ಕೋಟ್ಯಂತರ ಅಭಿಮಾನಿಗಳ ಮನಗಳಲ್ಲಿ ಜಾಗ ಪಡೆದಿರೋ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ಅಕ್ಟೋಬರ್ 29, 2021ರ ಆ ದಿನ ಶಿವರಾಜ್ ಕುಮಾರ್ ಅವರ ಭಜರಂಗಿ 2 ಚಿತ್ರ ಬಿಡುಗಡೆ ಆಗಿ ಪ್ರದರ್ಶನಗೊಳ್ಳುತ್ತಿದೆ. ಇನ್ನೇನು ಭಜರಂಗಿ 2 ಚಿತ್ರ ಮುಗಿಯಬೇಕು ಎನ್ನುವಷ್ಟರಲ್ಲಿ ಪುನೀತ್ ರಾಜ್‍ಕುಮಾರ್ ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು ಎನ್ನುವ ಆಘಾತಕಾರಿ ಸುದ್ದಿ ಹೊರ ಬಿದ್ದಿತ್ತು.
ಸದಾ ಸರಳತೆಯಿಂದ ಇರುತ್ತಿದ್ದ ರಾಜಕುಮಾರ ಅಗಲಿ ಇವತ್ತಿಗೆ 3 ವರ್ಷ. ಈ ನೋವಿನ ಸಂದರ್ಭದಲ್ಲಿ ಪುನೀತ್ ರಾಜ್‍ಕುಮಾರ್ ಆತ್ಮೀಯರಲ್ಲಿ ಒಬ್ಬರಾಗಿದ್ದ ಆ ದಿನಗಳು ನಟ ಚೇತನ್ ಅಪ್ಪು ಬಗ್ಗೆ ಈಟಿವಿ ಭಾರತ ಜೊತೆ ಎಕ್ಸ್ಕ್ಲ್ಯೂಸಿವ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ನಟ ಚೇತನ್ ಹೇಳುವಂತೆ, "ನಾನು ಸಿನಿಮಾರಂಗಕ್ಕೆ ಬಂದಿದ್ದು 2007ರಲ್ಲಿ. ಆಗ ತಾನೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಶುರು ಮಾಡಿದ್ದೆ. ನನಗೂ ಅಪ್ಪು ಸರ್ಗೂ ಒಳ್ಳೆ ಸ್ನೇಹ ಹಾಗೂ ಬಾಂಧವ್ಯ ಇತ್ತು ಎನ್ನುವುದು ಅದೆಷ್ಟೋ ಜನಕ್ಕೆ ಗೊತ್ತಿರಕ್ಕಿಲ್ಲ. ನನ್ನ ಹಾಗೂ ಅಪ್ಪು ಸರ್ ನಡುವೆ ಸ್ನೇಹ ಬೆಳೆಯಲು ಕಾರಣ ಸದಾಶಿವನಗರದ ಜಿಮ್. ಒಂದೇ ಜಿಮ್ನಲ್ಲಿ 10 ವರ್ಷದಿಂದ ವರ್ಕ್ ಔಟ್ ಮಾಡ್ತಾ ಇದ್ವಿ. ಆ ಹತ್ತು ವರ್ಷಗಳಲ್ಲಿ ವಾರಕ್ಕೊಮ್ಮೆ ಮೂರರಿಂದ ನಾಲ್ಕು ಸಲ ಭೇಟಿಯಾಗಿ ಮಾತನಾಡುತ್ತಿದ್ದೆವು. ಅಪ್ಪು ಸರ್ನಲ್ಲಿ ನಾನು ನೋಡಿದ್ದು ಅವರ ರೆವಲ್ಯೂಷನ್ ಯೋಚನೆಗಳು." ಎಂದು ವಿವರಿಸಿದರು.
