ದಿ. ನಿರ್ದೇಶಕ ದಾಸರಿ ನಾರಾಯಣ ರಾವ್ ಅವರ ಜನ್ಮದಿನ ಹಾಗೂ ತೆಲುಗು ಚಲನಚಿತ್ರೋದ್ಯಮ (ಟಿಎಫ್‌ಐ)ದಲ್ಲಿ ಅವರ ಸಾಧನೆಗಳನ್ನು ಗೌರವಿಸುವ ಸಲುವಾಗಿ ತೆಲುಗು ಚಿತ್ರರಂಗ (ಟಾಲಿವುಡ್) ಪ್ರತೀ ವರ್ಷ ಮೇ 4ರಂದು ನಿರ್ದೇಶಕರ ದಿನವನ್ನು ಆಚರಿಸುತ್ತದೆ. ತೆಲುಗು ಚಲನಚಿತ್ರ ನಿರ್ದೇಶಕರ ಸಂಘ (ಟಿಎಫ್‌ಡಿಎ) ತನ್ನ ಇತ್ತೀಚಿನ ಸಭೆಯಲ್ಲಿ, ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರು ಸಂಘದ ಕಲ್ಯಾಣಕ್ಕಾಗಿ 35 ಲಕ್ಷ ರೂ. ದೇಣಿಗೆ ನೀಡಿರುವುದಾಗಿ ತಿಳಿಸಿದ್ದಾರೆ. ಸಮಿತಿಯು ಪ್ರಭಾಸ್ ಅವರಿಗೆ ಆಪಾರ ಮೆಚ್ಚುಗೆ ವ್ಯಕ್ತಪಡಿಸಿದೆ.
ನಿರ್ದೇಶಕರ ದಿನಾಚರಣೆಗೆ ಕೆಲ ದಿನಗಳಷ್ಟೇ ಬಾಕಿ ಇರುವ ಈ ಸಂದರ್ಭ ಸೌತ್ ಸೂಪರ್ ಸ್ಟಾರ್ ದೇಣಿಗೆ ನೀಡಿದ್ದು, ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪ್ರತಿ ವರ್ಷ ಮೇ 4ರಂದು ನಿರ್ದೇಶಕರ ದಿನವನ್ನು ಆಚರಿಸಲಾಗುತ್ತದೆ. ಅದರಂತೆ ಈ ಸಾಲಿನಲ್ಲೂ ಬಹಳ ಸಂಭ್ರಮ ಸಡಗರದಿಂದ ಆಚರಿಸುವ ಉದ್ದೇಶವಿದೆ. ನಿನ್ನೆ ರಾತ್ರಿ ನಡೆದ ಈ ಅನೌನ್ಸ್ಮೆಂಟ್ ಪ್ರೋಗ್ರಾಮ್ನಲ್ಲಿ ನಿರ್ದೇಶಕರ ಸಂಘದ ಸದಸ್ಯರು ಹಾಗೂ ಇತರೆ ಹಲವು ನಿರ್ದೇಶಕರು ಭಾಗಿಯಾಗಿದ್ದರು. 2024ರ ತೆಲುಗು ಚಲನಚಿತ್ರ ನಿರ್ದೇಶಕರ ದಿನವನ್ನು ಮೇ 4 ರಂದು ಹೈದರಾಬಾದ್‌ನ ಎಲ್‌ಬಿ ಸ್ಟೇಡಿಯಂನಲ್ಲಿ ನಿಗದಿಪಡಿಸಲಾಗಿದೆ.
ಈವೆಂಟ್ನಲ್ಲಿ ಮಾತನಾಡಿದ ನಿರ್ದೇಶಕ ಮಾರುತಿ, ನಿರ್ದೇಶಕರ ಸಂಘಕ್ಕೆ ಪ್ರಭಾಸ್ 35 ಲಕ್ಷ ರೂ. ಕೊಡುವುದಾಗಿ ಘೋಷಿಸಿದ್ದಾರೆ. ಪ್ರಭಾಸ್ ಕರೆ ಮಾಡಿ ಈ ಬಗ್ಗೆ ಮಾತನಾಡಿದ್ದು, ಸಮಾರಂಭಕ್ಕೆ 35 ಲಕ್ಷ ರೂ. ನೀಡುವುದಾಗಿ ಹೇಳಿದ್ದಾರೆಂದು ತಿಳಿಸಿದರು. ನಿರ್ದೇಶಕರ ಭಾಷಣದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಶರವೇಗದಲ್ಲಿ ವೈರಲ್ ಆಗಿದ್ದು, ಪ್ರಭಾಸ್ ಅಭಿಮಾನಿಗಳು, ನೆಟ್ಟಿಗರು ಮತ್ತೊಮ್ಮೆ ನಟನ ಸ್ವಭಾವವನ್ನು ಹಾಡಿ ಹೊಗಳಿದ್ದಾರೆ. ನಿರ್ಮಾಪಕ ಎಸ್‌ಕೆಎನ್ ಕೂಡ ನಿರ್ದೇಶಕರ ಸಂಘಕ್ಕೆ 10 ಲಕ್ಷ ರೂ. ನೀಡುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಯುವ ಜನತೆಗೆ 'ಮತದಾನ'ದ ಮಹತ್ವ ಸಾರಿದ ಚಂದನವನದ ತಾರೆಯರು: ರ‍್ಯಾಪ್ ಸಾಂಗ್ ರಿಲೀಸ್ - Vote Namma Power
ಸಿನಿಮಾ ವಿಚಾರ ಗಮನಿಸುವುದಾದರೆ ಪ್ರಭಾಸ್ ಕೊನೆಯದಾಗಿ ಸಲಾರ್ನಲ್ಲಿ ಕಾಣಿಸಿಕೊಂಡಿದ್ದು, ಚಿತ್ರ ಸೂಪರ್ ಹಿಟ್ ಆಗಿತ್ತು. ಪ್ರಸ್ತುತ ಹೈದರಾಬಾದ್‌ನಲ್ಲಿ ಮಾರುತಿ ಅವರ ದಿ ರಾಜಾ ಸಾಬ್ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಚಿತ್ರದ ಪ್ರಮುಖ ಭಾಗಗಳಲ್ಲಿ ನಿಧಿ ಅಗರ್ವಾಲ್ ಮತ್ತು ಮಾಳವಿಕಾ ಮೋಹನನ್ ಕೂಡ ಇದ್ದಾರೆ. ತಮನ್ ಎಸ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಇದಲ್ಲದೇ, ನಾಗ್ ಅಶ್ವಿನ್ ನಿರ್ದೇಶನದ 2898 ಎಡಿ ಚಿತ್ರವನ್ನೂ ಹೊಂದಿದ್ದಾರೆ. ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಮತ್ತು ಕಮಲ್ ಹಾಸನ್, ದಿಶಾ ಪಟಾನಿ ಪ್ರಮುಖ ಭಾಗಗಳಲ್ಲಿ ನಟಿಸಿದ್ದಾರೆ. ಇನ್ನು ಸಂದೀಪ್ ರೆಡ್ಡಿ ವಂಗಾ ಅವರ ಸ್ಪಿರಿಟ್ ಚಿತ್ರದಲ್ಲೂ ಪ್ರಭಾಸ್ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: 'ಉತ್ತರಕಾಂಡ' ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ಐಶ್ವರ್ಯಾ ರಾಜೇಶ್ - Aishwarya Rajesh