ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗದಿಂದ (ಕೆಪಿಎಸ್ಸಿ) ಕಳೆದೊಂದು ತಿಂಗಳಿನಲ್ಲಿ ಹಲವು ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಗೆಜೆಟೆಡ್ ಪ್ರೊಬೆಷನರಿಯಿಂದ ಗ್ರೂಪ್ ಸಿವರೆಗೆ ಹಲವು ನೇಮಕಾತಿಗೆ ಚಾಲನೆ ನೀಡಲಾಗಿದೆ. ಏಕಕಾಲಕ್ಕೆ ಹಲವು ಹುದ್ದೆ ಅಧಿಸೂಚನೆ ಪ್ರಕಟಣೆ ಹಿನ್ನೆಲೆ ಯಾವ್ಯಾವ ಹುದ್ದೆಗಳ ಭರ್ತಿ ನಡೆಯಲಿದೆ ಎಂಬ ಗೊಂದಲ ಅಭ್ಯರ್ಥಿಗಳಲ್ಲಿ ಮೂಡಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
384 ಗೆಜೆಟೆಡ್ ಪ್ರೊಬೆಷನರಿ ಹುದ್ದೆ: ಗೆಜೆಟೆಡ್ ಪ್ರೊಬೆಷನರಿ ಗ್ರೂಪ್ ಎ ವೃಂದದ 159 ಹುದ್ದೆಗಳು ಮತ್ತು ಗ್ರೂಪ್ ಬಿ ವೃಂದದ 225 ಹುದ್ದೆಗಳು ಸೇರಿ ಒಟ್ಟು 384 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಯಾವುದೇ ಪದವೀಧರರು ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಅಂತಿಮ ದಿನಾಂಕ ಏಪ್ರಿಲ್ 4.
364 ಭೂ ಮಾಪಕರ ಹುದ್ದೆ: ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯಲ್ಲಿನ ಖಾಲಿ ಇರುವ 364 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಇದರಲ್ಲಿ 100 ಹುದ್ದೆಗಳು ಹೈದರಾಬಾದ್ ಕರ್ನಾಟಕಕ್ಕೆ ಮೀಸಲಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನ ಏಪ್ರಿಲ್ 10 ಆಗಿದೆ.
ಸಹಾಯಕ ನಿಯಂತ್ರಕ- ಲೆಕ್ಕ ಪರಿಶೋಧನಾಧಿಕಾರಿ ಹುದ್ದೆ: ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿರುವ ಗ್ರೂಪ್ ಎ ಸಹಾಯಕ ನಿಯಂತ್ರಕರು ಮತ್ತು ಗ್ರೂಪ್ ಬಿ ಲೆಕ್ಕ ಪರಿಶೋಧನಾಧಿಕಾರಿಗಳ 97 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಎಂಕಾಂ ಮತ್ತು ಎಂಬಿಎ ಪದವೀಧರರು ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನ ಏಪ್ರಿಲ್ 17 ಆಗಿದೆ.
ಗ್ರೂಪ್ ಬಿಯ 327 ಹುದ್ದೆ: ಬಿಬಿಎಂಪಿ, ಜಲಸಂಪನ್ಮೂಲ ಇಲಾಖೆ, ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಲ ಸಂಪನ್ಮೂಲ ಇಲಾಖೆ, ಕಾರ್ಖಾನೆಗಳು, ಬಾಯ್ಲರುಗಳು ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ, ಅಂತರ್ಜಲ ನಿರ್ದೇಶನಾಲಯದಲ್ಲಿ ಖಾಲಿ ಇರುವ ಗ್ರೂಪ್ ಬಿ 277 ಹುದ್ದೆಗಳಿಗೆ ಅರ್ಜಿ ಆಹ್ವಾನಿಲಾಗಿದೆ. ಏಪ್ರಿಲ್ 15 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಮೇ 14 ಆಗಿದೆ.