ಮತ್ತಷ್ಟು ಹತ್ತಿರವಾದದ್ದು 2009ರಲ್ಲಿ: "ಅಪ್ಪು ಸರ್ಗೆ ನಾನು ಮತ್ತಷ್ಟು ಹತ್ತಿರ ಆಗಿದ್ದು 2009ರಲ್ಲಿ ನಡೆದ ಚಿತ್ರರಂಗದ ಅಮೃತ ಮಹೋತ್ಸವದ ಸಂದರ್ಭ. ಆಗ ತಾನೇ ನನ್ನ ಬಿರುಗಾಳಿ ಸಿನಿಮಾ ರಿಲೀಸ್ ಆಗಿತ್ತು. ನಾನು ಕರ್ನಾಟಕಕ್ಕೆ ಬಂದು ಮೂರು ವರ್ಷ ಆಗಿತ್ತು. ಜೊತೆಗೆ ಕನ್ನಡ ಚಿತ್ರರಂಗದ ಬಗ್ಗೆ ಅಷ್ಟೊಂದು ಗೊತ್ತಿರಲಿಲ್ಲ. ಚಿತ್ರರಂಗದ 75ನೇ ವರ್ಷದ ಕಾರ್ಯಕ್ರಮದಲ್ಲಿ ನಾನು ಟೀಮ್ ಜೊತೆ ವೇದಿಕೆ ಮೇಲೆ ಡ್ಯಾನ್ಸ್ ಮಾಡೋದಿಕ್ಕೆ ರೆಡಿಯಾಗಿ ಕೂತಿದ್ದೆ. ಅದಕ್ಕೂ ಮುಂಚೆ ಅಪ್ಪು ಸರ್ ಡ್ಯಾನ್ಸ್ ಇತ್ತು. ಆಗ ಸ್ಟೇಜ್ ಸೈಡ್ನಲ್ಲಿ ನನ್ನ ಡ್ಯಾನ್ಸರ್ ತಂಡ ನೋಡಿ ಸೀದಾ ಬಂದು ಅವರ ಮೊಬೈಲ್ ನನಗೆ ಇಟ್ಟುಕೊಳ್ಳುವುದಕ್ಕೆ ಹೇಳಿದ್ರು. ಆಗ ನನಗೆ ಒಂಥರಾ ಖುಷಿ, ಜೊತೆಗೆ ಅಪ್ಪು ಸರ್ ಮೊಬೈಲ್ನ್ನು ಕೇರ್ಫುಲ್ ಆಗಿ ಇಟ್ಟುಕೊಳ್ಳಬೇಕು. ಅಲ್ಲಿಂದ ಅಪ್ಪು ಸರ್ ನನ್ನ ಮಧ್ಯೆ ಗೆಳತನ ಮತ್ತಷ್ಟು ಜಾಸ್ತಿ ಆಯಿತು." ಎಂದು ಹೇಳಿದರು.
ನಾನು ನಿಮ್ಮ ಜತೆ ಇರ್ತೇನಿ ಅಂತಾ ಹೇಳಿದ್ದರು: "ಅಲ್ಲಿಂದ ಜಿಮ್ನಲ್ಲಿ ನಾನು ಹಾಗೂ ಅಪ್ಪು ಸರ್ ಹಲವು ವಿಚಾರಗಳ ಬಗ್ಗೆ ಮಾತನಾಡೋದಿಕ್ಕೆ ಶುರು ಮಾಡಿದ್ವಿ. 2012ರಲ್ಲಿ ನಾನು ಎಂಡೋಸಲ್ಫಾನ್ ಹೋರಾಟ ಶುರು ಮಾಡಿದ್ದೆ. ಕರಾವಳಿ ಹಾಗು ದಕ್ಷಿಣ ಕನ್ನಡ ಭಾಗದಲ್ಲಿ ಕೀಟನಾಶಕದಿಂದ ಸಾಕಷ್ಟು ಮಕ್ಕಳು ಕಾಯಿಲೆಗೆ ತುತ್ತಾಗುವ ಬಗ್ಗೆ ಮಾಡಿದ ವಿಡಿಯೋವನ್ನು ಅಪ್ಪು ಸರ್ ಮನೆಗೆ ಹೋಗಿ ತೋರಿಸಿ ವಿವರಿಸಿದೆ. ಆಗ ಅವರು ಮಕ್ಕಳಿಗೆ ಒಳ್ಳೆಯದಾಗುತ್ತದೆ ಎಂದು ನಾನು ನಿಮ್ಮ ಜೊತೆ ಇರುತ್ತೇನೆ ಎಂದು ಹೇಳಿದ್ದರು. ಇದು ನನಗೆ ಇನ್ನಷ್ಟು ಬಲ ನೀಡಿತ್ತು." ಎಂದರು.
"ಅವರ ಈ ಮಾತಿನಿಂದ ನನ್ನ ಅವರ ನಡುವಿನ ಸ್ನೇಹ ಇನ್ನೂ ಹತ್ತಿರ ಆಗಿತ್ತು. ಪುನೀತ್ ರಾಜ್‍ಕುಮಾರ್ ಹೆಚ್ಚು ಓದದೇ ಇದ್ದರೂ ಅವರ ಕನಸುಗಳು, ಆಲೋಚನೆಗಳು ಕೇಳಿ ಸ್ವತಃ ನಾನೇ ಮನ ಸೋತಿದ್ದೆ. ಪುನೀತ್ ರಾಜ್‍ಕುಮಾರ್ ಸಂದರ್ಶನದಲ್ಲಿ ಹೇಳಿಕೊಂಡಿರುವ ಹಾಗೇ ಹತ್ತನೇ ಕ್ಲಾಸ್ ತನಕ ಓದಿದ್ದಾರೆ. ಆದರೆ, ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಿಂದ ಅವರಿಗೆ ಶಿಕ್ಷಣದ ಬಗೆಗೆ ಜಾಗೃತಿ ಮೂಡಿಸಬೇಕು ಅನಿಸಿತ್ತು. ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಣ ಬಹಳ ಪ್ರಮುಖವಾದುದು ಅಂತಾ ಅನಿಸಿತ್ತು.
