ಉಳ್ಳಾಲ(ದಕ್ಷಿಣ ಕನ್ನಡ): ಕುತ್ತಾರು ದೆಕ್ಕಾಡುವಿನ ಕೊರಗಜ್ಜನ ಆದಿಸ್ಥಳಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಹಲವು ನಟರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಮಂಡ್ಯ ಸಂಸದೆ ಸುಮಲತಾ ಪರ ಪ್ರಚಾರ ವಿಚಾರವಾಗಿ ಪ್ರತಿಕ್ರಿಯಿಸಿ, "ಹೆತ್ತ ತಾಯಿಯನ್ನು ಎಂದಾದರೂ ಬಿಟ್ಟು ಕೊಡಕ್ಕಾಗುತ್ತಾ?" ಎಂದರು.
ದೈವ ಕಾರ್ಯಗಳ ಬಳಿಕ ಮಾತನಾಡಿದ ದರ್ಶನ್, "ಸುಮಲತಾ ಅಮ್ಮನವರ ಜೊತೆಗಿದ್ದೇನೆ. ಈಗ ಅವರ ಕೈ ಬಿಟ್ರೆ ಆಗುತ್ತಾ ಸರ್? ನಿಮ್ಮ ಮನೇಲಿ ನಿಮ್ಮ ತಾಯಿಯನ್ನು ಬಿಟ್ ಬಿಡ್ತೀರಾ?, ಸುಮಲತಾ ಅಮ್ಮ ಅಮ್ಮನೇ ಸರ್" ಎಂದು ತಿಳಿಸಿದರು.
"ಮಂಗಳೂರಿಗೆ ಹಲವು ಬಾರಿ ಬಂದಿದ್ದೇನೆ. ಆದರೆ ಕುತ್ತಾರಿಗೆ ಭೇಟಿ ಕೊಡಲು ಆಗಿರಲಿಲ್ಲ. ಹಲವರು ಈ ಕ್ಷೇತ್ರದ ಬಗ್ಗೆ ಹೇಳಿದ್ದರು. ಹಾಗಾಗಿ ಭೇಟಿ ನೀಡಿ ಪ್ರಾರ್ಥಿಸಿದ್ದೇನೆ. ನಾನು ಭೇಟಿ ನೀಡಿರುವುದಕ್ಕೆ ಯಾವುದೇ XYZ ಕಾರಣಗಳಿಲ್ಲ" ಎಂದು ಸ್ಪಷ್ಟಪಡಿಸಿದರು.
ಏನು ಪ್ರಾರ್ಥಿಸಿದಿರಿ ಎಂಬ ಪ್ರಶ್ನೆಗೆ, "ನಾನು ಏನು ಪ್ರಾರ್ಥನೆ ಮಾಡಿದ್ದೇನೆ ಎಂದು ಹೇಳಿದರೆ, ನೀವು ಆ ಕೆಲಸ ಮಾಡಿಕೊಡ್ತೀರಾ?" ಎಂದು ಗರಂ ಆದರು.
ಈ ಸಂದರ್ಭದಲ್ಲಿ ಹಾಸ್ಯ ನಟ ಚಿಕ್ಕಣ್ಣ, ಪ್ರಶಾಂತ್ ಮಾರ್ಲ, ಮಹಾಬಲ ಶೆಟ್ಟಿ , ವಿದ್ಯಾಚರಣ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಪ್ರೀತಮ್ ಶೆಟ್ಟಿ ಹಾಗೂ ಕೊರಗಜ್ಜ ಆದಿಸ್ಥಳ ದೆಕ್ಕಾಡುವಿನ ಟ್ರಸ್ಟಿಗಳು ಉಪಸ್ಥಿತರಿದ್ದರು. ಭಾನುವಾರವಾದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಅಜ್ಜನ ದರ್ಶನಕ್ಕೆ ಆಗಮಿಸಿದ್ದರು. 'ಡಿಬಾಸ್' ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಈ ಸಂದರ್ಭದಲ್ಲಿ ಜೊತೆಗಿದ್ದ ಅಂಗರಕ್ಷಕರು ಅಭಿಮಾನಿಗಳ ಕಾಲರ್ ಹಿಡಿದು ತಳ್ಳಿದ್ದು, ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಯಶ್, ದರ್ಶನ್ ಅವರಿಂದ ಮತ್ತೆ ಪ್ರಚಾರದ ನಿರೀಕ್ಷೆ ಮಾಡಲು ಮನಸ್ಸು ಒಪ್ಪುತ್ತಿಲ್ಲ: ಸುಮಲತಾ
ಕೆಲವು ದಿನಗಳ ಹಿಂದೆ ಸಂಸದೆ ಸುಮಲತಾ ಅವರು ಚುನಾವಣಾ ಪ್ರಚಾರದ ಬಗ್ಗೆ ಮಾತನಾಡಿದ್ದರು. ಸ್ಯಾಂಡಲ್ವುಡ್ನ ರಾಕಿಂಗ್ ಸ್ಟಾರ್ ಸದ್ಯ ಯಶ್ ಪ್ಯಾನ್ ಇಂಡಿಯಾ ಸ್ಟಾರ್. ಬಹಳ ಬ್ಯುಸಿ ಶೆಡ್ಯೂಲ್ ಹೊಂದಿದ್ದಾರೆ. ಹಾಗಾಗಿ ಅವರಿಂದ ಮತ್ತೆ ಪ್ರಚಾರವನ್ನು ನಿರೀಕ್ಷಿಸಲು ನನ್ನ ಮನಸ್ಸು ಒಪ್ಪುತ್ತಿಲ್ಲ ಎಂದಿದ್ದರು. ಇದರ ಜೊತೆಗೆ, ಯಶ್ ಮತ್ತು ದರ್ಶನ್ ಅವರದ್ದು ಕೇವಲ ಬೆಂಬಲವಲ್ಲ, ಅದು ತ್ಯಾಗ. ನಿಸ್ವಾರ್ಥ ಮನೋಭಾವದಿಂದ ನನ್ನ ಜೊತೆ ನಿಂತಿದ್ದರು. ಆದರೆ ಅವರ ನಿರಂತರ ಸಿನಿಮಾ ಕೆಲಸಗಳ ನಡುವೆ ನನ್ನ ಕೆಲಸಕ್ಕೆ ಕರೆಯಲು ಮನಸ್ಸು ಒಪ್ಪುತ್ತಿಲ್ಲ. ಅವರು ಬಂದರೆ ಅದು ನನಗೆ ದೊಡ್ಡ ಶಕ್ತಿಯಾಗಿರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ತಿಳಿಸಿದ್ದರು.
ಇದನ್ನೂ ಓದಿ: ಶಿವಣ್ಣನ 'ಭೈರತಿ ರಣಗಲ್' ರಿಲೀಸ್ ಡೇಟ್ ಅನೌನ್ಸ್: ಪುಷ್ಪ 2 ಜೊತೆ ಫೈಟ್!