ನವದೆಹಲಿ: ಇ-ಕಾಮರ್ಸ್ ಭಾರತದಲ್ಲಿ ಉದ್ಯೋಗ ಸೃಷ್ಟಿಯ ಪ್ರಮುಖ ಮೂಲವಾಗಿದ್ದು, ಆನ್ ಲೈನ್ ಮಾರಾಟ ಕಂಪನಿಗಳು ದೇಶದಲ್ಲಿ 15.8 ಮಿಲಿಯನ್ (ಸುಮಾರು 1.6 ಕೋಟಿ) ಉದ್ಯೋಗಗಳನ್ನು ಸೃಷ್ಟಿಸಿವೆ ಹಾಗೂ ಇದರಲ್ಲಿ ಸುಮಾರು 3.5 ಮಿಲಿಯನ್ (35 ಲಕ್ಷ) ಮಹಿಳೆಯರು ಉದ್ಯೋಗ ಪಡೆದುಕೊಂಡಿದ್ದಾರೆ ಎಂದು ಪಹ್ಲೆ ಇಂಡಿಯಾ ಫೌಂಡೇಶನ್ ವರದಿ ಬುಧವಾರ ತಿಳಿಸಿದೆ.
ನವದೆಹಲಿ ಮೂಲದ ನೀತಿ ಸಂಶೋಧನಾ ಸಂಸ್ಥೆಯಾದ ಪಹ್ಲೆ ಇಂಡಿಯಾ ಫೌಂಡೇಶನ್ (ಪಿಐಎಫ್) (Pahle India Foundation) ತಯಾರಿಸಿದ ವರದಿಯನ್ನು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಬಿಡುಗಡೆ ಮಾಡಿದರು. ದೇಶದಲ್ಲಿ 1.76 ಮಿಲಿಯನ್ ಚಿಲ್ಲರೆ ಉದ್ಯಮಗಳು ಈಗ ಇ-ಕಾಮರ್ಸ್ ವಹಿವಾಟಿನಲ್ಲಿ ಭಾಗಿಯಾಗಿವೆ ಎಂದು ವರದಿ ಹೇಳಿದೆ.
ವರದಿಯ ಪ್ರಕಾರ, ದೊಡ್ಡ ನಗರಗಳ ಗ್ರಾಹಕರಿಗೆ ಹೋಲಿಸಿದರೆ 3 ನೇ ಶ್ರೇಣಿಯ ನಗರಗಳ ಗ್ರಾಹಕರು ತಿಂಗಳಿಗೆ 5,000 ರೂ.ಗಿಂತ ಹೆಚ್ಚು ಮೊತ್ತವನ್ನು ಆನ್ ಲೈನ್ ಶಾಪಿಂಗ್ಗಾಗಿ ಖರ್ಚು ಮಾಡುತ್ತಿದ್ದಾರೆ.
'ಭಾರತದಲ್ಲಿ ಉದ್ಯೋಗ ಮತ್ತು ಗ್ರಾಹಕರ ಕಲ್ಯಾಣದ ಮೇಲೆ ಇ-ಕಾಮರ್ಸ್ನ ಒಟ್ಟಾರೆ ಪರಿಣಾಮ' ಎಂಬ ಹೆಸರಿನ ಈ ವರದಿಯು, ಆಫ್ ಲೈನ್ ಪ್ಲಾಟ್ ಫಾರ್ಮ್ಗಳಿಗೆ ಹೋಲಿಸಿದರೆ ಆನ್ ಲೈನ್ ಮಾರಾಟಗಾರರು ಸರಾಸರಿ 54 ಪ್ರತಿಶತ ಹೆಚ್ಚು ಉದ್ಯೋಗಿಗಳನ್ನು ಮತ್ತು ಎರಡು ಪಟ್ಟು ಹೆಚ್ಚು ಮಹಿಳಾ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತಿವೆ ಎಂದು ತಿಳಿಸಿದೆ.
ಇ-ಕಾಮರ್ಸ್ ಮಾರುಕಟ್ಟೆಯು ಈಗ ಶ್ರೇಣಿ 3 ನಗರಗಳಂತಹ ಹೊಸ ಪ್ರದೇಶಗಳಿಗೆ ವಿಸ್ತರಿಸುತ್ತಿದೆ. ವರದಿಯ ಪ್ರಕಾರ, ಪ್ರತಿ ಇ-ಕಾಮರ್ಸ್ ಮಾರಾಟದ ಕಂಪನಿಯು, ಸರಾಸರಿ ಒಂಬತ್ತು ಜನರನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತಿದ್ದು, ಇದರಲ್ಲಿ ಇಬ್ಬರು ಮಹಿಳೆಯರಾಗಿದ್ದಾರೆ. ಮತ್ತೊಂದೆಡೆ, ಪ್ರತಿ ಆಫ್ ಲೈನ್ ಮಾರಾಟದ ಕಂಪನಿಯು ಸುಮಾರು ಆರು ಜನರನ್ನು ನೇಮಿಸಿಕೊಳ್ಳುತ್ತಿದ್ದು, ಇದರಲ್ಲಿ ಒಬ್ಬಳು ಮಾತ್ರ ಮಹಿಳೆ ಇರುತ್ತಾಳೆ.
ಇ-ಕಾಮರ್ಸ್ ವಲಯದಲ್ಲಿ ವಿಭಿನ್ನ ಕೌಶಲದ ಉದ್ಯೋಗಗಳಲ್ಲಿ ಹೆಚ್ಚಳ ಕಂಡುಬಂದಿದೆ. ಒಟ್ಟಾರೆಯಾಗಿ, ಸಂದರ್ಶನ ಮಾಡಿದ ಆನ್ ಲೈನ್ ಮಾರಾಟಗಾರರ ಪೈಕಿ ಮೂರನೇ ಎರಡರಷ್ಟು ಕಂಪನಿಗಳು ಕಳೆದ ವರ್ಷದಲ್ಲಿ ಆನ್ ಲೈನ್ ಮಾರಾಟ ಮೌಲ್ಯ ಮತ್ತು ಲಾಭ ಹೆಚ್ಚಳವಾಗಿದೆ ಎಂದು ಹೇಳಿವೆ ಮತ್ತು 58 ಪ್ರತಿಶತದಷ್ಟು ಕಂಪನಿಗಳು ಎರಡರಲ್ಲೂ ಹೆಚ್ಚಳ ಕಂಡಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಗೋಯಲ್, ಇ-ಕಾಮರ್ಸ್ ಬೆಳವಣಿಗೆಯು ನಾಗರಿಕ ಕೇಂದ್ರಿತವಾಗಿರಬೇಕು ಮತ್ತು ದೇಶದ ಸಮಾಜದ ದೊಡ್ಡ ವರ್ಗದಲ್ಲಿ ಪ್ರಯೋಜನಗಳನ್ನು ಸಮಾನವಾಗಿ ಹಂಚುವಂತಿರಬೇಕು ಎಂದು ಹೇಳಿದರು.
ಇದನ್ನೂ ಓದಿ : ಇ-ಕಾಮರ್ಸ್ನ ಅತಾರ್ಕಿಕ ಬೆಲೆ, ಡಿಸ್ಕೌಂಟ್ಗಳಿಂದ ಚಿಲ್ಲರೆ ವ್ಯಾಪಾರಗಳಿಗೆ ಸಂಕಷ್ಟ: ಸಚಿವ ಗೋಯಲ್ - E Commerce Discounts