ಮುಂಬೈ: ಭಾರತೀಯ ಷೇರು ಮಾರುಕಟ್ಟೆಯ ಮಾನದಂಡಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ50 ಆಗಸ್ಟ್ 1ರ ಗುರುವಾರ ಹೊಸ ದಾಖಲೆಯ ಎತ್ತರದಲ್ಲಿ ಕೊನೆಗೊಂಡವು. ಈ ಮೂಲಕ ಷೇರು ಮಾರುಕಟ್ಟೆಯು ಸತತ ಐದನೇ ದಿನ ಲಾಭದೊಂದಿಗೆ ಕೊನೆಗೊಂಡಿದೆ. ಎಚ್ಡಿಎಫ್ಸಿ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ನ ಉತ್ತಮ ಪ್ರದರ್ಶನದಿಂದಾಗಿ ಷೇರು ಮಾರುಕಟ್ಟೆಯಲ್ಲಿ ಪ್ರಮುಖವಾಗಿ ಏರಿಕೆ ಕಂಡು ಬಂದಿದೆ.
ಗುರುವಾರದ ದಿನದ ಮಧ್ಯದ ವಹಿವಾಟಿನಲ್ಲಿ ಸೆನ್ಸೆಕ್ಸ್ ತನ್ನ ಸಾರ್ವಕಾಲಿಕ ಗರಿಷ್ಠ 82,129.49 ಕ್ಕೆ ತಲುಪಿದರೆ, ನಿಫ್ಟಿ 50 25,078.30 ರ ಹೊಸ ಗರಿಷ್ಠ ತಲುಪಿತ್ತು.
ಅಂತಿಮವಾಗಿ, ಸೆನ್ಸೆಕ್ಸ್ 126 ಪಾಯಿಂಟ್ ಅಥವಾ ಶೇಕಡಾ 0.15 ರಷ್ಟು ಏರಿಕೆ ಕಂಡು 81,867.55 ರಲ್ಲಿ ಕೊನೆಗೊಂಡರೆ, ನಿಫ್ಟಿ50 60 ಪಾಯಿಂಟ್ಸ್ ಅಥವಾ ಶೇಕಡಾ 0.24 ರಷ್ಟು ಏರಿಕೆ ಕಂಡು 25,010.90 ರಲ್ಲಿ ಮುಕ್ತಾಯವಾಗಿದೆ. ಆದಾಗ್ಯೂ, ಮಧ್ಯಮ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಲಾಭದ ಬುಕಿಂಗ್ನಿಂದಾಗಿ ನಷ್ಟದೊಂದಿಗೆ ಕೊನೆಗೊಂಡವು. ಬಿಎಸ್ಇ ಮಿಡ್ ಕ್ಯಾಪ್ ಸೂಚ್ಯಂಕವು ಶೇಕಡಾ 0.80 ರಷ್ಟು ಕುಸಿದರೆ, ಸ್ಮಾಲ್ ಕ್ಯಾಪ್ ಸೂಚ್ಯಂಕವು ಶೇಕಡಾ 0.70 ರಷ್ಟು ಕುಸಿದಿದೆ.
ನಿಫ್ಟಿ50 ಸೂಚ್ಯಂಕದಲ್ಲಿ ಲಾಭದಲ್ಲಿ ಕೊನೆಗೊಂಡ 28 ಷೇರುಗಳ ಪೈಕಿ ಪವರ್ ಗ್ರಿಡ್ (3.82 ಶೇಕಡಾ), ಕೋಲ್ ಇಂಡಿಯಾ (3.47 ಶೇಕಡಾ) ಮತ್ತು ಒಎನ್ಜಿಸಿ (2.03 ಶೇಕಡಾ) ಅಗ್ರಸ್ಥಾನದಲ್ಲಿವೆ. ಮತ್ತೊಂದೆಡೆ, ಮಹೀಂದ್ರಾ ಮತ್ತು ಮಹೀಂದ್ರಾ (ಶೇಕಡಾ 2.78), ಟಾಟಾ ಸ್ಟೀಲ್ (ಶೇಕಡಾ 1.37) ಮತ್ತು ಹೀರೋ ಮೋಟೊಕಾರ್ಪ್ (ಶೇಕಡಾ 1.35 ರಷ್ಟು ಕುಸಿತ) ಷೇರುಗಳು ಹೆಚ್ಚು ನಷ್ಟ ಅನುಭವಿಸಿದವು.
