ಮುಂಬೈ(ಮಹಾರಾಷ್ಟ್ರ): ಬುಧವಾರ ರಾತ್ರಿ ಅಸ್ತಂತಗವಾದ ಭಾರತದ ದಿಗ್ಗಜ ಉದ್ಯಮಿ, ಕೊಡುಗೈ ದಾನಿ ರತನ್ ಟಾಟಾ ಅವರ ಅಂತಿಮ ಸಂಸ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ಮುಂಬೈನ ವರ್ಲಿಯಲ್ಲಿರುವ ಚಿತಾಗಾರದಲ್ಲಿ ಪಾರ್ಸಿ ಸಂಪ್ರದಾಯದಂತೆ ಗುರುವಾರ ಸಂಜೆ ನೆರವೇರಿತು. ಮಲಸಹೋದರ ನೊಯೆಲ್ ಟಾಟಾ ಸೇರಿದಂತೆ ಉದ್ಯಮ ದಿಗ್ಗಜರ ಕುಟುಂಬ ಸದಸ್ಯರು, ಟಾಟಾ ಗ್ರೂಪ್‌ನ ಅಧ್ಯಕ್ಷ ಎನ್.ಚಂದ್ರಶೇಖರನ್, ಟಾಟಾ ಸಮೂಹದ ಉದ್ಯೋಗಿಗಳು ಮತ್ತು ಕೈಗಾರಿಕೋದ್ಯಮಿಗಳು ರತನ್ ಟಾಟಾರಿಗೆ ಅಂತಿಮ ವಿದಾಯ ಹೇಳಿದರು.
ಕೇಂದ್ರ ಸಚಿವರಾದ ಅಮಿತ್ ಶಾ, ಪಿಯೂಷ್ ಗೋಯಲ್, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಮಾಜಿ ಸಿಎಂ ಸುಶೀಲ್ ಕುಮಾರ್ ಶಿಂಧೆ, ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಸೇರಿದಂತೆ ಅನೇಕ ಗಣ್ಯರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
VIDEO | Mortal remains of Ratan Tata reach Worli Crematorium for last rites. pic.twitter.com/ZiZbkQs0eP
— Press Trust of India (@PTI_News) October 10, 2024
ಅಸೌಖ್ಯದಿಂದಾಗಿ ಬುಧವಾರ ರಾತ್ರಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಹಿರಿಯ ಉದ್ಯಮಿ ಇಹಲೋಕ ತ್ಯಜಿಸಿದ್ದರು. ಟಾಟಾರ ಅಂತ್ಯಸಂಸ್ಕಾರಕ್ಕೂ ಮೊದಲು ಮುಂಬೈನ ಎನ್‌ಸಿಪಿಎ ಮೈದಾನದಿಂದ ವರ್ಲಿ ಚಿತಾಗಾರದವರೆಗೆ ಅಂತಿಮ ಯಾತ್ರೆ ನಡೆಸಲಾಯಿತು. ಈ ವೇಳೆ ಸಹಸ್ರಾರು ಜನರು ಉದ್ಯಮ ದಿಗ್ಗಜನ ಪಾರ್ಥಿವ ಶರೀರದ ದರ್ಶನ ಪಡೆದರು. ದಾರಿಯುದ್ದಕ್ಕೂ 'ರತನ್ ಟಾಟಾ ಅಮರ್ ರಹೇ' ಎಂಬ ಘೋಷಣೆ ಕೇಳಿಬಂತು.
ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಮಧ್ಯಾಹ್ನ 3:30ರವರೆಗೆ ಎನ್‌ಸಿಪಿಎ ಮೈದಾನದಲ್ಲಿ ಇರಿಸಲಾಗಿತ್ತು. ಈ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಪುತ್ರ ಹಾಗೂ ಸಚಿವ ನಾರಾ ಲೋಕೇಶ್ ಸೇರಿದಂತೆ ಹಲವರು ನಮನ ಸಲ್ಲಿಸಿದರು.
VIDEO | State honours to be accorded to industrialist Ratan Tata, whose mortal remains are being cremated at Worli Crematorium in Mumbai. pic.twitter.com/4qysETpVG5
— Press Trust of India (@PTI_News) October 10, 2024
ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್, ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್, ಎನ್‌ಸಿಪಿ ನಾಯಕ ಶರದ್ ಪವಾರ್, ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರ್ ಮಂಗಳಂ ಬಿರ್ಲಾ, ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು ರತನ್ ಟಾಟಾರಿಗೆ ಪುಷ್ಪ ನಮನ ಸಲ್ಲಿಸಿದರು.
#WATCH | Visuals of Ratan Tata's dog, Goa outside NCPA lawns, in Mumbai where the mortal remains of Ratan Tata were kept for the public to pay their last respects. pic.twitter.com/eVpxssjpLa
— ANI (@ANI) October 10, 2024
ರತನ್ ಟಾಟಾ ಅವರ ನೆಚ್ಚಿನ ಶ್ವಾನ 'ಗೋವಾ' ಕೂಡಾ ಸ್ಥಳದಲ್ಲಿದ್ದು, ಗಮನ ಸೆಳೆಯಿತು.
ಸಕಲ ಸರ್ಕಾರಿ ಗೌರವಗಳೊಂದಿಗೆ ವಿದಾಯ: ದೇಶದ ಉದ್ಯಮ ವಲಯವನ್ನು ದೇಶ-ವಿದೇಶಗಳಲ್ಲಿ ಹರಡಿದ್ದ ದಿಗ್ಗಜ ರತನ್ ಟಾಟಾ ಅವರಿಗೆ ಮಹಾರಾಷ್ಟ್ರ ಸರ್ಕಾರ ಸಕಲ ಸರ್ಕಾರಿ ಗೌರವ ಸಲ್ಲಿಸಿತು. ಮುಂಬೈ ಪೊಲೀಸರು ಗನ್ ಸೆಲ್ಯೂಟ್ ನೀಡಿದರು.
ಮುಂಬೈನ ಕೊಲಾಬಾದಲ್ಲಿರುವ ದಿವಂಗತ ಉದ್ಯಮಿಯ ನಿವಾಸದಲ್ಲಿ ಇನ್ನೂ ಮೂರು ದಿನಗಳ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಟಾಟಾ ಸಾಮ್ರಾಜ್ಯಕ್ಕೆ ಉತ್ತರಾಧಿಕಾರಿ ಯಾರು? ಟಾಟಾ ಕುಟುಂಬದ ಪ್ರಮುಖರ ಪರಿಚಯ