ನವದೆಹಲಿ: ಭಾರತದ ಸೆಮಿಕಂಡಕ್ಟರ್ ಉತ್ಪಾದನಾ ವಲಯದ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ), ವಿನ್ಯಾಸ, ಉತ್ಪಾದನೆ ಮತ್ತು ಸುಧಾರಿತ ಪ್ಯಾಕೇಜಿಂಗ್ ವಿಭಾಗಗಳಲ್ಲಿ 2027ರ ವೇಳೆಗೆ 2.5 ಲಕ್ಷದಿಂದ 3 ಲಕ್ಷ ನುರಿತ ಉದ್ಯೋಗಿಗಳ ಅಗತ್ಯವಿದೆ ಎಂದು ವರದಿಯೊಂದು ಸೋಮವಾರ ತಿಳಿಸಿದೆ.
ವಿಶ್ವದ ಪ್ರಮುಖ ಎಲೆಕ್ಟ್ರಾನಿಕ್ ತಯಾರಕ ಕಂಪನಿಗಳಿಂದ ರಿಸ್ಕ್ ಕಡಿಮೆ ಮಾಡಿಕೊಳ್ಳುವ ಯತ್ನ, ಸರ್ಕಾರದ ಪ್ರೋತ್ಸಾಹಕ ಉಪಕ್ರಮಗಳು ಮತ್ತು ಭಾರತದಲ್ಲಿನ ಪ್ರತಿಭಾವಂತ ಉದ್ಯೋಗಿಗಳ ಕಾರಣದಿಂದಾಗಿ ಜಾಗತಿಕ ಸೆಮಿಕಂಡಕ್ಟರ್ ಉತ್ಪಾದನಾ ವಲಯದಲ್ಲಿ ದೇಶವು ಪ್ರಮುಖ ಸ್ಥಾನ ಆಕ್ರಮಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಟೀಮ್ ಲೀಸ್ ಡಿಗ್ರಿ ಅಪ್ರೆಂಟಿಸ್ ಶಿಪ್ ವರದಿ ತಿಳಿಸಿದೆ.
2030ರ ವೇಳೆಗೆ 100 ಬಿಲಿಯನ್ ಡಾಲರ್ ಉದ್ಯಮವಾಗುವ ನಿರೀಕ್ಷೆಯಿರುವ ಸೆಮಿಕಂಡಕ್ಟರ್ ಉದ್ಯಮದ ವಿಸ್ತರಣೆಯು 2025-2026ರ ವೇಳೆಗೆ ಸರಿಸುಮಾರು 1 ಮಿಲಿಯನ್ ಜಾಗತಿಕ ಉದ್ಯೋಗಗಳನ್ನು ಸೃಷ್ಟಿಸಲಿದೆ. ಇದು ಭಾರತದ ವಿಶಾಲ ಆರ್ಥಿಕ ಮತ್ತು ಕೈಗಾರಿಕಾ ಬೆಳವಣಿಗೆಯ ಉದ್ದೇಶಗಳಿಗೆ ಅನುಗುಣವಾಗಿದೆ.
ಉದ್ಯಮದಲ್ಲಿ ಎದುರಾಗಿರುವ ನುರಿತ ಉದ್ಯೋಗಿಗಳ ಕೊರತೆಯನ್ನು ಕಡಿಮೆ ಮಾಡಲು ಎಲೆಕ್ಟ್ರಾನಿಕ್ಸ್ ಸೆಕ್ಟರ್ ಸ್ಕಿಲ್ ಕೌನ್ಸಿಲ್ (ಇಎಸ್ಎಸ್ಸಿ) (The Electronics Sector Skill Council) ಪ್ರಸ್ತುತ ರಾಷ್ಟ್ರೀಯ ಅಪ್ರೆಂಟಿಸ್ ಶಿಪ್ ಉತ್ತೇಜನ (ಎನ್ಎಪಿಎಸ್) ಯೋಜನೆಯಡಿ 35ಕ್ಕೂ ಹೆಚ್ಚು ಅಪ್ರೆಂಟಿಸ್ ಶಿಪ್ ಕೋರ್ಸ್ಗಳನ್ನು ನಡೆಸುತ್ತಿದೆ.
