ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸಾರಥ್ಯದಲ್ಲಿ ಮೂಡಿ ಬರುವ ಭಾರತೀಯ ಮನರಂಜನಾ ಕ್ಷೇತ್ರದ ಅತ್ಯಂತ ದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್ ಹಿಂದಿ' ತನ್ನ 18ನೇ ಸೀಸನ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಕಳೆದ ರಾತ್ರಿ ಈ ಸೀಸನ್ನ ಗ್ರ್ಯಾಂಡ್ ಫಿನಾಲೆ ಪ್ರಸಾರ ಕಂಡಿದ್ದು, ನಟ ಕರಣ್ ವೀರ್ ಮೆಹ್ರಾ ವಿಜೇತರಾಗಿ ಹೊರಹೊಮ್ಮಿದ್ದಾರೆ.
ಕರಣ್ ಅವರು ತಮ್ಮ ಸಹ ಸ್ಪರ್ಧಿ, ಕಿರಿತೆರೆಯ ಅತ್ಯಂತ ಜನಪ್ರಿಯ ನಟ ವಿವಿಯನ್ ಡಿಸೆನಾ ಅವರನ್ನು ಹಿಂದಿಕ್ಕಿ ಟ್ರೋಫಿ ತಮ್ಮದಾಗಿಸಿಕೊಂಡಿದ್ದಾರೆ. ಹಿಂದಿಯ 18ನೇ ಸೀಸನ್ ಅಕ್ಟೋಬರ್ 6, 2024ರಂದು ಪ್ರಸಾರ ಪ್ರಾರಂಭಿಸಿತು. 100ಕ್ಕೂ ಹೆಚ್ಚು ಸಂಚಿಕೆಗಳು ಪ್ರಸಾರ ಕಂಡಿವೆ. ಭಾನುವಾರ ತಡರಾತ್ರಿ ಪ್ರಸಾರವಾದ ಗ್ರ್ಯಾಂಡ್ ಫಿನಾಲೆ ಮೂಲಕ 18ನೇ ಸೀಸನ್ ಯಶಸ್ವಿಯಾಗಿ ಕೊನೆಗೊಂಡಿದೆ.
ಫೈನಲಿಸ್ಟ್ಗಳು: ಗ್ರ್ಯಾಂಡ್ ಫಿನಾಲೆ ವೇದಿಕೆಯನ್ನು ಕರಣ್ ವೀರ್ ಮೆಹ್ರಾ, ವಿವಿಯನ್ ಡಿಸೆನಾ, ರಜತ್ ದಲಾಲ್, ಅವಿನಾಶ್ ಮಿಶ್ರಾ, ಚುಮ್ ದರಂಗ್ ಮತ್ತು ಈಶಾ ಸಿಂಗ್ ಹಂಚಿಕೊಂಡರು.
ನನ್ನ ಮೇಲೆ ನನಗೆ ಬಹಳ ನಂಬಿಕೆ ಇತ್ತು: ಭಾರತೀಯ ಕಿರುತೆರೆಯ ಮತ್ತೊಂದು ಜನಪ್ರಿಯ ಶೋ 'ಖತ್ರೋನ್ ಕೆ ಖಿಲಾಡಿ 14'ರಲ್ಲಿ ಗೆದ್ದು ಬೀಗಿದ್ದ ಕರಣ್ ವೀರ್ ಮೆಹ್ರಾ ಬಿಗ್ ಬಾಸ್ 18ರಲ್ಲಿಯೂ ಗೆಲುವಿನ ನಗೆ ಬೀರಿದ್ದಾರೆ. ಸತತ ಗೆಲುವಿನೊಂದಿಗೆ ಅಭಿಮಾನಿಗಳ ಮೊಗದಲ್ಲಿ ಖುಷಿ ತರಿಸಿದ್ದಾರೆ. ತಮ್ಮ ಈ ಅಭೂತಪೂರ್ವ ಯಶಸ್ಸಿನ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಕರಣ್, "ನನಗೆ ಬಹಳ ಸಂತೋಷವಾಗುತ್ತಿದೆ. ಐ ಆ್ಯಮ್ ದ ಚೂಸೆನ್ ಒನ್. ಬ್ಯಾಕ್ ಟು ಬ್ಯಾಕ್ ರಿಯಾಲಿಟಿ ಶೋಗಳನ್ನು ಗೆಲ್ಲುವ ಅಪರೂಪದ ಕೆಲಸ ಮಾಡಿದ್ದೇನೆ. ನನ್ನ ಮೇಲೆ ನನಗೆ ಬಹಳ ನಂಬಿಕೆ ಇತ್ತು. ಅದಕ್ಕೆ ತಕ್ಕ ಪರಿಶ್ರಮ ಹಾಕಿದೆ. ಉನ್ನತ ಸ್ಥಾನಕ್ಕೆ ಗುರಿಯಿಟ್ಟುಕೊಂಡೆ. ಕನಸೀಗ ನನಸಾಗಿದೆ" ಎಂದು ತಿಳಿಸಿದರು.
