ನವದೆಹಲಿ: ಕಳೆದ ಮೂರು ತಿಂಗಳಲ್ಲಿ 100 ರೂಪಾಯಿಗೂ ಅಧಿಕ ಇಳಿಸಿದ್ದ ವಾಣಿಜ್ಯ ಸಿಲಿಂಡರ್ ದರವನ್ನು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ದಿಢೀರ್ ಆಗಿ 39 ರೂಪಾಯಿಗೆ ಏರಿಕೆ ಮಾಡಿವೆ. ಇಂದು (ಭಾನುವಾರ) ದರ ಏರಿಕೆಯ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.
ತಿಂಗಳ ಆರಂಭದಲ್ಲಿ ದರ ಏರಿಕೆ ಮಾಡುವ ತೈಲ ಮಾರಾಟ ಕಂಪನಿಗಳು 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ದರವನ್ನು ಏಕಾಏಕಿ 39 ರೂಪಾಯಿಗೆ ಹೆಚ್ಚಿಸಿವೆ. ಇದರಿಂದ ವ್ಯಾಪಾರಸ್ಥರಿಗೆ ಹೆಚ್ಚಿನ ಹೊರೆ ಬೀಳುವ ಸಾಧ್ಯತೆ ಇದೆ. ದರ ಹೆಚ್ಚಳದ ಬಳಿಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆಜಿ ತೂಕದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಚಿಲ್ಲರೆ ಮಾರಾಟ ಬೆಲೆ 1,691.50 ರೂಪಾಯಿ ಇದೆ.
ಇದಕ್ಕೂ ಮೊದಲು, ವ್ಯವಹಾರಗಳು ಮತ್ತು ವಾಣಿಜ್ಯ ಉದ್ಯಮಗಳ ಮೇಲಿನ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಇಳಿಕೆಯನ್ನು ಘೋಷಿಸಿದ್ದವು. ಈ ವರ್ಷದ ಮೇ 1 ರಂದು ಪ್ರತಿ ಸಿಲಿಂಡರ್‌ಗೆ 19 ರೂಪಾಯಿ ಇಳಿಕೆ ಮಾಡಿದ್ದವು.
ಬಳಿಕ ಜೂನ್ನಲ್ಲಿ 69.50 ರೂಪಾಯಿ ದರ ಇಳಿಕೆ ಮಾಡಲಾಗಿತ್ತು. ಇದರಿಂದ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ದರವು 1676 ರೂಪಾಯಿ ಇತ್ತು. ಇದಾದ ಬಳಿಕ ಮತ್ತೆ ಜುಲೈ 1 ರಂದು 30 ರೂಪಾಯಿ ಕಡಿತಗೊಳಿಸಲಾಗಿತ್ತು. ಏಪ್ರಿಲ್ನಿಂದ ಜೂನ್ವರೆಗೆ ಸಿಲಿಂಡರ್ ಬೆಲೆಯಲ್ಲಿ 148 ರೂಪಾಯಿ ಕಡಿತ ಮಾಡಿದ್ದ ತೈಲ ಮಾರಾಟ ಕಂಪನಿಗಳು, ಆಗಸ್ಟ್ನಲ್ಲಿ 6.50 ರೂಪಾಯಿ ಹೆಚ್ಚಳ ಮಾಡಿದ್ದರು. ಈ ತಿಂಗಳು 39 ರೂಪಾಯಿಗೆ ಹೆಚ್ಚಿಸಿವೆ.
ಯಾವ ರಾಜ್ಯದಲ್ಲಿ ಎಷ್ಟು ಬೆಲೆ?: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ದರ ಏರಿಕೆ ಹಾಗೂ ವಿದೇಶಿ ವಿನಿಮಿಯ ದರಕ್ಕೆ ಅನುಗುಣವಾಗಿ ತೈಲ ಮಾರಾಟ ಕಂಪನಿಗಳು ದರ ಪರಿಷ್ಕರಣೆ ಮಾಡುತ್ತವೆ. ಸದ್ಯದ ಏರಿಕೆಯಿಂದ ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆ 1691.50 ರೂಪಾಯಿ, ಮುಂಬೈನಲ್ಲಿ 1644, ಕೋಲ್ಕತ್ತಾದಲ್ಲಿ 1802.50, ಚೆನ್ನೈನಲ್ಲಿ 1855 ರೂಪಾಯಿ ಇದೆ. ಗೃಹ ಬಳಕೆಯ 15.2 ಕೆಜಿ ತೂಕದ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಹೀಗಾಗಿ ಅದರ ಬೆಲೆ ಸದ್ಯ 803 ರೂಪಾಯಿ ಇದೆ.