ರಾಮನಗರ : ಸ್ಕಿಲ್ ಇಂಡಿಯಾ ಮಿಷನ್ ಮತ್ತು "ವಿಕಸಿತ ಭಾರತ್ 2047" ಅನ್ನು ಬೆಂಬಲಿಸುವ ಮಹತ್ವದ ಹೆಜ್ಜೆಯಾಗಿ ಟೊಯೊಟಾ ತಾಂತ್ರಿಕ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ ಆಯೋಜಿಸಿದ್ದ ಇಂಡಿಯಾ ಸ್ಕಿಲ್ಸ್ ಕಾಂಪಿಟೇಷನ್ 2024 ರಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಸಂಯೋಜಿತ ಉತ್ಪಾದನೆ ವಿಭಾಗದ ವೈಯಕ್ತಿಕ ಪ್ರತಿಸ್ಪರ್ಧಿಯಾಗಿ ಪ್ರೇಮ್ ವಿ ಚಿನ್ನದ ಪದಕ ಗಳಿಸಿದ್ದಾರೆ. ಮ್ಯಾನುಫ್ಯಾಕ್ಚರಿಂಗ್ ಟೀಮ್ ಚಾಲೆಂಜ್ನಲ್ಲಿ ಮೋಹಿತ್ ಎಂ. ಯು, ಹರೀಶ್ ಆರ್ ಮತ್ತು ನೆಲ್ಸನ್ ವಿ ತಂಡ ಚಿನ್ನದ ಪದಕಗಳನ್ನು ಪಡೆದುಕೊಂಡಿದೆ. ಮೆಕಾಟ್ರಾನಿಕ್ಸ್ ವಿಭಾಗದಲ್ಲಿ ದರ್ಶನ್ ಗೌಡ ಸಿ. ಎಸ್ ಮತ್ತು ಭಾನು ಪ್ರಸಾದ್ ಎಸ್. ಎಂ ತಂಡ ಚಿನ್ನದ ಪದಕ ಗಳಿಸಿದೆ.
ಹೇಮಂತ್ ಕೆ. ವೈ ಮತ್ತು ಉದಯ್ ಕುಮಾರ್ ಬಿ ತಂಡ ಬೆಳ್ಳಿ ಪದಕ ಗಳಿಸಿದೆ. ಇದಲ್ಲದೇ, ರೋಹನ್ ಎ. ಎಸ್ ಬೆಳ್ಳಿ ಪದಕ ಮತ್ತು ಶ್ರೀ ಸುದೀಪ್ ಎಸ್. ಎಂ ಅವರು ಕಾರ್ ಪೇಂಟಿಂಗ್ನಲ್ಲಿ ವೈಯಕ್ತಿಕ ಸ್ಪರ್ಧಿಯಾಗಿ ಮೆಡಲಿಯನ್ ಆಫ್ ಎಕ್ಸಲೆನ್ಸ್ ಪಡೆದಿದ್ದಾರೆ. ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಸ್ಪರ್ಧೆಯು ಯುವ ಪ್ರತಿಭೆಗಳಿಗೆ ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.
ಟಿಟಿಟಿಐ, ಎನ್ಎಸ್ಡಿಸಿ ಸಹಯೋಗದೊಂದಿಗೆ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ದೃಷ್ಟಿಕೋನಕ್ಕೆ ಅನುಗುಣವಾಗಿ ಯುವಕರಲ್ಲಿ ತಳಮಟ್ಟದಿಂದ ಕೌಶಲ್ಯ ಅಭಿವೃದ್ಧಿ ಉತ್ತೇಜಿಸಲು ಬೆಂಬಲ ವಿಸ್ತರಿಸುತ್ತದೆ.
ನವದೆಹಲಿಯ ಯಶೋ ಭೂಮಿ ದ್ವಾರಕಾದಲ್ಲಿ ನಡೆದ ಸ್ಪರ್ಧೆಯ "ಆಫ್-ಸೈಟ್" ಭಾಗದ ನಾಲ್ಕು ವಿಭಾಗಗಳಲ್ಲಿ ಟಿಟಿಟಿಐ ಭಾಗವಹಿಸಿತ್ತು. ಮ್ಯಾನುಫ್ಯಾಕ್ಚರಿಂಗ್ ಟೀಮ್ ಚಾಲೆಂಜ್, ಮೆಕಾಟ್ರಾನಿಕ್ಸ್, ಕಾರ್ ಪೇಂಟಿಂಗ್ ಮತ್ತು ಎಡಿಟಿವ್ ಮ್ಯಾನುಫ್ಯಾಕ್ಚರಿಂಗ್ ಸೇರಿದಂತೆ ಹಲವು ವಿಭಾಗಗಳಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಟಿಟಿಟಿಐನ ವಿದ್ಯಾರ್ಥಿಗಳು ಅದ್ಭುತ ಕೌಶಲ್ಯ ಮತ್ತು ಡೆಡಿಕೇಷನ್ ಪ್ರದರ್ಶಿಸಿದರು.
