ದಿಯಾ ಸೇರಿದಂತೆ ಅನೇಕ ಯಶಸ್ವಿ ಸಿನಿಮಾಗಳ ಮೂಲಕ ಜನಪ್ರಿಯರಾಗಿರುವ ದೀಕ್ಷಿತ್ ಶೆಟ್ಟಿ ನಾಯಕರಾಗಿ ನಟಿಸುತ್ತಿರುವ ಮುಂದಿನ ಬಹುನಿರೀಕ್ಷಿತ ಚಿತ್ರ 'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ'. ಅಭಿಷೇಕ್ ಎಂ ನಿರ್ದೇಶನವಿರುವ ಚಿತ್ರದ ಅನಿಮೇಷನ್ ಟೀಸರ್ ಇತ್ತೀಚಿಗೆ ಬಿಡುಗಡೆಯಾಗಿದೆ. ರಂಗಿತರಂಗ, ಅವನೇ ಶ್ರೀಮನ್ನಾರಾಯಣದಂತಹ ಯಶಸ್ವಿ ಚಿತ್ರಗಳ ನಿರ್ಮಾಪಕ ಹೆಚ್.ಕೆ ಪ್ರಕಾಶ್ ನಿರ್ಮಾಣದ 'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ' ಟೀಸರ್ಗೆ ಮೆಚ್ಚುಗೆ ವ್ಯಕ್ತವಾಗಿದೆ.
ಕನ್ನಡ ಚಿತ್ರರಂಗದಲ್ಲಿ ವಿಭಿನ್ನ, ಹೊಸ ಪ್ರಯೋಗ ಎನ್ನಬಹುದಾದ ಈ ಟೀಸರ್ ಮೂಲಕ ಬಹುನಿರೀಕ್ಷಿತ ಚಿತ್ರದ ಕಥೆ ಹೇಳುವ ಪ್ರಯತ್ನ ನಡೆದಿದೆ. ಈ ಅನಿಮೇಷನ್ ಟೀಸರ್ಗಾಗಿ ಏಳೆಂಟು ನುರಿತ ತಂತ್ರಜ್ಞರು ಕೆಲ ತಿಂಗಳುಗಳ ಕಾಲ ಶ್ರಮ ಪಟ್ಟಿದ್ದಾರೆ. ಅನಿಮೇಷನ್ ಟೀಸರ್ ಸ್ವೀಕರಿಸುತ್ತಿರುವ ಸ್ಪಂದನೆ ನೋಡಿ ಬಹಳ ಖುಷಿಯಾಗಿದೆ ಎನ್ನುತ್ತಾರೆ ನಿರ್ದೇಶಕರು. ಇನ್ನು, ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಬೆಂಗಳೂರು, ತುಮಕೂರು ಹಾಗೂ ಚಿತ್ರದುರ್ಗದಲ್ಲಿ ಚಿತ್ರೀಕರಣ ನಡೆದಿದೆ. ಕೆಲ ದಿನಗಳ ಚಿತ್ರೀಕರಣ ಮಾತ್ರ ಬಾಕಿ ಇದೆ.
ನಟ ದೀಕ್ಷಿತ್ ಶೆಟ್ಟಿ ಅವರಿಗೆ ನಾಯಕಿಯಾಗಿ ಪ್ರೇಮಂ ಪೂಜ್ಯಂ ಹಾಗೂ ಕೌಸಲ್ಯ ಸುಪ್ರಜಾ ರಾಮ ಚಿತ್ರಗಳ ಮೂಲಕ ಜನಪ್ರಿಯರಾಗಿರುವ ಬೃಂದಾ ಆಚಾರ್ಯ ಅಭಿನಯಿಸಿದ್ದಾರೆ. ಸಾಧುಕೋಕಿಲ, ಗೋಪಾಲ ಕೃಷ್ಣ ದೇಶಪಾಂಡೆ, ಉಷಾ ಭಂಡಾರಿ, ಭರತ್, ವಿಶ್ವನಾಥ್, ಹರೀಶ್ ಸಮಷ್ಟಿ, ಅಶ್ವಿನ್ ರಾವ್ ಪಲ್ಲಕ್ಕಿ, ಶ್ರೇಯಸ್ ಶರ್ಮಾ, ಶ್ರೀವತ್ಸ, ವಿನುತ್ ಸೇರಿದಂತೆ ಮೊದಲಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಇದನ್ನೂ ಓದಿ: ಜನಮನ ಗೆದ್ದ ಕನ್ನಡ ಸಿನಿಮಾ: 50 ದಿನದ ಸಂಭ್ರಮದಲ್ಲಿ 'ಕೆರೆಬೇಟೆ' - Kerebete Success Celebration
ಖ್ಯಾತ ನಿರ್ದೇಶಕ ಸಿಂಪಲ್ ಸುನಿ ಅವರ ಜೊತೆ ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದ ಅಭಿಷೇಕ್ ಎಂ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಅಭಿಷೇಕ್ ಅವರೇ ಬರೆದಿದ್ದಾರೆ. ಹೆಸರಾಂತ ನಟ ರಕ್ಷಿತ್ ಶೆಟ್ಟಿ, ನಿರ್ದೇಶಕ ಸಚಿನ್ ಹಾಗೂ ಅಭಿಷೇಕ್ ಅವರ ಸಾರಥ್ಯದ ಪಿನಾಕ ವಿ ಎಫ್ ಎಕ್ಸ್ ಸ್ಟುಡಿಯೋದಲ್ಲೇ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಚಿತ್ರದ ಟೀಸರ್ನ ಅನಿಮೇಷನ್ ವರ್ಕ್ ನಡೆದಿದೆ.
ಇದನ್ನೂ ಓದಿ: ಡೈನಾಮಿಕ್ ಪ್ರಿನ್ಸ್ 'ಕರಾವಳಿ' ಅಡ್ಡಕ್ಕೆ 'ಮಿಸ್ಟರ್ ದುಬೈ' ಎಂಟ್ರಿ - Karavali Movie Villain
ಕನ್ನಡ ಹಾಗೂ ತೆಲುಗು ಸೇರಿ ಎರಡು ಭಾಷೆಗಳಲ್ಲಿ ಈ ಚಿತ್ರ ಮೂಡಿಬರಲಿದೆ. ಜ್ಯೂಡಾ ಸ್ಯಾಂಡಿ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಅಭಿಷೇಕ್ ಜಿ ಕಾಸರಗೋಡು ಛಾಯಾಗ್ರಹಣ ನಿರ್ವಹಿಸಿದ್ದಾರೆ. ರಘು ಮೈಸೂರ್ ಕಲಾ ನಿರ್ದೇಶನ ಹಾಗೂ ಭೂಷಣ್ ಮಾಸ್ಟರ್ ಅವರ ನೃತ್ಯ ನಿರ್ದೇಶನ ಈ 'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ' ಚಿತ್ರಕ್ಕಿದೆ.