ಫುಡ್ ಪಾಯ್ಸನ್ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಆಸ್ಪತ್ರೆಗೆ ದಾಖಲಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ವರದಿಗಳ ಪ್ರಕಾರ, ನಟಿಯ ಆರೋಗ್ಯ ಸ್ಥಿತಿ ಹದಗೆಟ್ಟ ನಂತರ (ಇಂದು, ಜುಲೈ 18) ಆಸ್ಪತ್ರೆಗೆ ದಾಖಲಿಸಲಾಯಿತು. ತಂದೆ ಬೋನಿ ಕಪೂರ್ ಮಾಧ್ಯಮಗಳೊಂದಿಗೆ ಮಾತನಾಡಿ, ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಒಂದೆರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಉಳಿಯುವ ಸಾಧ್ಯತೆಯಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಆಸ್ಪತ್ರೆಗೆ ಸೇರಿಸುವ ಮೊದಲು ಮನೆಯಲ್ಲೇ ನಟಿ ಅನಾರೋಗ್ಯದಿಂದ ಬಳಲಿದ್ದರು. ಬಹಳಷ್ಟು ಆಯಾಸದಿಂದ ಬಳಲಿದ್ದರು. ಆಪ್ತ ಸ್ನೇಹಿತರೊಬ್ಬರು ಸುದ್ದಿವಾಹಿನಿಗೆ ನಟಿಯ ಅನಾರೋಗ್ಯ ವಿಚಾರವನ್ನು ಬಹಿರಂಗಪಡಿಸಿದ್ದು, ಅವರ ಆರೋಗ್ಯ ಹದಗೆಟ್ಟಿರುವ ಕಾರಣ ಒಂದು ವಾರದ ಎಲ್ಲಾ ಅಪಾಯಿಂಟ್‌ಮೆಂಟ್‌ಗಳನ್ನು ರದ್ದುಗೊಳಿಸಿದ್ದಾರೆ. ಇಂದು ನಟಿಯ ಸ್ಥಿತಿ ಹದಗೆಟ್ಟ ಹಿನ್ನೆಲೆ ಕುಟುಂಬಸ್ಥರು ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯಲು, ಆಸ್ಪತ್ರೆಗೆ ದಾಖಲಾಗಲು ಸೂಚಿಸಿದ್ದರು. ಅದರಂತೆ ನಟಿ ಈಗ ಮುಂಬೈನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚೇತರಿಕೆ ಕಡೆ ಗಮನ ಹರಿಸಿದ್ದರೂ, ಸದ್ಯ ಬಹಳ ದುರ್ಬಲರಾಗಿದ್ದಾರೆ. ವರದಿಗಳ ಪ್ರಕಾರ, ನಾಳೆ (ಜುಲೈ 19, ಶುಕ್ರವಾರ) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ನಿರೀಕ್ಷೆಯಿದೆ. ಹಲವು ಸುದ್ದಿಗಳ ಹೊರತಾಗಿಯೂ, ಜಾಹ್ನವಿ ಇನ್ನೂ ಯಾವುದೇ ಹೇಳಿಕೆಗಳನ್ನು ಬಿಡುಗಡೆ ಮಾಡಿಲ್ಲ, ವರದಿಗಳಿಗೆ ಪ್ರತಿಕ್ರಿಯಿಸಿಲ್ಲ.
ಇದನ್ನೂ ಓದಿ: ಮನೆಯೂಟ ಕೇಳಿದ್ದ ದರ್ಶನ್: ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಿದ ಹೈಕೋರ್ಟ್ - Darshan Application Hearing
ಜಾಹ್ನವಿ ಕಪೂರ್ ಸಿನಿಮಾ ವಿಚಾರ ಗಮನಿಸುವುದಾದರೆ, ಕೊನೆಯದಾಗಿ ಮಿಸ್ಟರ್ ಆ್ಯಂಡ್ ಮಿಸಸ್ ಮಹಿ ಚಿತ್ರದಲ್ಲಿ ಕಾಣಿಸಿಕೊಂಡರು. ರಾಜ್‌ಕುಮಾರ್ ರಾವ್ ಜೊತೆ ತೆರೆ ಹಂಚಿಕೊಂಡಿದ್ದರು. ಮೇ 31ರಂದು ತೆರೆಗಪ್ಪಳಿಸಿದ ಸಿನಿಮಾ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಮಿಶ್ರ ವಿಮರ್ಶೆಗಳನ್ನು ಸ್ವೀಕರಿಸಿದೆ. ಇನ್ನೂ, 'ದೇವರ' ಸೇರಿದಂತೆ ಹಲವು ಪ್ರಾಜೆಕ್ಟ್ಗಳು ನಟಿ ಬಳಿ ಇವೆ.
ಬಾಲಿವುಡ್ನಲ್ಲಿ ಭದ್ರ ಸ್ಥಾನ ಹೊಂದಿರುವ ಜಾಹ್ನವಿ, ತೆಲುಗಿನ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. 'ದೇವರ' 2024ರ ಬಹುನಿರೀಕ್ಷಿತ ಸಿನಿಮಾ. ಇದೇ ಮೊದಲ ಬಾರಿಗೆ ಆರ್ಆರ್ಆರ್ ಸ್ಟಾರ್ ಜೂನಿಯರ್ ಎನ್ಟಿಆರ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಇದು ನಟಿಯ ಟಾಲಿವುಡ್ನ ಮೊದಲ ಸಿನಿಮಾ. ಕೊರಟಾಲ ಶಿವ ನಿರ್ದೇಶನದ ಈ ಸಿನಿಮಾ ಬಹುತೇಕ ಅಂತಿಮ ಹಂತಿದಲ್ಲಿದೆ. ಸೆಪ್ಟೆಂಬರ್ 27ಕ್ಕೆ ಬಹುಭಾಷೆಗಳಲ್ಲಿ ಚಿತ್ರಮಂದಿರ ಪ್ರವೇಶಿಸಲಿದೆ. ಇದಲ್ಲದೇ, ಸೌತ್ ಸೂಪರ್ ಸ್ಟಾರ್ ರಾಮ್ ಚರಣ್ ಜೊತೆಯೂ ಕಾಣಿಸಿಕೊಳ್ಳಲಿದ್ದಾರೆ. ಬುಚ್ಚಿಬಾಬು ಸನಾ ಆ್ಯಕ್ಷನ್ ಕಟ್ ಹೇಳಲಿರುವ ಈ ಸಿನಿಮಾ ಶೀಘ್ರದಲ್ಲೇ ಸೆಟ್ಟೇರಲಿದ್ದು, ಮುಹೂರ್ತ ಸಮಾರಂಭ ಈಗಾಗಲೇ ನಡೆದಿದೆ. ಉಲಜ್ಹ್, ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ ಸಿನಿಮಾ ಕೂಡ ನಟಿ ಬಳಿ ಇದೆ. ಜತೆಗೆ, ಸೌತ್ನ ನ್ಯಾಚುರಲ್ ಸ್ಟಾರ್ ನಾನಿ ಜತೆ ಸಿನಿಮಾವೊಂದಕ್ಕೆ ಮಾತುಕತೆ ನಡೆಯುತ್ತಿದೆ.