ಅದಕ್ಕೆ ಪುನೀತ್ ರಾಜ್‍ಕುಮಾರ್ ಸರ್ಕಾರದ ಶಿಕ್ಷಣದ ಜಾಹೀರಾತಿನಲ್ಲಿ ಯಾವುದೇ ಸಂಭಾವನೆ ಪಡೆಯದೇ ಶಿಕ್ಷಣ ಜಾಗೃತಿ ಮೂಡಿಸಿದ್ದರು. ಅಷ್ಟೇ ಅಲ್ಲ, ಕೆಲವು ಹಳ್ಳಿಗಳಲ್ಲಿ ಸ್ಕಿಲ್ ಟ್ರೈನಿಂಗ್ ಹಾಗೂ ಜಾಬ್ ಓರಿಯೆಂಟೆಡ್ ಶಿಕ್ಷಣವನ್ನು ಕೊಡುವ ಕಾರ್ಯ ಆಗಬೇಕು. ಅದಕ್ಕಾಗಿ ಶಿಕ್ಷಣದಲ್ಲಿ ರೆವಲ್ಯೂಷನ್ ಆಗಬೇಕು ಎಂದು ಪುನೀತ್ ರಾಜ್‍ಕುಮಾರ್ ಕನಸು ಕಂಡಿದ್ರು." ಎನ್ನುವುದು ಚೇತನ್ ಮನದಾಳದ ಮಾತು.
"ಅಪ್ಪು ಸರ್ ನನಗೆ ದೊಡ್ಡಣ್ಣನ ಥರ. ಯಾಕೆಂದರೆ, ನಾನು ಒಂದು ಅನಾಥಾಶ್ರಮದಲ್ಲಿ ಮದುವೆ ಆಗಿದ್ದು. ಆ ದಿನ ಅಪ್ಪು ಸರ್ ಎಷ್ಟು ಗಂಟೆಗೆ ಬರಬೇಕು ಕೇಳಿದ್ದರು. ಆಗ ನಾನು ಸಂಜೆ ಕಾರ್ಯಕ್ರಮವಿದ್ದದ್ದರಿಂದ 7.15ಕ್ಕೆ ಬನ್ನಿ ಎಂದಿದ್ದೆ. ಪತ್ನಿ ಅಶ್ವಿನಿ ಅವರ ಜೊತೆ ಸರಿಯಾಗಿ 7.15ಕ್ಕೆ ಮದುವೆಗೆ ಬಂದಿದ್ದರು. ಅದನ್ನು ಮರೆಯೋದಿಕ್ಕೆ ಸಾಧ್ಯವಿಲ್ಲ."
ಕನ್ನಡ ಚಿತ್ರರಂಗವನ್ನು ದೊಡ್ಡ ಮಟ್ಟಕ್ಕೆ ಬೆಳಸೆಬೇಕು ಎಂಬ ಮಹದಾಸೆ ಹೊಂದಿದ್ದರು: "ಇದರ ಜೊತೆಗೆ ಕನ್ನಡ ಚಿತ್ರರಂಗವನ್ನು ದೊಡ್ಡ ಮಟ್ಟಕ್ಕೆ ಬೆಳಸೆಬೇಕು ಎನ್ನುವುದು ಅವರ ಗುರಿಯಾಗಿತ್ತು. ಪುನೀತ್ ರಾಜ್‍ಕುಮಾರ್ ಅವರಿಗೆ ಸಿನಿಮಾ ಬಗ್ಗೆ ಇದ್ದ ವ್ಯಾಮೋಹ ಎಂಥಹದೆಂದರೆ, ಸಿನಿಮಾರಂಗ ಎನ್ನುವುದು ಒಂದು ವ್ಯಾಪಾರ. ಅದಕ್ಕೆ ತಕ್ಕಂತೆ ಹೀರೋಗಳಿಗೆ ಹೆಚ್ಚು ಸಂಭಾವನೆ ಸಿಗುತ್ತದೆ ಎನ್ನುವುದು ಗೊತ್ತಿದೆ. ಅದಕ್ಕೆ ಹೊಡಿಬಡಿ ಸಿನಿಮಾಗಳನ್ನು ಮಾಡಿ ಹೆಚ್ಚು ಹಣ ಗಳಿಸುವುದು ಸಹಜ.