ಇದನ್ನೂ ಓದಿ: 327 ಸಹಾಯಕ ಇಂಜಿನಿಯರ್, ಸಹಾಯಕ ನಿರ್ದೇಶಕರ ಹುದ್ದೆಗೆ ಅಧಿಸೂಚನೆ - ಬೇಗನೇ ಅರ್ಜಿ ಹಾಕಿ
ಗ್ರೂಪ್ ಸಿ (ಹೈದರಾಬಾದ್- ಕರ್ನಾಟಕ) 97 ಹುದ್ದೆ: ಅಂತರ್ಜಲ ನಿರ್ದೇಶನಾಲಯ, ಪೌರಾಡಳಿತ ನಿರ್ದೇಶನಾಲಯ, ಗ್ರಾಮೀನ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಖಾಲಿ ಇರುವ ಹೈದರಾಬಾದ್ ಕರ್ನಾಟಕ ವೃಂದದ ಗ್ರೂಪ್ ಸಿಯ 97 ಹುದ್ದೆಗೆ ಅಧಿಸೂಚನೆ. ಈ ಹುದ್ದೆಗೆ ಏಪ್ರಿಲ್ 29ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನ ಮೇ 28 ಆಗಿದೆ.
247 ಪಿಡಿಒ ನೇಮಕಾತಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ ಗ್ರೂಪ್ ಸಿಯ 247 ಪಂಚಾಯತಿ ಅಬಿವೃದ್ಧಿ ಅಧಿಕಾರಿಗಳ ಹುದ್ದೆಗೆ ಅಧಿಸೂಚನೆ ಪ್ರಕಟ. ಈ ಹುದ್ದೆಗೆ ಏಪ್ರಿಲ್ 15 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಅರ್ಜಿ ಸಲ್ಲಿಕೆಗೆ ಮೇ 15 ಕಡೆಯ ದಿನ.
ಜಲ ಸಂಪನ್ಮೂಲ ಇಲಾಖೆ ನೇಮಕಾತಿ: ಜಲ ಸಂಪನ್ಮೂಲ ಇಲಾಖೆ ಮತ್ತು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಉಳಿಕೆ ಮೂಲ ವೃಂದದ ಗ್ರೂಪ್ ಸಿಯ 313 ಹುದ್ದೆಗೆ ಅಧಿಸೂಚನೆ ಪ್ರಕಟಣೆ. ವಿವಿಧ ವಿಭಾಗದ ಕಿರಿಯ ಇಂಜಿನಿಯರ್ಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಈ ಹುದ್ದೆಗೆ ಏಪ್ರಿಲ್ 29 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಕಡೆಯ ದಿನಾಂಕ ಮೇ 28 ಆಗಿದೆ.
ಸಾರಿಗೆ ಇಲಾಖೆ ನೇಮಕಾತಿ: ಸಾರಿಗೆ ಇಲಾಖೆಯಲ್ಲಿ 76 ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಏಪ್ರಿಲ್ 22ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಮೇ 21 ಆಗಿದೆ.
ವಿಶೇಷ ಸೂಚನೆ: ಈ ಎಲ್ಲಾ ಹುದ್ದೆಗಳ ಕುರಿತಾದ ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು ಕರ್ನಾಟಕ ಲೋಕ ಸೇವಾ ಆಯೋಗದ ಅಧಿಕೃತ ವೆಬ್ಸೈಟ್ನಲ್ಲಿ kpsc.kar.nic.in ಗೆ ಭೇಟಿ ನೀಡಬಹುದಾಗಿದೆ.
ಇದನ್ನೂ ಓದಿ: KPSC ಕೆಪಿಎಸ್ಸಿ ನೇಮಕಾತಿ: ಭೂ ಮಾಪಕರ ಹುದ್ದೆಗೆ ಅರ್ಜಿ ಸ್ವೀಕಾರ ಆರಂಭ