ತಾರಾಬಳಗದ ಮೂಲಕವೇ ಚಂದನವನದಲ್ಲಿ ಸದ್ದು ಮಾಡುತ್ತಿರುವ ಸಿನಿಮಾ ಫೈರ್ ಫ್ಲೈ. ಕಳೆದ ವಾರವಷ್ಟೇ ನಟಿ ಸುಧಾರಾಣಿ ಚಿತ್ರತಂಡ ಸೇರಿಕೊಂಡಿದ್ದರು. ಇದೀಗ ಹಿರಿಯ ನಟ ಅಚ್ಯುತ್ ಕುಮಾರ್ ಅವರು 'ಫೈರ್ ಫ್ಲೈ'ನಲ್ಲಿ ಅಭಿನಯಿಸುತ್ತಿರುವ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಅಚ್ಯುತ್ ಕುಮಾರ್ ಇಲ್ಲಿ ನಾಯಕನ ತಂದೆಯ ಪಾತ್ರ ನಿಭಾಯಿಸಲಿದ್ದಾರೆ. ಅವರಿಗೆ ಜೋಡಿಯಾಗಿ ಸುಧಾರಾಣಿ ಅಭಿನಯಿಸುತ್ತಿದ್ದಾರೆ.
ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಅಚ್ಯುತ್ ಕುಮಾರ್, "ನಾನು ಹೀರೋ ತಂದೆಯ ಪಾತ್ರ ಮಾಡುತ್ತಿದ್ದೇನೆ. ಪಾತ್ರ ತುಂಬಾ ಇಂಟ್ರೆಸ್ಟಿಂಗ್ ಆಗಿದೆ. ಒಬ್ಬ ತಂದೆ ಮಗನ ಬಾಂಧವ್ಯ ಮತ್ತು ಅವರಿಬ್ಬರು ಫ್ರೆಂಡ್ಸ್ ಆಗಿದ್ರೆ ಹೇಗೆ ಮಜವಾಗಿರುತ್ತೆ ಅಂತ ಈ ಸಿನಿಮಾದಲ್ಲಿ ನೋಡಬಹುದು. ನನ್ನ ಕೋಸ್ಟಾರ್ ಆಗಿ ಸುಧಾರಾಣಿಯವರು ನಟಿಸುತ್ತಿದ್ದಾರೆ. ಮುಂಚೆ ಬೇರೆ ಸಿನಿಮಾಗಳಲ್ಲಿ ನಮ್ಮ ಜೋಡಿಯನ್ನು ನೋಡಿ ಜನ ಮೆಚ್ಚಿದ್ದರು. ಆದರೆ ಈ ಸಿನಿಮಾದಲ್ಲಿ ನಮ್ಮಿಬ್ಬರ ಜೋಡಿ ಹಿಂದಿನ ಸಿನಿಮಾಗಳಿಗಿಂತ ವಿಭಿನ್ನವಾಗಿದೆ. ಅದನ್ನು ನೀವು ಸ್ಕ್ರೀನ್ ಮೇಲೆ ನೋಡಬೇಕು. ಫೈರ್ ಫ್ಲೈ ತುಂಬಾ ಕಲರ್ಫುಲ್ ಆಗಿ ಮೂಡಿ ಬಂದಿದೆ ಮತ್ತು ತುಂಬಾ ಮನರಂಜನೆಯಿಂದ ಕೂಡಿದೆ. ನೀವು ಮಿಸ್ ಮಾಡದೆ ದೀಪಾವಳಿಗೆ ಈ ಚಿತ್ರವನ್ನು ಚಿತ್ರಮಂದಿರದಲ್ಲೇ ನೋಡಿ" ಎಂದು ಹೇಳಿದರು.
