ಮುಂಬೈ: ಅಮೆರಿಕ ಫೆಡರಲ್ ರಿಸರ್ವ್ ನಿರೀಕ್ಷೆಗಿಂತ ಹೆಚ್ಚು 50 ಬಿಪಿಎಸ್ನಷ್ಟು ಬಡ್ಡಿ ದರ ಕಡಿತ ಮಾಡಿದ್ದರಿಂದ ಉತ್ತೇಜಿತವಾದ ಭಾರತದ ಬೆಂಚ್ ಮಾರ್ಕ್ ಷೇರು ಮಾರುಕಟ್ಟೆ ಸೂಚ್ಯಂಕಗಳು ಗುರುವಾರದ ವಹಿವಾಟಿನಲ್ಲಿ ಏರಿಕೆಯೊಂದಿಗೆ ಕೊನೆಗೊಂಡವು.
ಬಿಎಸ್ಇ ಸೆನ್ಸೆಕ್ಸ್ 236.57 ಪಾಯಿಂಟ್ಸ್ ಏರಿಕೆಯಾಗಿ 83,184.80 ರಲ್ಲಿ ಕೊನೆಗೊಂಡರೆ, ಎನ್ಎಸ್ಇ ನಿಫ್ಟಿ 50 38.25 ಪಾಯಿಂಟ್ಸ್ ಏರಿಕೆಯಾಗಿ 25,415.80 ರಲ್ಲಿ ಕೊನೆಗೊಂಡಿದೆ. ದಿನದ ಆರಂಭಿಕ ವಹಿವಾಟಿನಲ್ಲಿ ಎರಡೂ ಸೂಚ್ಯಂಕಗಳು ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದವು. ಬೆಂಚ್ ಮಾರ್ಕ್ ಸೂಚ್ಯಂಕಗಳು ಲಾಭ ಗಳಿಸಿದರೆ, ಸ್ಮಾಲ್ ಕ್ಯಾಪ್ ಮತ್ತು ಮಿಡ್ ಕ್ಯಾಪ್ ಷೇರುಗಳನ್ನು ಒಳಗೊಂಡ ವಿಶಾಲ ಮಾರುಕಟ್ಟೆ ಸೂಚ್ಯಂಕಗಳು ತೀವ್ರವಾಗಿ ಕುಸಿದವು. ಇದು ಎಲ್ಲ ಕ್ಷೇತ್ರಗಳ ಅನೇಕ ಪಿಎಸ್ ಯು ಷೇರುಗಳ ಮೇಲೆ ಪರಿಣಾಮ ಬೀರಿತು.
ನಿಫ್ಟಿ ಬ್ಯಾಂಕ್ ಮತ್ತು ನಿಫ್ಟಿ ಫೈನಾನ್ಷಿಯಲ್ ಸರ್ವೀಸಸ್ ಸೂಚ್ಯಂಕಗಳು ಲಾಭ ಗಳಿಸಿದವು. ಆದರೆ, ನಿಫ್ಟಿ ಐಟಿ 50 ಕುಸಿಯಿತು. ಅನೇಕ ವಿಶ್ಲೇಷಕರು ಐಟಿ ಷೇರುಗಳಲ್ಲಿನ ಲಾಭದ ಬುಕಿಂಗ್ ಇದಕ್ಕೆ ಕಾರಣ ಎಂದು ಹೇಳಿದ್ದಾರೆ.
ಈ ಷೇರುಗಳಿಗೆ ಲಾಭ: ಎನ್ಟಿಪಿಸಿ, ಟೈಟನ್, ನೆಸ್ಲೆ ಇಂಡಿಯಾ, ಕೊಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್ ನಿಫ್ಟಿ 50 ನಲ್ಲಿ ಲಾಭ ಗಳಿಸಿದ ಮೊದಲ ಐದು ಷೇರುಗಳಾಗಿವೆ. ಮತ್ತೊಂದೆಡೆ ಬಿಪಿಸಿಎಲ್, ಕೋಲ್ ಇಂಡಿಯಾ, ಒಎನ್ಜಿಸಿ, ಅದಾನಿ ಪೋರ್ಟ್ಸ್ ಮತ್ತು ಶ್ರೀರಾಮ್ ಫೈನಾನ್ಸ್ ನಷ್ಟ ಅನುಭವಿಸಿದ ಪ್ರಮುಖ ಷೇರುಗಳಾಗಿವೆ.
ಯುಎಸ್ ಫೆಡರಲ್ ರಿಸರ್ವ್ ಬೆಂಚ್ ಮಾರ್ಕ್ ಬಡ್ಡಿದರವನ್ನು ಶೇಕಡಾ 0.50 ಬೇಸಿಸ್ ಪಾಯಿಂಟ್ಗಳಷ್ಟು ಕಡಿತಗೊಳಿಸಿದ ನಂತರ ರೂಪಾಯಿ ಗುರುವಾರ ಯುಎಸ್ ಡಾಲರ್ ವಿರುದ್ಧ ಎರಡು ತಿಂಗಳ ಗರಿಷ್ಠ ಮಟ್ಟವಾದ 83.66 ಕ್ಕೆ ತಲುಪಿದೆ.
ಇಂಟರ್ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ, ಭಾರತೀಯ ಕರೆನ್ಸಿಯು 83.70 ಕ್ಕೆ ಪ್ರಾರಂಭವಾಯಿತು ಮತ್ತು ಡಾಲರ್ ವಿರುದ್ಧ ಇಂಟ್ರಾ-ಡೇ ಗರಿಷ್ಠ 83.56 ಕ್ಕೆ ತಲುಪಿತ್ತು. ಈ ಅವಧಿಯಲ್ಲಿ ಇದು ಡಾಲರ್ ವಿರುದ್ಧ 83.73 ರ ಕನಿಷ್ಠ ಮಟ್ಟವನ್ನು ಮುಟ್ಟಿತ್ತು. ರೂಪಾಯಿ ಅಂತಿಮವಾಗಿ ಅಮೆರಿಕನ್ ಕರೆನ್ಸಿಯ ವಿರುದ್ಧ 83.66 (ತಾತ್ಕಾಲಿಕ) ರಲ್ಲಿ ಸ್ಥಿರವಾಯಿತು. ಇದು ಹಿಂದಿನ ಮುಕ್ತಾಯಕ್ಕಿಂತ 10 ಪೈಸೆ ಲಾಭವಾಗಿದೆ.
ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲವು ಫ್ಯೂಚರ್ಸ್ ವಹಿವಾಟಿನಲ್ಲಿ ಬ್ಯಾರೆಲ್ಗೆ ಶೇಕಡಾ 1.05 ರಷ್ಟು ಏರಿಕೆಯಾಗಿ 74.42 ಡಾಲರ್ಗೆ ತಲುಪಿದೆ.
ಇದನ್ನೂ ಓದಿ : 70 ಸಾವಿರ ಕೋಟಿ ರೂ.ಗೆ ತಲುಪಲಿದೆ ಭಾರತದ ಬಾಸ್ಮತಿ ಉದ್ಯಮ: ಕ್ರಿಸಿಲ್ ರೇಟಿಂಗ್ಸ್ ವರದಿ - INDIAN BASMATI INDUSTRY