ಉದ್ಯೋಗಿಗಳ ಬೇಡಿಕೆ ಮತ್ತು ಪೂರೈಕೆಯ ಈ ಅಂತರವನ್ನು ಪರಿಹರಿಸಲು, ಟೀಮ್ ಲೀಸ್ ಡಿಗ್ರಿ ಅಪ್ರೆಂಟಿಸ್‌ಶಿಪ್ ವಿಭಾಗವು ಶೈಕ್ಷಣಿಕ, ಸರ್ಕಾರಿ ಸಂಸ್ಥೆಗಳು ಮತ್ತು ಉದ್ಯಮಿಗಳೊಂದಿಗೆ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಈ ಬಗ್ಗೆ ಮಾತನಾಡಿದ ಟೀಮ್ ಲೀಸ್ ಡಿಗ್ರಿ ಅಪ್ರೆಂಟಿಸ್ ಶಿಪ್ನ ಸಿಇಒ ರಮೇಶ್ ಅಲ್ಲೂರಿ ರೆಡ್ಡಿ, ವಿಶೇಷವಾಗಿ 15 ಬಿಲಿಯನ್ ಡಾಲರ್ ಹೂಡಿಕೆಯೊಂದಿಗೆ ಮೂರು ಸೆಮಿಕಂಡಕ್ಟರ್ ಕಾರ್ಖಾನೆಗಳು ಆರಂಭವಾಗುತ್ತಿರುವುದರಿಂದ ಭಾರತದಲ್ಲಿ ಉದ್ಯೋಗಗಳ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಹೇಳಿದರು.
"ಎಐ ಚಾಲಿತ ತಂತ್ರಜ್ಞಾನಗಳಲ್ಲಿನ ಬೆಳವಣಿಗೆಯು ಸೆಮಿಕಂಡಕ್ಟರ್ ಉದ್ಯಮದಲ್ಲಿ ಹೆಚ್ಚಿನ ಮೌಲ್ಯದ ಚಟುವಟಿಕೆಗಳತ್ತ ಭಾರತವನ್ನು ಮುನ್ನಡೆಸುತ್ತಿದೆ. ಇದು ಎಐ ಚಾಲಿತ ಚಿಪ್ ವಿನ್ಯಾಸ ಮತ್ತು ಸ್ಮಾರ್ಟ್ ಉತ್ಪಾದನೆಯು ಕೃತಕ ಬುದ್ಧಿಮತ್ತೆ (ಎಐ), ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಮತ್ತು 5 ಜಿಯಲ್ಲಿ ನುರಿತ ವೃತ್ತಿಪರರಿಗೆ ಬೇಡಿಕೆಯನ್ನು ಸೃಷ್ಟಿಸುತ್ತಿದೆ" ಎಂದು ರೆಡ್ಡಿ ಹೇಳಿದರು.
ಹೆಚ್ಚಿನ ಮೌಲ್ಯ ಸೃಷ್ಟಿ ಚಟುವಟಿಕೆಗಳಿಗೆ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು ಮತ್ತು ಪದವಿ ಅಪ್ರೆಂಟಿಸ್ ಶಿಪ್ ಮತ್ತು ತರಬೇತಿ ಕಾರ್ಯಕ್ರಮಗಳ ಮೂಲಕ ಸಮರ್ಥ ಉದ್ಯೋಗಿಗಳ ಕಾರ್ಯಪಡೆಯನ್ನು ಬೆಳೆಸುವುದು ಸೆಮಿಕಂಡಕ್ಟರ್ ವಲಯದಲ್ಲಿ ಭಾರತವು ಮಹತ್ವದ ದೇಶವಾಗಿ ಗುರುತಿಸಿಕೊಳ್ಳುವಲ್ಲಿ ನಿರ್ಣಾಯಕವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪಿಎಲ್ಐ ಯೋಜನೆಯು ನಿರ್ದಿಷ್ಟವಾಗಿ, ದೇಶದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಕಾರ್ಖಾನೆಗಳನ್ನು ಸ್ಥಾಪಿಸುವ ಕಂಪನಿಗಳಿಗೆ 1.7 ಬಿಲಿಯನ್ ಡಾಲರ್ ಪ್ರೋತ್ಸಾಹಕ ಪ್ಯಾಕೇಜ್ ನೀಡುತ್ತದೆ.
ಇದನ್ನೂ ಓದಿ: ಕಳೆದೊಂದು ದಶಕದಲ್ಲಿ ಭಾರತೀಯರ ಆದಾಯ ಏರಿಕೆ: ಗೃಹ ಬಳಕೆಯ ವೆಚ್ಚವೂ ಹೆಚ್ಚಳ - Household Consumption Expenditure