ರಿಯಾಲಿಟಿ ಶೋಗಳ ಮೂಲಕ ತಮ್ಮಲ್ಲಾದ ಬದಲಾವಣೆಗಳ ಬಗ್ಗೆ ಮಾತನಾಡಿದ ಪವಿತ್ರ ರಿಷ್ತಾ ನಟ, "ನನ್ನ ಬಗ್ಗೆ ನಾನು ಅರಿತುಕೊಂಡೆ, ಉದಾಹರಣೆಗೆ ನಾನು ಭಾವನಾತ್ಮಕ ವ್ಯಕ್ತಿ. ಮೊದ ಮೊದಲು, ನಾನು ಸಣ್ಣ ಸಣ್ಣ ವಿಷಯಗಳಿಗೂ ಕಣ್ಣೀರು ಹಾಕುತ್ತಿದ್ದಾಗ, ಬ್ಯಾಡ್ ಫೀಲ್ ಆಗುತ್ತಿತ್ತು. ಆದ್ರೀಗ ಅದು ಸರಿ ಎಂದು ನಾನು ನಂಬುತ್ತೇನೆ" ಎಂದು ತಿಳಿಸಿದರು.
ಇದನ್ನೂ ಓದಿ: ಬೆಂಗಳೂರಿನ ಶಾಲಾ ದಿನಗಳ ಬಗ್ಗೆ ಅಚ್ಚಕನ್ನಡದಲ್ಲಿ ಮೆಲುಕು ಹಾಕಿದ ರಜನಿಕಾಂತ್: ತಲೈವಾ ಕನ್ನಡ ಬಲು ಸೂಪರ್ - ವಿಡಿಯೋ
ಕರಣ್ ಪಯಣ ಅಷ್ಟೇನೂ ಸುಲಭವಾಗಿರಲಿಲ್ಲ: ಬಿಗ್ ಬಾಸ್ ಮನೆಯಲ್ಲಿ ಅವರ ಪ್ರಯಾಣ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಜನಪ್ರಿಯ ಶೋನ ಸ್ವರೂಪವು ಅವರ ತಾಳ್ಮೆ ಮತ್ತು ಕೌಶಲ್ಯಗಳನ್ನು ಪರೀಕ್ಷಿಸುತ್ತಿತ್ತು. 3 ತಿಂಗಳಿಗೂ ಹೆಚ್ಚು ಕಾಲ ನಡೆದ ಈ ಪಯಣದಲ್ಲಿ ಅವರು ಮತ್ತೋರ್ವ ಟಫ್ ಕಾಂಪಿಟೇಟರ್ ವಿವಿಯನ್ ಡಿಸೆನಾ ಅವರೊಂದಿಗೆ ಸ್ಪರ್ಧೆಗಿಳಿದಿದ್ದರು. ಸಾರಾ ಖಾನ್ ಅವರೊಂದಿಗಿನ ಜಗಳ ಮತ್ತು ಅವಿನಾಶ್ ಮಿಶ್ರಾ ಅವರೊಂದಿಗಿನ ಕ್ಷಣಗಳಲ್ಲಿ ಇವರ ಪಾತ್ರ ಮಹತ್ವದ್ದಾಗಿತ್ತು. ಎಲ್ಲದಕ್ಕಿಂತ ಹೆಚ್ಚಾಗಿ ನಟಿ ಚುಮ್ ದರಂಗ್ ಜೊತೆಗಿನ ಬಾಂಧವ್ಯ ಹೈಲೆಟ್ ಆಗಿದ್ದು, ತಮ್ಮ ಪ್ರೀತಿ ಘೋಷಿಸಲಿದ್ದಾರಾ ಎಂದು ಅಭಿಮಾನಿಗಳು ಕಾತರರಾಗಿದ್ದಾರೆ. ನಟಿ ಚುಮ್ ದರಂಗ್ ಅಲ್ಲದೇ ನಟಿ ಶಿಲ್ಪಾ ಶಿರೋಡ್ಕರ್ ಜೊತೆ ಅತ್ಯತ್ತಮ ಬಾಂಧವ್ಯ ಹೊಂದಿದ್ದು, ಈ ಮೂವರ ಸ್ನೇಹ ಇತರರಿಗೆ ಮಾದರಿ ಎಂಬಂತಿತ್ತು.
ಇದನ್ನೂ ಓದಿ: 'ಸ್ಟ್ರೆಚರ್ ತನ್ನಿ, ನಾನು ಸೈಫ್ ಅಲಿ ಖಾನ್': ರಕ್ತಸಿಕ್ತಗೊಂಡಿದ್ದ ನಟನನ್ನು ಆಸ್ಪತ್ರೆಗೆ ಕರೆದೊಯ್ದ ಆಟೋ ಚಾಲಕ ಹೇಳಿದ್ದಿಷ್ಟು
ಅಂತಿಮ ಹಂತದಲ್ಲಿ ಒಟ್ಟು ಆರು ಸ್ಪರ್ಧಿಗಳು ವೇದಿಕೆ ಹಂಚಿಕೊಂಡರು. ಟ್ರೋಫಿ ಮತ್ತು 50 ಲಕ್ಷ ರೂಪಾಯಿ ಬಹುಮಾನಕ್ಕಾಗಿ ತಮ್ಮ ಕೈಲಾದಷ್ಟು ಸ್ಪರ್ಧೆ ನೀಡಿದರು. ಫಿನಾಲೆಯಲ್ಲಿ ರಜತ್ ದಲಾಲ್ ಮೂರನೇ ಸ್ಥಾನ, ಅವಿನಾಶ್ ಮಿಶ್ರಾ ನಾಲ್ಕನೇ ಸ್ಥಾನ, ಚುಮ್ ದರಂಗ್ ಐದನೇ ಸ್ಥಾನ ಮತ್ತು ಈಶಾ ಸಿಂಗ್ ಆರನೇ ಸ್ಥಾನವನ್ನು ಪಡೆದುಕೊಂಡರು.