ನವದೆಹಲಿ: ಆನ್ಲೈನ್ ಫುಡ್ ಡೆಲಿವರಿ ಪ್ಲಾಟ್ಫಾರ್ಮ್ ಸ್ವಿಗ್ಗಿ ಮುಂಬರುವ ತಿಂಗಳಲ್ಲಿ ಆಹಾರ ಆರ್ಡರ್ಗಳ ಪ್ಲಾಟ್ಫಾರ್ಮ್ ಶುಲ್ಕವನ್ನು 5 ರೂ.ಗಳಿಂದ 10 ರೂ.ಗೆ ದ್ವಿಗುಣಗೊಳಿಸುವ ನಿರೀಕ್ಷೆಯಿದೆ ಎಂದು ಮಾಧ್ಯಮ ವರದಿಯೊಂದು ಮಂಗಳವಾರ ತಿಳಿಸಿದೆ. ಈ ಕ್ರಮದೊಂದಿಗೆ, ಕಂಪನಿಯು ತನ್ನ ಐಪಿಒ (ಆರಂಭಿಕ ಸಾರ್ವಜನಿಕ ಕೊಡುಗೆ) ಬಿಡುಗಡೆಗೆ ಮುಂಚಿತವಾಗಿ ನಷ್ಟ ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಬಳಕೆದಾರರ ಸಣ್ಣ ಗುಂಪನ್ನು ಗುರಿಯಾಗಿಸುವ ಮೂಲಕ ಸ್ವಿಗ್ಗಿ ತನ್ನ ಅಪ್ಲಿಕೇಶನ್ನಲ್ಲಿ ಪ್ಲಾಟ್ಫಾರ್ಮ್ ಶುಲ್ಕದಲ್ಲಿ ಹೆಚ್ಚಳ ಮಾಡಲು ಪ್ರಾರಂಭಿಸಿದೆ. ಕಳೆದ ವರ್ಷ ಏಪ್ರಿಲ್ನಲ್ಲಿ ಕಂಪನಿಯು ಕೆಲವೇ ಗ್ರಾಹಕರಿಗೆ 2 ರೂ.ಗಳ ನಾಮಿನಲ್ ಶುಲ್ಕ ವಿಧಿಸಿತ್ತು. ನಂತರ ಅದನ್ನು ಎಲ್ಲ ಗ್ರಾಹಕರಿಗೆ ವಿಸ್ತರಿಸಲಾಯಿತು. ಪ್ರಸ್ತುತ ಪ್ಲಾಟ್ಫಾರ್ಮ್ ಶುಲ್ಕವನ್ನು 5 ರೂ.ಗೆ ನಿಗದಿಪಡಿಸಲಾಗಿದೆ. 10 ರೂ.ಗಳ ಪ್ಲಾಟ್ಫಾರ್ಮ್ ಶುಲ್ಕವು ತಾನು ಮುಂದುವರಿಸುತ್ತಿರುವ ಅನೇಕ ಪ್ರಯೋಗಗಳಲ್ಲಿ ಒಂದಾಗಿದೆ ಎಂದು ಕಂಪನಿ ಹೇಳಿದೆ.
"ಸ್ವಿಗ್ಗಿ ತನ್ನ ಪ್ಲಾಟ್ಫಾರ್ಮ್ ಶುಲ್ಕವನ್ನು ಬದಲಾಯಿಸಿಲ್ಲ ಮತ್ತು ಹತ್ತಿರ ಭವಿಷ್ಯದಲ್ಲಿ ಗಮನಾರ್ಹ ಹೆಚ್ಚಳದ ಯಾವುದೇ ಯೋಜನೆಯನ್ನು ಹೊಂದಿಲ್ಲ. ಗ್ರಾಹಕರ ಆಯ್ಕೆಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ನಾವು ಯಾವಾಗಲೂ ಸಣ್ಣ ಪ್ರಯೋಗಗಳನ್ನು ಮಾಡುತ್ತಿರುತ್ತೇವೆ" ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ.
"ಇದು ಅಂತಹ ಒಂದು ಪ್ರಯೋಗವಾಗಿದೆ ಮತ್ತು ನಮ್ಮ ಬಳಕೆದಾರರಿಗೆ ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುವ ನಮ್ಮ ಗುರಿಯನ್ನು ತಲುಪದಿದ್ದರೆ ಭವಿಷ್ಯದಲ್ಲಿ ನಾವು ಅದನ್ನು ಹೆಚ್ಚಿಸಬಹುದು ಅಥವಾ ಬದಲಾಯಿಸದಿರಬಹುದು" ಎಂದು ಅದು ಹೇಳಿದೆ.
ಏತನ್ಮಧ್ಯೆ, ಸ್ವಿಗ್ಗಿಯ ಸಹ - ಸಂಸ್ಥಾಪಕ ಮತ್ತು ಸಿಇಒ ಶ್ರೀಹರ್ಷ ಮಜೆಟಿ ತನ್ನ ಮೆಗಾ ಐಪಿಒಗಾಗಿ ಎಲ್ಲ ಸಿದ್ಧತೆಗಳು ನಡೆಯುತ್ತಿವೆ. ಇದರ ಮೂಲಕ ಈ ವರ್ಷದ ಕೊನೆಯಲ್ಲಿ 1 ಬಿಲಿಯನ್ ಡಾಲರ್ ಸಂಗ್ರಹಿಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಐಪಿಒ ಪ್ರಕ್ರಿಯೆಗಾಗಿ, ಕಂಪನಿಯು ಕೋಟಕ್ ಮಹೀಂದ್ರಾ ಕ್ಯಾಪಿಟಲ್, ಸಿಟಿ ಮತ್ತು ಜೆಪಿ ಮೋರ್ಗಾನ್, ಬೋಫಾ ಸೆಕ್ಯುರಿಟೀಸ್ ಮತ್ತು ಜೆಫ್ರೀಸ್ ಸೇರಿದಂತೆ ಏಳು ಹೂಡಿಕೆ ಬ್ಯಾಂಕುಗಳನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಪ್ಲಾಟ್ಫಾರ್ಮ್ ಶುಲ್ಕವು ಆಹಾರ ವಿತರಣಾ ಕಂಪನಿಗಳು ಎಲ್ಲ ಗ್ರಾಹಕರಿಗೆ ವಿಧಿಸುವ ಸ್ಥಿರ ಶುಲ್ಕವಾಗಿದೆ. ವಿತರಣಾ ಕಂಪನಿಗಳು ತಮ್ಮ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಫೀ ಪ್ರಮುಖವಾಗಿದೆ.
ಇದನ್ನೂ ಓದಿ : AI ಈ ಹಿಂದೆ ಅಂದುಕೊಂಡಷ್ಟು ನೌಕರಿಗಳನ್ನು ಕಸಿಯದು: ವರದಿ