ಮುಂಬೈನಲ್ಲಿ ನಡೆಯುತ್ತಿದ್ದ 'ಹೌಸ್‌ಫುಲ್ 5' ಸಿನಿಮಾ ಚಿತ್ರೀಕರಣದ ವೇಳೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಗಾಯಗೊಂಡಿದ್ದಾರೆ. ಸಾಹಸ ದೃಶ್ಯಗಳ ಸಂದರ್ಭದಲ್ಲಿ ಅವರ ಕಣ್ಣಿಗೆ ಗಾಯವಾಗಿದೆ. ನಟ ಆರೋಗ್ಯವಾಗಿದ್ದಾರೆ ಎಂದು ಹೆಲ್ತ್ ಅಪ್ಡೇಟ್ ಮೂಲಕ ತಿಳಿದು ಬಂದಿದೆ.
ವರದಿಗಳ ಪ್ರಕಾರ, ಅಕ್ಷಯ್ ಕುಮಾರ್ ಹೌಸ್‌ಫುಲ್ 5ರ ಸೆಟ್‌ನಲ್ಲಿದ್ದರು. ಸ್ಟಂಟ್ ಶೂಟಿಂಗ್ ವೇಳೆ ಅಕ್ಷಯ್ ಅವರ ಕಣ್ಣಿಗೆ ಏನೋ ಬಿದ್ದಂತಾಗಿದೆ. ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣ ವೈದ್ಯರನ್ನು ಕರೆಸಲಾಯಿತು. ವೈದ್ಯರು ಚಿಕಿತ್ಸೆ ನೀಡಿ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಕ್ಷಯ್ ಶೂಟಿಂಗ್ ನಿಲ್ಲಿಸಿದರು. ಉಳಿದ ಕಲಾವಿದರ ಚಿತ್ರೀಕರಣ ಮುಂದುವರೆದಿದೆ. ಆದಾಗ್ಯೂ, ಚಿತ್ರೀಕರಣ ಅಂತಿಮ ಹಂತದಲ್ಲಿದ್ದು, ನಟ ಶೀಘ್ರದಲ್ಲೇ ಸೆಟ್‌ಗೆ ಮರಳಲು ಬಯಸಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಹೌಸ್‌ಫುಲ್ 5 ಶೂಟಿಂಗ್ನ ಫೈನಲ್ ಶೆಡ್ಯೂಲ್ ಅನ್ನು ಮುಂಬೈನಲ್ಲಿ ಶರವೇಗದಲ್ಲಿ ಚಿತ್ರೀಕರಿಸಲಾಗುತ್ತಿದೆ. ಇದಾದ ಬಳಿಕ ಕ್ಲೈಮ್ಯಾಕ್ಸ್ ಹಾಗೂ ಹಾಡುಗಳಿಗಾಗಿ ಚಿತ್ರಕೋಟ್ ಮೈದಾನಕ್ಕೆ ಚಿತ್ರತಂಡ ತೆರಳಲಿದೆ. ಹೌಸ್‌ಫುಲ್ 5 ಬಹುತಾರಾಗಣದ ಚಿತ್ರವಾಗಿದ್ದು, ಪ್ರತಿಭಾನ್ವಿತ ಕಲಾವಿದರು ತೆರೆ ಹಂಚಿಕೊಂಡಿದ್ದಾರೆ. ಬಾಲಿವುಡ್ ಕಿಲಾಡಿ ಜೊತೆಗೆ ರಿತೇಶ್ ದೇಶಮುಖ್, ಅಭಿಷೇಕ್ ಬಚ್ಚನ್, ಕೃತಿ ಖರಬಂದ, ಫರ್ದೀನ್ ಖಾನ್, ಸಂಜಯ್ ದತ್, ಜಾಕ್ವೆಲಿನ್ ಫರ್ನಾಂಡೀಸ್, ಚಂಕಿ ಪಾಂಡೆ, ಮಿಥುನ್ ಚಕ್ರವರ್ತಿ, ಅರ್ಜುನ್ ರಾಂಪಾಲ್, ಮಲೈಕಾ ಅರೋರಾ, ಜಾಕಿ ಶ್ರಾಫ್, ಬಾಬಿ ಡಿಯೋಲ್, ಬೊಮನ್ ಸಿಂಗ್ ಇರಾನಿ, ಜಾನಿ ಪುರಾನ್, ಸಂಜಯ್ ದತ್, ರಾಜ್‌ಪಾಲ್ ಯಾದವ್ ಸೇರಿದಂತೆ ಹಲವರು ನಟಿಸಿದ್ದಾರೆ.
ಇದನ್ನೂ ಓದಿ: 'ನಾನು ಉಪೇಂದ್ರರ ದೊಡ್ಡ ಅಭಿಮಾನಿ': ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್
ಅಕ್ಷಯ್ ಕುಮಾರ್ ಸಿನಿಮಾಗಳು: ಅಕ್ಷಯ್ ಕುಮಾರ್ ಕೊನೆಯ ಸಿನಿಮಾ 'ಖೇಲ್ ಖೇಲ್ ಮೇ'. ಇದೇ ಸಾಲಿನ ಆಗಸ್ಟ್ 15ಕ್ಕೆ ಬಿಡುಗಡೆಯಾದ ಚಿತ್ರದಲ್ಲಿ ಫರ್ದೀನ್ ಖಾನ್, ವಾಣಿ ಕಪೂರ್, ತಾಪ್ಸಿ ಪನ್ನು ಅವರಂತಹ ಸ್ಟಾರ್ ನಟರು ಕಾಣಿಸಿಕೊಂಡಿದ್ದರು. ಅಲ್ಲದೇ ಬ್ಲಾಕ್ಬಸ್ಟರ್ ಹಿಟ್ ಸ್ತ್ರೀ 2ನಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದರು. ಅಕ್ಷಯ್ 14 ವರ್ಷಗಳ ನಂತರ ಪ್ರಿಯದರ್ಶನ್ ಅವರೊಂದಿಗೆ ಹಾರರ್ ಕಾಮಿಡಿ ಸಿನಿಮಾವನ್ನು ಘೋಷಿಸಿದ್ದಾರೆ. ಭೂತ್ ಬಂಗ್ಲಾ ಚಿತ್ರದ ಶೀರ್ಷಿಕೆ. ಸಿನಿಮಾ 2026ರ ಏಪ್ರಿಲ್ 2 ರಂದು ಅದ್ದೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.
ಇದನ್ನೂ ಓದಿ: 'ಪೆನ್ಡ್ರೈವ್'ನಲ್ಲಿ ಮಾಲಾಶ್ರೀ, ತನಿಷಾ ಕುಪ್ಪಂಡ: ಸ್ಯಾಂಡಲ್ವುಡ್ನೊಂದಿಗೆ 30 ವರ್ಷದ ನಂಟಿರುವ ಸೆಬಾಸ್ಟಿನ್ ಡೈರೆಕ್ಷನ್