್ತು. ಈಗ ಭೈರಾದೇವಿ ಸಿನಿಮಾ ಮಾಡಿದ ಬಳಿಕ ದೆವ್ವದ ಬಗ್ಗೆ ಇದ್ದ ಭಯ ಹೋಗಿದೆ. ರಾತ್ರಿ ಹೊತ್ತು ಒಬ್ಬಳೇ ಸ್ಮಶಾನಕ್ಕೆ ಹೋಗಿ ಬರುವ ಧೈರ್ಯ ಬಂದಿದೆ. ಇನ್ನೂ ಶೂಟಿಂಗ್ ಟೈಮಲ್ಲಿ ಕಾಳಿ ಪಾತ್ರಕ್ಕೆ ಮೇಕಪ್ ಮಾಡಿಕೊಳ್ಳುವುದಕ್ಕೆ 4 ಗಂಟೆ ಹಿಡಿಯುತ್ತಿತ್ತು. ಒಮ್ಮೆ ಈ ಮೇಕಪ್ ಹಾಕಿ ಶೂಟಿಂಗ್ ಮಾಡಬೇಕು ಅನ್ನುವಷ್ಟರಲ್ಲಿ ನನಗೆ ತಲೆ ಎತ್ತುವುದಕ್ಕೆ ಆಗುತ್ತಿರಲಿಲ್ಲ. ಆಗ ನನ್ನ ಅಣ್ಣ ಹಾಗೂ ಡೈರೆಕ್ಟರ್ ಬಂದು ಪೂಜೆ ಮಾಡಿ ನಿಂಬೆ ಹಣ್ಣು ತುಳಿದ ಬಳಿಕ ನನಗೆ ತಲೆ ಎತ್ತಲು ಆಯಿತು ಎಂದು ಶೂಟಿಂಗ್ ಕ್ಷಣಗಳನ್ನು ಹಂಚಿಕೊಂಡರು.
ಹಿರಿಯ ನಟ ರಂಗಾಯಣ ರಘು ಮಾತನಾಡಿ, ಈ ಭೈರಾದೇವಿ ಸಿನಿಮಾದಲ್ಲಿ ರಾಧಿಕಾ ಅವರು ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ. ಈ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜೊತೆಗೆ ಸಾಹಸ ನಿರ್ದೇಶಕ ರವಿವರ್ಮ ಮಾತನಾಡಿ, ನಾನು ಮಾಲಾಶ್ರೀ ಮೇಡಂ ಆ್ಯಕ್ಷನ್ ಕಂಪೋಸ್ ಮಾಡಿದ್ದೆ. ಈಗ ರಾಧಿಕಾ ಮೇಡಂಗೆ ಸಾಹಸ ನಿರ್ದೇಶನ ಮಾಡಿರೋದು ತುಂಬಾ ಖುಷಿ ಕೊಟ್ಟಿದೆ ಎಂದರು.
ಭೈರಾದೇವಿ ಚಿತ್ರ ದೈವ ಹಾಗೂ ದುಷ್ಟ ಶಕ್ತಿಯ ನಡುವೆ ನಡೆಯುವ ಸಂಘರ್ಷದ ಕಥೆ. ಎರಡು ಶೇಡ್ಗಳಲ್ಲಿ ರಾಧಿಕಾ ಕುಮಾರಸ್ವಾಮಿ ಅಭಿನಯಿಸಿದ್ದಾರೆ. ಇದೇ ಮೊದಲ ಬಾರಿಗೆ ಹೆಣ್ಣು ಅಘೋರಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ರಮೇಶ್ ಅರವಿಂದ್, ಅನು ಪ್ರಭಾಕರ್, ರಂಗಾಯಣ ರಘು, ರವಿಶಂಕರ್, ಸ್ಕಂದ, ಅಚ್ಯುತ್ ಕುಮಾರ್ ಸೇರಿದಂತೆ ದೊಡ್ಡ ತಾರಾಗಣ ಇದೆ.
ಈ ಹಿಂದೆ ಆರ್ ಎಕ್ಸ್ ಸೂರಿ ಸಿನಿಮಾ ನಿರ್ದೇಶನ ಮಾಡಿ ಗಮನ ಸೆಳೆದಿದ್ದ ಶ್ರೀ ಜೈ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರವನ್ನು ರವಿರಾಜ್ ನಿರ್ಮಾಣ ಮಾಡಿದ್ದು, ಯಾದವ್ ಅವರ ಸಹ ನಿರ್ಮಾಣವಿದೆ. ಜೆ.ಎಸ್.ವಾಲಿ ಛಾಯಾಗ್ರಹಣ, ಕೆ.ಕೆ.ಸೆಂಥಿಲ್ ಪ್ರಸಾದ್ ಸಂಗೀತ ನಿರ್ದೇಶನ ಹಾಗೂ ರವಿಚಂದ್ರನ್ ಅವರ ಸಂಕಲನವಿದೆ. ಶಮಿಕಾ ಎಂಟರ್ ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಭೈರಾದೇವಿ ಸಿನಿಮಾ ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಇಷ್ಟೆಲ್ಲಾ ಹೈಲೆಟ್ಸ್ ಇರುವ "ಭೈರಾದೇವಿ" ಚಿತ್ರ ಅಕ್ಟೋಬರ್ 3 ರಂದು ರಾಜ್ಯಾದ್ಯಾಂತ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ.