'ಸಲಗ' ಚಿತ್ರದಿಂದ ಕನ್ನಡ ಚಿತ್ರರಂಗದಲ್ಲಿ ಸಿನಿಪ್ರಿಯರ ಮನಗೆದ್ದಿದ್ದ ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ಬಹುನಿರೀಕ್ಷಿತ ಚಿತ್ರ 'ಭೀಮ' ತೆರೆಗಪ್ಪಳಿಸಿದೆ. ರಾಜ್ಯಾದ್ಯಂತ ಇಂದು 400 ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಿದೆ. ದುನಿಯಾ ವಿಜಯ್ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳ ಕೆಲ ಕಾಲೇಜುಗಳಿಗೆ ಹೋಗಿ ಈ ಸಿನಿಮಾದ ಪ್ರಚಾರ ಮಾಡಿದ್ದು, ಸಿನಿಮಾದ ಸಂದೇಶ ತಿಳಿದುಕೊಂಡ ಅಭಿಮಾನಿಗಳು ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸದ್ಯ ಸಮಾಜದಲ್ಲಿ ನಡೆಯುತ್ತಿರುವ ಲೋಕಲ್ ರೌಡಿಸಂ ಜೊತೆಗೆ ಗಾಂಜಾ, ಡ್ರಗ್ಸ್ಗೆ ಯುವ ಜನಾಂಗ ಎಷ್ಟರ ಮಟ್ಟಿಗೆ ದಾಸರಾಗಿದ್ದಾರೆ ಅನ್ನೋ ಕಥೆಯನ್ನು 'ಭೀಮ' ಹೇಳಿದ್ದಾನೆ. ಅನಾಥನಾಗಿರೋ ಭೀಮ ಅಂದ್ರೆ ದುನಿಯಾ ವಿಜಯ್ ಇದನ್ನು ಲೋಕಲ್ ಹುಡುಗನಾಗಿ ಹೇಗೆ ಮಟ್ಟ ಹಾಕುತ್ತಾನೆ ಅನ್ನೋದನ್ನು ತಿಳಿದುಕೊಳ್ಳಬೇಕಂದ್ರೆ ನೀವು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಬೇಕು.
ಕಳೆದ ಏಳು ತಿಂಗಳುಗಳಿಂದ ಕನ್ನಡದ ಸ್ಟಾರ್ ಸಿನಿಮಾಗಳಿಲ್ಲದೇ ಚಿತ್ರಮಂದಿರದ ಮಾಲೀಕರಿಗೆ ಥಿಯೇಟರ್ ನಡೆಸೋದು ಕಷ್ಟ ಆಗಿತ್ತು. ಇಂಥ ಸಮಯದಲ್ಲಿ ದುನಿಯಾ ವಿಜಯ್ ಅಭಿನಯಿಸಿ, ನಿರ್ದೇಶಿಸಿರೋ ಭೀಮ ಚಿತ್ರ ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿದ್ದು, ಬಹುತೇಕ ಎಲ್ಲಾ ಥಿಯೇಟರ್ಗಳಲ್ಲೂ ಹೌಸ್ ಪುಲ್ ಪ್ರದರ್ಶನ ಕಾಣುತ್ತಿದೆ. ಇದರಿಂದ ಸ್ಯಾಂಡಲ್ವುಡ್ಗೆ ಗೆಲುವಿನ ಭರವಸೆ ಸಿಕ್ಕಿದೆ.
ಔಟ್ ಅಂಡ್ ಔಟ್ ಮಾಸ್ ಎಲಿಮೆಂಟ್ಸ್ ಇರೋ ಭೀಮ ಚಿತ್ರದಲ್ಲಿ ಗಾಂಜಾ ಮತ್ತು ಡ್ರಗ್ಸ್ ಸಮಾಜಕ್ಕೆ ಎಷ್ಟು ಮಾರಕ ಅನ್ನೋದನ್ನು ತೋರಿಸಲಾಗಿದೆ. ತಮ್ಮ ಉತ್ತಮ ನಟನೆ ಹಾಗೂ ನಿರ್ದೇಶನಕ್ಕೆ ನಾಯಕ ನಟ ವಿಜಯ್ ಅಭಿಮಾನಿಗಳಿಂದ ಶಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ವಿಜಯ್ ಜೋಡಿಯಾಗಿ ಕಾಣಿಸಿಕೊಂಡಿರುವ ರಂಗಭೂಮಿ ಕಲಾವಿದೆ ಅಶ್ವಿನಿ ತಮ್ಮ ಚೊಚ್ಚಲ ಚಿತ್ರದ ಮೂಲಕ ಅಭಿಮಾನಿಗಳನ್ನು ತಲುಪಿದ್ದಾರೆ. ಇನ್ನುಳಿದಂತೆ ಅಚ್ಯುತ್ ಕುಮಾರ್, ಕಲ್ಯಾಣಿ, ಗೋಪಾಲ ದೇಶಪಾಂಡೆ, ಕಾಕ್ರೋಚ್ ಸುಧೀ ಕೊಟ್ಟ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಖಡಕ್ ಪೊಲೀಸ್ ಅಧಿಕಾರಿಯಾಗಿ ಪ್ರಿಯಾ, ಖಳನಾಯಕನಾಗಿ ಡ್ರಾಗನ್ ಮಂಜು ಸೇರಿದಂತೆ ಹಲವು ಕಲಾವಿದರು ಗಮನ ಸೆಳೆಯುವಲ್ಲಿ ಯಶ ಕಂಡಿದ್ದಾರೆ.
