ನವದೆಹಲಿ: 2024ರ ಎರಡನೇ ತ್ರೈಮಾಸಿಕದಲ್ಲಿ ಜಾಗತಿಕ ಸ್ಮಾರ್ಟ್ಫೋನ್ ಮಾರಾಟ ಶೇಕಡಾ 8ರಷ್ಟು (ವರ್ಷದಿಂದ ವರ್ಷಕ್ಕೆ) ಹೆಚ್ಚಾಗಿದೆ. ಸ್ಮಾರ್ಟ್ಫೋನ್ ಮಾರಾಟದಲ್ಲಿ ಸ್ಯಾಮ್ಸಂಗ್ ಜಾಗತಿಕವಾಗಿ ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದು, ಶೇಕಡಾ 19ರಷ್ಟು ಮಾರುಕಟ್ಟೆ ಪಾಲು ಹೊಂದಿದೆ ಎಂದು ವರದಿಯೊಂದು ಶುಕ್ರವಾರ ತಿಳಿಸಿದೆ.
ಕೌಂಟರ್ ಪಾಯಿಂಟ್ ರಿಸರ್ಚ್ ಪ್ರಕಾರ, ಜಾಗತಿಕವಾಗಿ ಸ್ಮಾರ್ಟ್ಫೋನ್ ಮಾರುಕಟ್ಟೆಯ ಆದಾಯ ಕೂಡ ಶೇಕಡಾ 8ರಷ್ಟು ಏರಿಕೆಯಾಗಿದ್ದು, ಸ್ಮಾರ್ಟ್ಫೋನ್ಗಳ ಸರಾಸರಿ ಮಾರಾಟ ಬೆಲೆ (ಎಎಸ್ಪಿ) ಸಹ ಎರಡನೇ ತ್ರೈಮಾಸಿಕದಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿದೆ. ಇದು ಜಾಗತಿಕ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಸತತ ಮೂರನೇ ತ್ರೈಮಾಸಿಕದ ಬೆಳವಣಿಗೆಯಾಗಿದೆ.
ಯುರೋಪ್ ಮತ್ತು ಏಷ್ಯಾ ಪೆಸಿಫಿಕ್ ದೇಶಗಳಲ್ಲಿ ಸ್ಮಾರ್ಟ್ಫೋನ್ಗಳ ಮಾರಾಟ ಎರಡಂಕಿ ಬೆಳವಣಿಗೆಯನ್ನು ದಾಖಲಿಸಿದೆ. ಆದಾಗ್ಯೂ, ಬೇಸಿಗೆಯಲ್ಲಿ ತೀವ್ರ ಬಿಸಿಗಾಳಿಯ ಹೊಡೆತಕ್ಕೆ ಸಿಲುಕಿದ್ದ ಭಾರತದಲ್ಲಿ ಸ್ಮಾರ್ಟ್ಫೋನ್ಗಳ ಮಾರಾಟ ಅಲ್ಪ ಕುಸಿತವಾಗಿದೆ ಎಂದು ಹಿರಿಯ ವಿಶ್ಲೇಷಕ ಪ್ರಾಚಿರ್ ಸಿಂಗ್ ಹೇಳಿದ್ದಾರೆ.
ಭಾರತ ಸೇರಿದಂತೆ ಏಷ್ಯಾ ಪೆಸಿಫಿಕ್ (ಎಪಿಎಸಿ) ವಲಯವು ಮಾರಾಟದ ಪ್ರಮಾಣದಲ್ಲಿ ಶೇಕಡಾ 14ರಷ್ಟು ಹೆಚ್ಚಳದೊಂದಿಗೆ (ವರ್ಷದಿಂದ ವರ್ಷಕ್ಕೆ) ಅತಿದೊಡ್ಡ ಸ್ಮಾರ್ಟ್ಫೋನ್ ಮಾರುಕಟ್ಟೆಯಾಗಿ ಮುಂದುವರೆದಿದೆ.