"ನಮ್ಮ ಶಿವಣ್ಣನ ಮಗಳು ನಿವೇದಿತಾ ಸಿನಿಮಾ ಮಾಡುತ್ತಿರುವುದು ತುಂಬಾ ಖುಷಿಯಾಗುತ್ತಿದೆ. ಶ್ರೀಮುತ್ತು ಸಿನಿ ಸರ್ವಿಸ್ ತುಂಬಾ ಪ್ರೊಪೆಷನಲ್ ಆಗಿ ಮುನ್ನಡೆಯುತ್ತಿರುವುದು ನೋಡಿದರೆ, ಇಂತಹದೊಂದು ನಿರ್ಮಾಣ ಸಂಸ್ಥೆ ಮತ್ತು ನಿರ್ಮಾಪಕಿ ನಮ್ಮ ಚಿತ್ರರಂಗಕ್ಕೆ ಬೇಕಿತ್ತು. ಮತ್ತು ಹೊಸಬರಿಗೆ ಅವಕಾಶ ಕೊಡುತ್ತಿರುವುದರಿಂದ ಹೊಸ ತಲೆಮಾರಿನ ಫಿಲ್ಮ್ ಮೇಕರ್ಗೆ ಅನುಕೂಲವಾಗುತ್ತದೆ. ಇವರು ಆಯ್ಕೆ ಮಾಡಿಕೊಂಡಿರುವ ಕಥೆ ಕುಟುಂಬವೇ ಕುಳಿತು ನೋಡುವಂತಹುದು. ಮತ್ತೆ ಮತ್ತೆ ಈ ಥರ ಹೊಸಬರಿಗೆ ಅವಕಾಶ ಕೊಡುವ ಮೂಲಕ, ಇವರ ನಿರ್ಮಾಣ ಸಂಸ್ಥೆ ನಮ್ಮ ಇಂಡಸ್ಟ್ರೀಯ ಮುಂದಿನ ಹೆಜ್ಜೆಗಳಿಗೆ ಮೆಟ್ಟಿಲುಗಳಾಗಲಿ" ಎಂದರು.
ಫೈರ್ ಫ್ಲೈ ಸಿನಿಮಾ ಆ್ಯಕ್ಷನ್ ಕಟ್ ಹೇಳುತ್ತಿರುವ ವಂಶಿ ಅವರೇ ಹೀರೋ ಆಗಿಯೂ ಅಭಿನಯಿಸುತ್ತಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್ ಅವರ ಪುತ್ರಿ ನಿವೇದಿತಾ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕ ವಂಶಿ ಸ್ವತಂತ್ರ ನಿರ್ದೇಶಕರಾಗಿ ಹಾಗೂ ಪೂರ್ಣಪ್ರಮಾಣದ ಹೀರೋ ಆಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ.
ಇವರಷ್ಟೇ ಅಲ್ಲದೆ ಇತ್ತೀಚೆಗೆ ನಟಿ ಶೀತಲ್ ಶೆಟ್ಟಿ, ನಟ ಮೂಗು ಸುರೇಶ್ ಕೂಡ ಸಿನಿಮಾ ತಂಡಕ್ಕೆ ಸೇರ್ಪಡೆ ಆಗಿದ್ದರು. ಜಯ್ ರಾಮ್ ಅವರು ಸಹ-ನಿರ್ದೇಶನ, ಅಭಿಲಾಷ್ ಕಳತ್ತಿ ಅವರ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ನಿರ್ದೇಶನ, ರಘು ನಿಡುವಳ್ಳಿ ಅವರ ಸಂಭಾಷಣೆ ಈ ಸಿನಿಮಾಗಿದೆ. ಬೆಳಕಿನ ಹಬ್ಬ ದೀಪಾವಳಿಗೆ ಫೈರ್ ಫ್ಲೈ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ.
ಇದನ್ನೂ ಓದಿ: ಫಸ್ಟ್ ಹಾಫ್ ಫ್ರೀ, ಸೆಕೆಂಡ್ ಹಾಫ್‌ಗೆ ಟಿಕೆಟ್!: ಇದು 'ನಾಟ್ ಔಟ್' ಸಿನಿಮಾ ತಂಡದ ಆಫರ್ - Not Out Movie Offer