ಬೆಂಗಳೂರು: ಓಲಾ ಎಲೆಕ್ಟ್ರಿಕ್ ಕಂಪನಿಯು 2023ರ ಹಣಕಾಸು ವರ್ಷಕ್ಕೆ ಹೋಲಿಸಿದರೆ 2024ರಲ್ಲಿ ಶೇ 115ರಷ್ಟು (ವರ್ಷದಿಂದ ವರ್ಷಕ್ಕೆ) ಬೆಳವಣಿಗೆ ಸಾಧಿಸಿದ್ದು, 3,28,785 ವಾಹನಗಳನ್ನು ಮಾರಾಟ ಮಾಡಿದೆ. ಹಿಂದಿನ ತ್ರೈಮಾಸಿಕದಲ್ಲಿ ಮಾರಾಟವಾಗಿದ್ದ 84,133 ವಾಹನಗಳಿಗೆ ಹೋಲಿಸಿದರೆ ಕಂಪನಿಯು 2024ರ ನಾಲ್ಕನೇ ತ್ರೈಮಾಸಿಕದಲ್ಲಿ 1,19,310ರಷ್ಟು ವಾಹನಗಳನ್ನು ಮಾರಾಟ ಮಾಡುವ ಮೂಲಕ ಶೇಕಡಾ 42ರಷ್ಟು (ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ) ಬೆಳವಣಿಗೆ ಸಾಧಿಸಿದೆ.
"ಮೊದಲ ಬಾರಿಗೆ 50,000ದ ಗಡಿ ದಾಖಲಾಗಿದ್ದು, ಮಾರ್ಚ್ನಲ್ಲಿ 53,000 ವಾಹನಳನ್ನು ಮಾರಾಟ ಮಾಡಿದ್ದೇವೆ. ಮಾರ್ಚ್ನಲ್ಲಿ ಶೇಕಡಾ 9ಕ್ಕಿಂತ ಹೆಚ್ಚು ಬೆಳವಣಿಗೆಯೊಂದಿಗೆ ಇವಿ ಉದ್ಯಮವು 2024ರ ಹಣಕಾಸು ವರ್ಷದಲ್ಲಿ ಶೇಕಡಾ 30ರಷ್ಟು ಭಾರಿ ಬೆಳವಣಿಗೆ ಕಂಡಿದೆ " ಎಂದು ಓಲಾ ಸಂಸ್ಥಾಪಕ ಮತ್ತು ಅಧ್ಯಕ್ಷ ಭವಿಶ್ ಅಗರ್ವಾಲ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಎಸ್ 1 ಎಕ್ಸ್ (4 ಕಿಲೋವ್ಯಾಟ್) ಬಿಡುಗಡೆಯೊಂದಿಗೆ, ಓಲಾ ಎಲೆಕ್ಟ್ರಿಕ್ ತನ್ನ ಪೋರ್ಟ್ಫೋಲಿಯೊವನ್ನು ಆರು ಉತ್ಪನ್ನಗಳಿಗೆ ವಿಸ್ತರಿಸಿದೆ. ಓಲಾದ ಹೊಸ ಆರು ವಾಹನಗಳ ಮಾಡೆಲ್ ಹೀಗಿವೆ: ಎಸ್ 1 ಪ್ರೊ, ಎಸ್ 1 ಏರ್, ಎಸ್ 1 ಎಕ್ಸ್ +, ಎಸ್ 1 ಎಕ್ಸ್ - 2 ಕಿಲೋವ್ಯಾಟ್, 3 ಕಿಲೋವ್ಯಾಟ್, 4 ಕಿಲೋವ್ಯಾಟ್.
"2024ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ನಾವು ಸುಮಾರು 1.20 ಲಕ್ಷ ವಾಹನಗಳನ್ನು ಮಾರಾಟ ಮಾಡಿದ್ದೇವೆ. ಈ ಮೂಲಕ ನಾವು ಬೆಳವಣಿಗೆಯ ಪಥವನ್ನು ಮುಂದುವರಿಸುವ ಮತ್ತು ಭಾರತದ ವಿದ್ಯುದ್ದೀಕರಣ ಉದ್ದೇಶಕ್ಕೆ ಕೊಡುಗೆ ನೀಡುವ ಗುರಿ ಹೊಂದಿದ್ದೇವೆ" ಎಂದು ಓಲಾ ಎಲೆಕ್ಟ್ರಿಕ್ನ ಮುಖ್ಯ ಮಾರುಕಟ್ಟೆ ಅಧಿಕಾರಿ ಅನ್ಶುಲ್ ಖಂಡೇಲ್ವಾಲ್ ಹೇಳಿದರು.
ಓಲಾ ಎಲೆಕ್ಟ್ರಿಕ್ ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ ಮತ್ತು ಇದು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ಸ್ಕೂಟರ್ ಗಳಲ್ಲಿ ಒಂದಾಗಿದೆ. ತಮಿಳುನಾಡಿನ ಹೊಸೂರಿನಲ್ಲಿ ಉತ್ಪಾದನಾ ಘಟಕವಿದೆ. ಓಲಾ ಎಲೆಕ್ಟ್ರಿಕ್ ಮೊಬಿಲಿಟಿಯನ್ನು 2017ರಲ್ಲಿ ಓಲಾ ಕ್ಯಾಬ್ಸ್ನ ಮಾತೃ ಕಂಪನಿಯಾದ ಎಎನ್ಐ ಟೆಕ್ನಾಲಜೀಸ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿ ಸ್ಥಾಪಿಸಲಾಯಿತು. ಕಂಪನಿಯ ಮೊದಲ ಉತ್ಪನ್ನವಾದ ಓಲಾ ಎಸ್ 1 ಅನ್ನು 2020ರಲ್ಲಿ ಬಿಡುಗಡೆ ಮಾಡಲಾಯಿತು.
ಇದನ್ನೂ ಓದಿ: ಅಡೆತಡೆ ಇಲ್ಲದೆ ಸ್ವಸಹಾಯ ಗುಂಪುಗಳಿಗೆ ಸಾಲ ನೀಡಿ: ಬ್ಯಾಂಕುಗಳಿಗೆ ಆರ್ಬಿಐ ಸೂಚನೆ