ಒಟ್ಟಾರೆ, ಸ್ಮಾರ್ಟ್ಫೋನ್ ಮಾರುಕಟ್ಟೆಯ ಆದಾಯದಲ್ಲಿ ಆಪಲ್ ಶೇಕಡಾ 42ರಷ್ಟು ಪಾಲು ಹೊಂದಿರುವುದು ಗಮನಾರ್ಹ. ಅಗ್ರ ಐದು ಒಇಎಂಗಳ ಪೈಕಿ ಶಿಯೋಮಿ ಆದಾಯದ ಬೆಳವಣಿಗೆಯು ಸತತ ಎರಡನೇ ತ್ರೈಮಾಸಿಕದಲ್ಲಿ ಅತ್ಯಂತ ವೇಗವಾಗಿದೆ.
ಸ್ಯಾಮ್ ಸಂಗ್ 53.5 ಮಿಲಿಯನ್ ಫೋನ್ಗಳನ್ನು ಮಾರಾಟ ಮಾಡುವ ಮೂಲಕ ಮಾರುಕಟ್ಟೆಯ ನಾಯಕನಾಗಿ ಮುಂದುವರೆದಿದೆ. ಸ್ಯಾಮ್ಸಂಗ್ನ 5ಜಿ ಸಾಮರ್ಥ್ಯದ ಎ-ಸೀರಿಸ್ ಸ್ಮಾರ್ಟ್ಫೋನ್ಗಳು ಸದ್ಯ ಅತ್ಯಧಿಕ ಮಾರಾಟವಾಗುತ್ತಿವೆ. ಇನ್ನು ಆ್ಯಪಲ್ 45.6 ಮಿಲಿಯನ್ ಸ್ಮಾರ್ಟ್ಫೋನ್ಗಳನ್ನು ಮಾರಾಟ ಮಾಡುವ ಮೂಲಕ ಎರಡನೇ ಸ್ಥಾನದಲ್ಲಿದೆ. ಶಿಯೋಮಿ ಮತ್ತು ವಿವೋ ಕ್ರಮವಾಗಿ 42.3 ಮಿಲಿಯನ್ ಮತ್ತು 25.9 ಮಿಲಿಯನ್ ಫೋನ್ಗಳ ಮಾರಾಟದೊಂದಿಗೆ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ.
ಟೆಕ್ನೋ ಮತ್ತು ಇನ್ಫಿನಿಕ್ಸ್-ಬ್ರಾಂಡ್ ಸ್ಮಾರ್ಟ್ಫೋನ್ಗಳನ್ನು ತಯಾರಿಸುವ ಟ್ರಾನ್ಸ್ಶನ್ 25.5 ಮಿಲಿಯನ್ ಸ್ಮಾರ್ಟ್ಫೋನ್ಗಳ ಮಾರಾಟದೊಂದಿಗೆ ಐದನೇ ಸ್ಥಾನದಲ್ಲಿದೆ. ಸ್ಯಾಮ್ ಸಂಗ್ ಮತ್ತು ಆಪಲ್ ಎರಡೂ ವಿಶ್ವದ ದೊಡ್ಡ ಮಾರುಕಟ್ಟೆಗಳಲ್ಲಿ ಮಾರಾಟವನ್ನು ಮತ್ತಷ್ಟು ಹೆಚ್ಚಿಸಲು ದೀರ್ಘಕಾಲೀನ ಕಾರ್ಯತಂತ್ರಗಳನ್ನು ರೂಪಿಸಲಿವೆ ಎಂದು ವರದಿ ಹೇಳಿದೆ.
ಇದನ್ನೂ ಓದಿ: 145.40 ಶತಕೋಟಿ ಯೂನಿಟ್ಸ್ ತಲುಪಿದ ಭಾರತದ ವಿದ್ಯುಚ್ಛಕ್ತಿ ಬಳಕೆ: ಶೇ 3ರಷ್ಟು ಏರಿಕೆ - Indias Power Consumption