ಸಿನಿಮಾಗಳು ಸೂಪರ್ ಹಿಟ್ ಆಗಿ, ಉತ್ತಮ ಗಳಿಕೆ ಮಾಡಿದಾಗ ಚಿತ್ರ ನಿರ್ಮಾಪಕರು ನಟ ಹಾಗೂ ನಿರ್ದೇಶಕರಿಗೆ ಐಷಾರಾಮಿ ಕಾರು ಸೇರಿದಂತೆ ಇತರೆ ಉಡುಗೊರೆ ನೀಡುವುದು ಚಿತ್ರರಂಗದಲ್ಲಿ ಸಾಮಾನ್ಯ. ಆದರೆ, 'ಅಜಾಗ್ರತ' ನಿರ್ದೇಶಕರು ಚಿತ್ರ ಬಿಡುಗಡೆಗೆ ಮುನ್ನವೇ ತಮ್ಮ ಸಿನಿಮಾದ ನಿರ್ದೇಶಕರಿಗೆ ಅರ್ಧ ಕೋಟಿ ಬೆಲೆಯ ಕಾರು ನೀಡಿ ಸದ್ದು ಮಾಡಿದ್ದಾರೆ.
ರಾಧಿಕಾ ಕುಮಾರಸ್ವಾಮಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಅಜಾಗ್ರತ' ಸಿನಿಮಾ ನಿರ್ದೇಶಕ ಎಂ ಶಶಿಧರ್ಗೆ ಐಷಾರಾಮಿ ಕಾರು ಉಡುಗೊರೆಯಾಗಿ ನೀಡಿದ್ದಾರೆ. ಸದ್ಯ ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿದಿದ್ದು, ಚಿತ್ರದ ರಫ್ ಕಾಪಿ ಹೊರ ಬಂದಿದೆ. ಈ ಚಿತ್ರದ ರಫ್ ಕಾಪಿ ನೋಡಿದ ನಿರ್ಮಾಪಕರಾಗಿರುವ ನಟಿ ರಾಧಿಕಾ ಸಹೋದರ ರವಿರಾಜ್ ಬಹಳ ಮೆಚ್ಚಿಕೊಂಡಿದ್ದಾರೆ. ಈ ಖುಷಿಯನ್ನು ಅದ್ಧೂರಿ ಉಡುಗೊರೆ ಮೂಲಕ ವ್ಯಕ್ತಪಡಿಸಿದ್ದು, ನಿರ್ದೇಶಕರ ಕೆಲಸವನ್ನು ಪ್ರಶಂಸಿದ್ದಾರೆ.
ನಿರ್ದೇಶಕರ ಕೆಲಸಕ್ಕೆ ಮೆಚ್ಚುಗೆ: ಚಿತ್ರ ಆರಂಭಕ್ಕೆ ಮುನ್ನ ನಿರ್ದೇಶಕರು ಕಥೆ ಹೇಳಿದ ರೀತಿಯಲ್ಲೇ ನಿರ್ಮಾಣ ಕೂಡ ನಡೆದಿದ್ದು, ಉತ್ತಮವಾಗಿ ಮೂಡಿ ಬಂದಿದೆ. ಚಿತ್ರ ನೋಡಿ ನನಗೆ ತುಂಬಾ ಖುಷಿಯಾಗಿದೆ. ಚಿತ್ರವನ್ನು ಉತ್ತಮವಾಗಿ ನಿರ್ದೇಶಿಸಿರುವ ನಿರ್ದೇಶಕರಿಗೆ ಉಡುಗೊರೆ ನೀಡುವ ಮನಸ್ಸಾಯಿತು. ಹಾಗಾಗಿ ಫಾರ್ಚ್ಯೂನರ್ ಕಾರನ್ನು ಉಡುಗೊರೆಯಾಗಿ ನೀಡುತ್ತೀದ್ದೇನೆ ಎಂದು ನಿರ್ಮಾಪಕ ರವಿರಾಜ್ ಹೇಳಿದರು. ಈ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿರುವುದು ವಿಶೇಷ.
ಎಂ ಶಶಿಧರ್ ಅವರಿಗೆ ಹೊಸ ವರ್ಷನ್ ಟೊಯೋಟಾ ಫಾರ್ಚೂನರ್ ಕಾರು ಇದಾಗಿದ್ದು, ಇದರ ಆನ್ ರೋಡ್ ಬೆಲೆ ಬರೋಬ್ಬರಿ 55 ಲಕ್ಷ ರೂಪಾಯಿ ಬೆಲೆ ಆಗಿದೆ.
ಚಿತ್ರದ ಕುರಿತು: ಅಜಾಗ್ರತ ಸಿನಿಮಾಗೆ ಬಾಲಿವುಡ್ ಖ್ಯಾತ ನಟ ಶ್ರೇಯಸ್ ತಲ್ಪಾಡೆ ನಾಯಕರಾಗಿದ್ದು, ಅವರಿಗೆ ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹೆಸರಾಂತ ನಟ ಬಾಬಿ ಸಿಂಹ ಸೇರಿದಂತೆ ರಾವ್ ರಮೇಶ್, ಸುನೀಲ್, ಆದಿತ್ಯ ಮೆನನ್, ರಾಘವೇಂದ್ರ ಶ್ರವಣ್, ದೇವರಾಜ್, ಜಯಪ್ರಕಾಶ್, ವಿನಯಾಪ್ರಸಾದ್ ಮುಂತಾದ ದೊಡ್ಡ ತಾರಾ ಬಳಗವನ್ನು ಸಿನಿಮಾದಲ್ಲಿ ಕಾಣಬಹುದಾಗಿದೆ.
ತೆಲುಗು, ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಸಂದೀಪ್ ವಲ್ಲೂರಿ ಛಾಯಾಗ್ರಹಣ, ಶ್ರೀಹರಿ ಸಂಗೀತ ನಿರ್ದೇಶನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಸದ್ಯದಲ್ಲೇ ಅಜಾಗ್ರತ ಚಿತ್ರ ತೆರೆಗೆ ಬರಲು ಸಿದ್ಧತೆ ನಡೆಸಿದೆ.
ಇದನ್ನೂ ಓದಿ: ಯೂಟ್ಯೂಬ್ನಲ್ಲಿ ಟ್ರೆಂಡಿಂಗ್ನಲ್ಲಿದೆ 'ಕೃಷ್ಣಂ ಪ್ರಣಯ ಸಖಿ' ಚಿತ್ರದ ಚಿನ್ನಮ್ಮ ಹಾಡು