ಮುಂಬೈ (ಮಹಾರಾಷ್ಟ್ರ): ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿರೀಕ್ಷೆಗೂ ಮೀರಿ ಆದಾಯ ಗಳಿಸಿದ ಹಿನ್ನೆಲೆಯಲ್ಲಿ ಅದರ ಲಾಭಾಂಶವನ್ನು ಕೇಂದ್ರ ಸರ್ಕಾರಕ್ಕೆ ಭಾರೀ ಪ್ರಮಾಣದಲ್ಲಿ ನೀಡಲು ಮುಂದಾಗಿದೆ. 2023-24 ನೇ ಸಾಲಿಗೆ 2.11 ಲಕ್ಷ ಕೋಟಿ ರೂಪಾಯಿ ಡಿವಿಡೆಂಡ್ ಪಾವತಿಸಲು ಬುಧವಾರ ಅನುಮೋದನೆ ನೀಡಿದೆ.
ಗವರ್ನರ್ ಶಕ್ತಿಕಾಂತ ದಾಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಭಾರತೀಯ ರಿಸರ್ವ್ ಬ್ಯಾಂಕ್ನ ಕೇಂದ್ರೀಯ ನಿರ್ದೇಶಕರ ಮಂಡಳಿಯ 608ನೇ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 2023-24ನೇ ಸಾಲಿಗೆ ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿಯಾಗಿ 2,10,874 ಕೋಟಿ ರೂಪಾಯಿಗಳನ್ನು ವರ್ಗಾಯಿಸಲು ಮಂಡಳಿಯು ಅನುಮೋದನೆ ನೀಡಿದೆ ಎಂದು ಆರ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ.
ಅಂದರೆ, ಇದು 2022-23ರಲ್ಲಿ ಲಾಭಾಂಶ ಪಾವತಿಗಿಂತ ಎರಡು ಪಟ್ಟು ಹೆಚ್ಚು. ಕಳೆದ ಹಣಕಾಸು ವರ್ಷದಲ್ಲಿ 87,416 ಕೋಟಿ ರೂಪಾಯಿ ಲಾಭಾಂಶವನ್ನು ಆರ್‌ಬಿಐ ನೀಡಿತ್ತು. ಈ ಬಾರಿ ಅದು 2.11 ಲಕ್ಷ ಕೋಟಿ ರೂ.ಗೆ ಹೆಚ್ಚಿಸಿದೆ.
ಸಿಆರ್ಬಿ ಹೆಚ್ಚಳ: 2022-23 ನೇ ಹಣಕಾಸು ವರ್ಷದಲ್ಲಿ ಉತ್ತಮ ಆರ್ಥಿಕ ಬೆಳವಣಿಗೆ ಸಾಧಿಸಿದ್ದು, ಕಾಂಟಿನೆಂಟ್ ರಿಸ್ಕ್ ಬಫರ್ (ಸಿಆರ್ಬಿ) ಅನ್ನು ಶೇಕಡಾ 6 ಕ್ಕೆ ಹೆಚ್ಚಿಸಲಾಗಿತ್ತು. ಈ ವರ್ಷವೂ ಆರ್ಥಿಕತೆಯು ದೃಢ ಮತ್ತು ಸ್ಥಿರವಾಗಿ ಉಳಿದಿರುವುದರಿಂದ 2023-24 ನೇ ಸಾಲಿಗೆ ಸಿಆರ್ಬಿಯನ್ನು ಶೇಕಡಾ 6.50 ಕ್ಕೆ ಹೆಚ್ಚಿಸಲು ಮಂಡಳಿಯು ನಿರ್ಧರಿಸಿದೆ ಎಂದು ಆರ್‌ಬಿಐ ತಿಳಿಸಿದೆ.
ಕೇಂದ್ರಕ್ಕೆ ಆರ್ಬಿಐನಿಂದ ಯಾವ ವರ್ಷ ಎಷ್ಟು ಡಿವಿಡೆಂಟ್?
2022-23: 87,416 ಕೋಟಿ ರೂ.
2021-22: 30,307 ಕೋಟಿ ರೂ.
2020-21: 99,122 ಕೋಟಿ ರೂ.
2019-20: 57,128 ಕೋಟಿ ರೂ.
2018-19: 1,12,414 ಕೋಟಿ ರೂ.
2017-18: 50,000 ಕೋಟಿ ರೂ.
2016-17: 30,569 ಕೋಟಿ ರೂ.
ಭಾರತೀಯ ರಿಸರ್ವ್ ಬ್ಯಾಂಕ್ಗೆ ಎಲ್ಲಿಂದ ಬರುತ್ತೆ ಆದಾಯ?: ಎಲ್ಲ ಬ್ಯಾಂಕ್ಗಳ ಕೇಂದ್ರ ಬ್ಯಾಂಕ್ ಆಗಿರುವ ಆರ್‌ಬಿಐ ಯಾವೆಲ್ಲಾ ಮೂಲಗಳಿಂದ ಹಣ ಗಳಿಕೆ ಮಾಡುತ್ತದೆ ಎಂಬುದು ತುಂಬಾ ಜನರಿಗೆ ತಿಳಿದಿಲ್ಲ. ಇದು ಹತ್ತು ಹಲವಾರು ಕ್ಷೇತ್ರಗಳಿಂದ ಲಾಭಾಂಶವನ್ನು ಪಡೆದುಕೊಳ್ಳುತ್ತಿದೆ. ಅದರ ಮಾಹಿತಿ ಇಲ್ಲಿದೆ.
- ವಿದೇಶೀ ಕರೆನ್ಸ್ ಮಾರಾಟದಿಂದ ಬರುವ ಲಾಭ
- ಕಮರ್ಷಿಯಲ್ ಬ್ಯಾಂಕ್, ಹಣಕಾಸು ಸಂಸ್ಥೆಗಳಿಗೆ ಆರ್ಸಬಿಐ ರೆಪೋ ದರದಲ್ಲಿ ಸಾಲ ನೀಡುತ್ತದೆ. ಅದರಿಂದ ಬರುವ ಬಡ್ಡಿ.
- ರುಪೀ ಸೆಕ್ಯೂರಿಟೀಸ್ಗಳ ಮೂಲಕ ಬರುವ ಬಡ್ಡಿ
- ವಿದೇಶಿ ಕರೆನ್ಸಿ ಅಸೆಟ್ಸ್ ಅಥವಾ ವಿದೇಶಿ ಕರೆನ್ಸಿಗಳಿಂದ ಬರುವ ಬಡ್ಡಿ
- ಎಲ್ಎಎಫ್ ಮತ್ತು ಎಂಎಸ್ಎಫ್ ಮೂಲಕ ಬಡ್ಡಿ
ಇದನ್ನೂ ಓದಿ: ಭಾರತದ ವೇರೆಬಲ್ ಡಿವೈಸ್ ಮಾರುಕಟ್ಟೆ ಶೇ 2ರಷ್ಟು ಬೆಳವಣಿಗೆ: 2.56 ಕೋಟಿ ಸಾಧನ ಮಾರಾಟ - wearable device market