ಎರ್ನಾಕುಲಂ (ಕೇರಳ): ಮಲಯಾಳಂ ಚಿತ್ರ ನಿರ್ದೇಶಕ ರಂಜಿತ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪದ ಹಿನ್ನೆಲೆಯಲ್ಲಿ ಬೆಂಗಾಲಿ ನಟಿ ಶ್ರೀಲೇಖಾ ಮಿತ್ರಾ ಅವರು ಕೊಚ್ಚಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ರಂಜಿತ್ ಅವರು ಕೇರಳ ರಾಜ್ಯ ಚಲನಚಿತ್ರ ಅಕಾಡೆಮಿಗೆ ರಾಜೀನಾಮೆ ಸಲ್ಲಿಸಿದ ಮರುದಿನವಾದ ಸೋಮವಾರದಂದು ಶ್ರೀಲೇಖಾ ಅವರು ಇಮೇಲ್ ಮೂಲಕ ಈ ದೂರು ಸಲ್ಲಿಸಿದ್ದಾರೆ.
2009ರಲ್ಲಿ ರಂಜಿತ್ ನಿರ್ದೇಶನದ 'ಪಲೇರಿಮಾಣಿಕ್ಕಂ' ಚಿತ್ರದಲ್ಲಿ ನಟಿಸಲು ನನಗೆ ಆಹ್ವಾನ ಬಂದಿತ್ತು. ಚರ್ಚೆಯ ಭಾಗವಾಗಿ ಕೊಚ್ಚಿಯ ಕಾಲೂರ್ ಕಡವಂತ್ರದಲ್ಲಿ ರಂಜಿತ್ ಅವರು ತಾವು ವಾಸವಿದ್ದ ಫ್ಲಾಟ್‌ಗೆ ನನ್ನನ್ನು ಕರೆದಿದ್ದರು. ಚಿತ್ರದಲ್ಲಿನ ಪಾತ್ರದ ಕುರಿತು ಚರ್ಚಿಸಲು ತೆರಳಿದ್ದಾಗ ಆಗ ಅವರು ತಮ್ಮೊಂದಿಗೆ ಲೈಂಗಿಕವಾಗಿ ಅನುಚಿತವಾಗಿ ವರ್ತಿಸಿದ್ದರು ಎಂದು ನಟಿ ಈ ದೂರಿನಲ್ಲಿ ವಿಸ್ತೃತವಾಗಿ ವಿವರಿಸಿದ್ದಾರೆ.
ಭೇಟಿಯ ಸಮಯದಲ್ಲಿ, ರಂಜಿತ್ ಅವರು ಆರಂಭದಲ್ಲಿ ತನ್ನ ಕೈ ಮುಟ್ಟಿದರು. ನಂತರ ಲೈಂಗಿಕ ಉದ್ದೇಶದಿಂದ ತನ್ನ ದೇಹದ ಇತರ ಭಾಗಗಳನ್ನು ಸ್ಪರ್ಶಿಸಲು ಪ್ರಯತ್ನಿಸಿದರು. ಅವರ ಉದ್ದೇಶ ಚಿತ್ರಕ್ಕೆ ಸಂಬಂಧಿಸಿಲ್ಲವೆಂದು ನನಗೆ ಅರ್ಥವಾಯಿತು. ತಕ್ಷಣ ನಾನು ಫ್ಲಾಟ್‌ನಿಂದ ತಪ್ಪಿಸಿಕೊಂಡು ನಾನು ಉಳಿದುಕೊಂಡಿದ್ದ ಹೋಟೆಲ್‌ಗೆ ಮರಳಬೇಕಾಯಿತು. ನನ್ನ ಪ್ರಯಾಣದ ಟಿಕೆಟ್ ನೀಡದ ಕಾರಣ, ಮರುದಿನ, ಚಿತ್ರಕಥೆಗಾರ ಜೋಶಿ ಜೋಸೆಫ್ ಅವರೊಂದಿಗೆ ತಮ್ಮ ಸಂಕಟದ ಅನುಭವವನ್ನು ಹಂಚಿಕೊಳ್ಳಬೇಕಾಯಿತು ಎಂದು ಶ್ರೀಲೇಖಾ ಮಿತ್ರಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಾನು ಕೋಲ್ಕತ್ತಾದಿಂದ ಬಂದಿದ್ದುದರಿಂದ ಹಾಗೂ ಸ್ಥಳೀಯ ಕಾನೂನು ಪ್ರಕ್ರಿಯೆಯ ಬಗ್ಗೆ ನನಗೆ ಅರಿವಿಲ್ಲದೇ ಇದ್ದುದರಿಂದ, ನಾನು ಮೊದಲಿಗೆ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾಗಲಿಲ್ಲ. ಆದರೆ ಇದೀಗ ಮುಂದೆ ಬಂದಿದ್ದೇನೆ ಎಂದೂ ಅವರು ಹೇಳಿಕೊಂಡಿದ್ದಾರೆ. ನನ್ನ ಇಮೇಲ್ ಅನ್ನೇ ಅಧಿಕೃತ ದೂರೆಂದು ಪರಿಗಣಿಸಿ, ರಂಜಿತ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆಯೂ ಕೊಚ್ಚಿ ಪೊಲೀಸರಿಗೆ ಮಿತ್ರಾ ಮನವಿ ಮಾಡಿದ್ದಾರೆ.
ಈ ದೂರಿನ ಮೇರೆಗೆ ಎರ್ನಾಕುಲಂ ಉತ್ತರ ಪೊಲೀಸರು ಇದೀಗ ನಿರ್ದೇಶಕ ರಂಜಿತ್ ವಿರುದ್ಧ ಪ್ರಕರಣ ಕೂಡ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ನಟಿಯರ ದೌರ್ಜನ್ಯ ಆರೋಪ: ಮಲಯಾಳಂ ನಿರ್ದೇಶಕ ರಂಜಿತ್, ನಟ ಸಿದ್ದಿಕ್ ರಾಜೀನಾಮೆ - sexual assault allegations