ಆದರೆ ಪುನೀತ್ ರಾಜ್‍ಕುಮಾರ್ ಅವರು ನಾನು ಹೊಡಿ ಬಡಿ ಸಿನಿಮಾ ಮಾಡುವುದು ಮುಖ್ಯ ಅಲ್ಲ. ನಾನು ಮಾಡುವ ಸಿನಿಮಾಗಳನ್ನು ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರ ತನಕ ನೋಡಬೇಕು. ಆಗ ಚಿತ್ರರಂಗದ ಬೆಳವಣಿಗೆ ಹಾಗು ಸಾಕಷ್ಟು ಜನರಿಗೆ ಸಹಾಯ ಆಗುತ್ತ ಎನ್ನುತ್ತಿದ್ದರು. ತಂದೆ ಹಾಗು ಹಿರಿಯ ನಿರ್ದೇಶಕರ ಪರಂಪರೆಯನ್ನು ಉಳಿಸಬೇಕು ಎಂಬ ಆಲೋಚನೆ ಅಪ್ಪು ಸರ್ದು." ಎಂದರು ಚೇತನ್.
"ಇನ್ನು ಮೈನಾ ಸಿನಿಮಾ ಕಥೆಯನ್ನು ನಿರ್ದೇಶಕ ನಾಗಶೇಖರ್ ಮೊದಲು ಅಪ್ಪು ಸರ್ಗೆ ಮಾಡಬೇಕು ಅಂದುಕೊಂಡಿದ್ರಂತೆ. ಆಗ ಪುನೀತ್ ಅವರು ನಾನು ಬೇಡ ಯಾರಾದರೂ ಹೊಸಬರಿಗೆ ಮಾಡಿ ಅಂತಾ ಹೇಳಿದ್ದರು. ಆ ಸಮಯದಲ್ಲಿ ಮೈನಾ ಚಿತ್ರದ ನಿರ್ಮಾಪಕ ಎನ್.ಎಸ್.ರಾಜ್ಕುಮಾರ್, ಚೇತನ್ಗೆ ಮಾಡಬಹುದಾ ಎಂದು ಪುನೀತ್ ಅವರಿಗೆ ಕೇಳಿದ್ದರು. ಆಗ ಪುನೀತ್ ಅವರು ಕೂಡ ಚೇತನ್ ಈ ಕಥೆಗೆ ಸೂಟ್ ಆಗುತ್ತಾನೆ ಎಂದಿದ್ದರು. ಅಷ್ಟೇ ಅಲ್ಲ ಮೈನಾ ಚಿತ್ರದ ಶೂಟಿಂಗ್ ಸ್ಪಾಟ್ಗೆ ಬಂದು ಚಿತ್ರದ ಆಡಿಯೋ ಬಿಡುಗಡೆ ಮಾಡಿ ಕೊಟ್ಟಿದ್ದರು" ಎಂದು ಚೇತನ್ ನೆನಪಿಸಿಕೊಂಡರು.
"ಅಷ್ಟು ಸ್ನೇಹ ನನ್ನ ಮತ್ತೆ ಅಪ್ಪು ಸರ್ ಮಧ್ಯೆ ಇತ್ತು. ಹೊಸ ನಿರ್ದೇಶಕರು, ಹೊಸ ನಟ, ನಟಿಯರಿಗೆ ಸಿನಿಮಾ ಮಾಡುವುದರ ಜೊತೆಗೆ ಕಂಟೆಂಟ್ ಚಿತ್ರಗಳನ್ನು ಮಾಡಿ ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೆ ಕೊಂಡೊಯ್ಯಬೇಕು ಎನ್ನುವುದು ಅವರ ಕನಸಾಗಿತ್ತು. ಅದರಂತೆ ನಾವೆಲ್ಲರೂ ಕನ್ನಡ ಚಿತ್ರರಂಗವನ್ನು ಕಟ್ಟಿದ್ರೆ, ಅದೇ ಇಡೀ ಚಿತ್ರರಂಗ ಅಪ್ಪು ಸರ್ಗೆ ಕೊಡುವ ದೊಡ್ಡ ಗೌರವ." ಎನ್ನುವುದು ಚೇತನ್ ಅಭಿಪ್ರಾಯ.
ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್ ಕಣ್ಮರೆಯಾಗಿ ಇಂದಿಗೆ 3 ವರ್ಷ: ಅಭಿಮಾನಿಗಳ ಎದೆಯಲ್ಲಿ ಅರಳಿದ 'ಬೆಟ್ಟದ ಹೂ'