ಭೀಮ ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಶಿವಸೇನಾ ಕ್ಯಾಮರಾ ಕೈಚಳಕ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಮಾಸ್ತಿ ಡೈಲಾಗ್ಸ್, ಚೇತನ್ ಡಿಸೋಜಾ, ವಿನೋದ್, ಗೌತಮ್ ಅವರ ಆ್ಯಕ್ಷನ್ ಸೀನ್ಗಳು ಪ್ರೇಕಕ್ಷರಿಗೆ ಸಖತ್ ಮಜಾ ಕೊಡುತ್ತದೆ. ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ನಿರ್ಮಾಣ ಮಾಡಿರುವ ಈ ಸಿನಿಮಾ ಮಾಸ್ ಎಂಟರ್ಟೈನ್ ಆಗಿದ್ದು, ಇಂದಿನ ಜನರೇಷನ್ನ ಯುವಕ ಯುವತಿಯರು ನೋಡಲೇಬೇಕಾದ ಚಿತ್ರವಾಗಿದೆ.
ಇದನ್ನೂ ಓದಿ: 'ಭೀಮ'ನ ಅದ್ಧೂರಿ ಎಂಟ್ರಿ: ವಿಶೇಷಚೇತನ ಅಭಿಮಾನಿಯನ್ನು ಥಿಯೇಟರ್ಗೆ ಸ್ವಾಗತಿಸಿದ ದುನಿಯಾ ವಿಜಯ್ - Bheema Grand Release
ದುನಿಯಾ ವಿಜಯ್ ತಮ್ಮ ಭೀಮ ಚಿತ್ರವನ್ನು ಗೆಲ್ಲಿಸಬೇಕೆಂಬ ಪಣ ತೊಟ್ಟಿದ್ದಾರೆ. ಬೆಳಗ್ಗೆ 8 ಗಂಟೆಗೆ ಕೆ.ಜಿ ರಸ್ತೆಯಲ್ಲಿರೋ ಫೇಮಸ್ ಸಂತೋಷ್ ಥಿಯೇಟರ್ಗೆ ಬಂದು ಪ್ರಾಜೆಕ್ಟರ್ ರೂಮ್ಗೆ ಪೂಜೆ ಮಾಡಿದ್ದಾರೆ. ಜೊತೆಗೆ ಸಿನಿಮಾ ನೋಡಲು ಬಂದ ವಿಶೇಷ ಚೇತನ ಹುಡುಗನನ್ನು ಮಾತನಾಡಿಸಿ, ಸ್ವಾಗತಿಸಿ, ಥಿಯೇಟರ್ ಒಳಗೆ ಕರೆದುಕೊಂಡು ಬಂದರು.
ಹಾಗೇ ಚಿತ್ರತಂಡ ಮತ್ತು ಅಭಿಮಾನಿಗಳ ಜೊತೆ ಸಿನಿಮಾ ನೋಡಿದ ವಿಜಯ್ ತಮ್ಮ ಅಭಿಪ್ರಾಯ ಹಂಚಿಕೊಂಡರು. ಡ್ರಗ್ಸ್ ಸುತ್ತ ಕಥೆ ಸಾಗುತ್ತದೆ. ಗಾಂಜಾಗೆ ದಾಸರಾಗಿರುವ ಹುಡುಗ, ಹುಡುಗಿಯರನ್ನು ನಾನು ಮೀಟ್ ಮಾಡಿ ಅವರಿಗೆ ಆಗುತ್ತಿದ್ದ ಸಮಸ್ಯೆಗಳನ್ನು ತಿಳಿದುಕೊಂಡು ಈ ಸಿನಿಮಾ ಮಾಡಿದ್ದೇನೆ. ಡ್ರಗ್ಸ್ ತೆಗೆದುಕೊಂಡ ಹುಡುಗನ ಕೈಯಲ್ಲಿ ಬೊಬ್ಬೆ ಬಂದಿರೋದನ್ನು ನಾನು ನೋಡಿದ್ದೇನೆ. ಬೆಂಗಳೂರಿನಲ್ಲಿ ಸರಿಸುಮಾರು ಶೇ.30ರಷ್ಟು ಮಕ್ಕಳು ಗಾಂಜಾ ಮತ್ತು ಡ್ರಗ್ಸ್ಗೆ ಅಡಿಕ್ಟ್ ಆಗಿದ್ದಾರೆ ಎಂದು ಹೇಳಿದರು.