ಇದು ಸಂಸ್ಥೆಗೆ ಮಾತ್ರವಲ್ಲದೇ ರಾಷ್ಟ್ರಕ್ಕೂ ಗೌರವ ತಂದಿದೆ. ಟಿಟಿಟಿಐನ ಉಸ್ತುವಾರಿಯಲ್ಲಿ ಸ್ಪರ್ಧೆಯ "ಆಫ್-ಸೈಟ್" ವಿಭಾಗವು ದೇಶಾದ್ಯಂತದ ಸ್ಪರ್ಧಿಗಳಿಂದ ಉತ್ಸಾಹಭರಿತ ಭಾಗವಹಿಸುವಿಕೆ ಮತ್ತು ಅಮೋಘ ಪ್ರದರ್ಶನಗಳಿಗೆ ಸಾಕ್ಷಿಯಾಯಿತು. ಟಿಟಿಟಿಐ ಸ್ಥಳ, ಮೂಲಸೌಕರ್ಯ, ಯಂತ್ರೋಪಕರಣಗಳು, ಬಳಕೆ ವಸ್ತುಗಳು ಮತ್ತು ತೀರ್ಪುಗಾರರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರ ನೀಡುವ ಮೂಲಕ ಸ್ಪರ್ಧೆ ಸುಗಮವಾಗಿ ನಡೆಯಲು ಸಹಕರಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಎನ್ಎಸ್ಡಿಸಿಯ ಮಾರ್ಕೆಟಿಂಗ್ ಮತ್ತು ಕಮ್ಯುನಿಕೇಷನ್ಸ್ ಜನರಲ್ ಮ್ಯಾನೇಜರ್ ಮೋನಿಕಾ ನಂದಾ ಅವರು, ''ಇಂಡಿಯಾ ಸ್ಕಿಲ್ಸ್ ಕಾಂಪಿಟಿಷನ್ 2024ರಲ್ಲಿ ಗಮನಾರ್ಹ ಸಾಧನೆ ಮಾಡಿದ ಟೊಯೋಟಾ ಟೆಕ್ನಿಕಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ನ ಅತ್ಯುತ್ತಮ ವಿದ್ಯಾರ್ಥಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಅವರ ಅನುಕರಣೀಯ ಕೌಶಲ್ಯಗಳು ಮತ್ತು ಸಮರ್ಪಣೆ ಟಿಟಿಟಿಐನ ತರಬೇತಿ ಕಾರ್ಯಕ್ರಮಗಳ ಪರಿಣಾಮಕಾರಿತ್ವಕ್ಕೆ ಸಾಕ್ಷಿಯಾಗಿದೆ. ಈ ವಿಜೇತರು ತಮ್ಮ ಸಂಸ್ಥೆಗೆ ಗೌರವವನ್ನು ತರುವುದಲ್ಲದೇ, ಜಾಗತಿಕ ಮಟ್ಟದಲ್ಲಿ ಭಾರತೀಯ ಕೌಶಲ್ಯ ಅಭಿವೃದ್ಧಿಯ ಖ್ಯಾತಿ ಹೆಚ್ಚಿಸುತ್ತಾರೆ. ವಿಶ್ವ ಕೌಶಲ್ಯ ಸ್ಪರ್ಧೆಗೆ ಆಯ್ಕೆಯಾದವರು ಈ ಶ್ರೇಷ್ಠತೆಯ ಪರಂಪರೆ ಮುಂದುವರಿಸುತ್ತಾರೆ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಹೆಮ್ಮೆಪಡುವಂತೆ ಮಾಡುತ್ತಾರೆ'' ಎಂದು ನಮಗೆ ವಿಶ್ವಾಸವಿದೆ ಎಂದರು.
ವಿಶ್ವ ಕೌಶಲ್ಯ ಸ್ಪರ್ಧೆ : 1950 ರಲ್ಲಿ ಪ್ರಾರಂಭವಾದ ವಿಶ್ವ ಕೌಶಲ್ಯ ಸ್ಪರ್ಧೆಯು ಅಂತಾರಾಷ್ಟ್ರೀಯ ಸಹಕಾರ ಮತ್ತು ಅಭಿವೃದ್ಧಿಯ ಮೂಲಕ ಕೌಶಲ್ಯ ಶ್ರೇಷ್ಠತೆ ಮತ್ತು ಅಭಿವೃದ್ಧಿಯ ಜಾಗತಿಕ ಕೇಂದ್ರವಾಗಿದೆ. ಕೌಶಲ್ಯ ನಿರ್ವಹಣೆಗೆ ಸಂಬಂಧಿಸಿದ ಹಾಗೂ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಸರ್ಕಾರ, ಶಿಕ್ಷಣ, ಉದ್ಯಮ ಮತ್ತು ಸಂಘದ ನಾಯಕರಿಗೆ ಇದು ಜಾಗತಿಕ ಸಭೆಯ ಸ್ಥಳವಾಗಿ ಹೊರಹೊಮ್ಮಿದೆ.
2019 ರಲ್ಲಿ ಸ್ಪರ್ಧೆಯಲ್ಲಿ 75 ದೇಶಗಳ 1300ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಭಾರತ 1 ಚಿನ್ನ, 1 ಬೆಳ್ಳಿ, 2 ಕಂಚು ಮತ್ತು 15 ಪದಕಗಳನ್ನು ಗೆದ್ದುಕೊಂಡಿದೆ. ಈ ತಂಡವು 46 ಪ್ರತಿಭಾವಂತ ಯುವಕರನ್ನು ಒಳಗೊಂಡಿತ್ತು. 2007 ರಲ್ಲಿ ಭಾರತವು ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರಾರಂಭಿಸಿದಾಗಿನಿಂದ ಇವರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಮಂಡಳಿಯ ಮಾರ್ಗದರ್ಶನದಲ್ಲಿ ರಾಷ್ಟ್ರವ್ಯಾಪಿ ಸ್ಕ್ರೀನಿಂಗ್ ಪ್ರಕ್ರಿಯೆಯ ಮೂಲಕ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ : ಟೊಯೋಟಾದಿಂದ 3 ವರ್ಷದ ತರಬೇತಿಗೆ ಅರ್ಜಿ ಆಹ್ವಾನ; ಆಸಕ್ತರು ಅರ್ಜಿ ಸಲ್ಲಿಸಬಹುದು - Training From Toyota