ವಲಯ ಸೂಚ್ಯಂಕಗಳಲ್ಲಿ ನಿಫ್ಟಿ ಮೀಡಿಯಾ (1.89 ಶೇಕಡಾ), ರಿಯಾಲ್ಟಿ (1.70 ಶೇಕಡಾ), ಪಿಎಸ್ ಯು ಬ್ಯಾಂಕ್ (0.99 ಶೇಕಡಾ) ಮತ್ತು ಆಟೋ (0.74 ಶೇಕಡಾ) ನಷ್ಟ ಅನುಭವಿಸಿವೆ. ನಿಫ್ಟಿ ಬ್ಯಾಂಕ್ ಮತ್ತು ಖಾಸಗಿ ಬ್ಯಾಂಕ್ ಸೂಚ್ಯಂಕಗಳು ಫ್ಲಾಟ್ ಆಗಿ ಕೊನೆಗೊಂಡವು.
ಡಾಲರ್ಗೆ ಹೆಚ್ಚಾದ ಬೇಡಿಕೆ ಮತ್ತು ಕಚ್ಚಾ ತೈಲ ಬೆಲೆಗಳ ಹೆಚ್ಚಳದ ಮಧ್ಯೆ ರೂಪಾಯಿ ಗುರುವಾರ ಯುಎಸ್ ಕರೆನ್ಸಿ ವಿರುದ್ಧ 5 ಪೈಸೆ ಕುಸಿದು 83.73 ರಲ್ಲಿ ಸ್ಥಿರವಾಯಿತು. ಯುಎಸ್ ಫೆಡರಲ್ ರಿಸರ್ವ್ ಮುಂದಿನ ದಿನಗಳಲ್ಲಿ ದರ ಕಡಿತದ ಸುಳಿವು ನೀಡಿದ ನಂತರ ಸಾಗರೋತ್ತರ ಮಾರುಕಟ್ಟೆಗಳಲ್ಲಿ ಯುಎಸ್ ಡಾಲರ್ನ ದೌರ್ಬಲ್ಯದಿಂದಾಗಿ ರೂಪಾಯಿ 83.67 ಕ್ಕೆ ಏರಿಕೆಯಾಗಿತ್ತು.
ಆದಾಗ್ಯೂ, ರೂಪಾಯಿ ಲಾಭ ಉಳಿಸಿಕೊಳ್ಳಲು ವಿಫಲವಾಯಿತು ಮತ್ತು ನಂತರ ದಿನದ ಕನಿಷ್ಠ 83.75 ಕ್ಕೆ ಇಳಿಯಿತು. ಅಂತಿಮವಾಗಿ ರೂಪಾಯಿಯು 83.73 ಕ್ಕೆ (ತಾತ್ಕಾಲಿಕ) ಸ್ಥಿರವಾಯಿತು. ಇದು ಹಿಂದಿನ ಮುಕ್ತಾಯಕ್ಕಿಂತ 5 ಪೈಸೆ ಕಡಿಮೆಯಾಗಿದೆ.
ಇದನ್ನೂ ಓದಿ: ವಿಯೆಟ್ನಾಂನ ಎರಡು ವಿಮಾನ ನಿಲ್ದಾಣಗಳಲ್ಲಿಯೂ ಭಾರತದ ಅದಾನಿ ಗ್ರೂಪ್ ಹೂಡಿಕೆ! - Adani Group Invest