ನವದೆಹಲಿ: ಡಿಜಿಟಲ್ ರೂಪಾಂತರ ಮತ್ತು ತಾಂತ್ರಿಕ ಆವಿಷ್ಕಾರಗಳಿಂದಾಗಿ ರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ ನೋಂದಾಯಿತ ಒಟ್ಟು ಗ್ರಾಹಕರ ಖಾತೆಗಳ ಸಂಖ್ಯೆ 20 ಕೋಟಿ ದಾಟಿದೆ ಎಂದು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್ಎಸ್ಇ) ಬುಧವಾರ ತಿಳಿಸಿದೆ. ಈ ಸಂಖ್ಯೆಯು ಇಲ್ಲಿಯವರೆಗೆ ನೋಂದಣಿಯಾದ ಎಲ್ಲಾ ಕ್ಲೈಂಟ್ ನೋಂದಣಿಗಳನ್ನು ಒಳಗೊಂಡಿದೆ.
"ವಿನಿಮಯ ಕೇಂದ್ರದಲ್ಲಿ (ಖಾತೆಗಳು) ಒಟ್ಟು ಕ್ಲೈಂಟ್ ಕೋಡ್ಗಳ ಸಂಖ್ಯೆ 20 ಕೋಟಿಯನ್ನು ಮೀರಿದೆ. ಇದು ಎಂಟು ತಿಂಗಳಲ್ಲಿ ಅತ್ಯುತ್ತಮ ಬೆಳವಣಿಗೆಯಾಗಿದೆ. ಎಂಟು ತಿಂಗಳ ಹಿಂದೆ ಈ ಸಂಖ್ಯೆ 16.9 ಕೋಟಿಯಷ್ಟಿತ್ತು" ಎಂದು ಎನ್ಎಸ್ಇ ಹೇಳಿಕೆಯಲ್ಲಿ ತಿಳಿಸಿದೆ.
ಈ ಬೆಳವಣಿಗೆ ಏನನ್ನು ಸೂಚಿಸುತ್ತದೆ?: ದೇಶದ ಬೆಳವಣಿಗೆಯ ಹಾದಿಯಲ್ಲಿ ಇದು ಹೂಡಿಕೆದಾರರ ಬಲವಾದ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಮೊಬೈಲ್ ಟ್ರೇಡಿಂಗ್ ಅಪ್ಲಿಕೇಶನ್ಗಳ ವ್ಯಾಪಕ ಅಳವಡಿಕೆ ಮತ್ತು ಹೂಡಿಕೆದಾರರಲ್ಲಿ ಹೆಚ್ಚುತ್ತಿರುವ ಜಾಗೃತಿ, ಸರ್ಕಾರದ ಡಿಜಿಟಲ್ ಉಪಕ್ರಮಗಳ ಬೆಂಬಲವು ಷೇರು ಮಾರುಕಟ್ಟೆಯಲ್ಲಿ ವಹಿವಾಟು ನಡೆಸುವುದನ್ನು ಸುಲಭವಾಗಿಸಿದೆ. ವಿಶೇಷವಾಗಿ ಶ್ರೇಣಿ 2, 3 ಮತ್ತು 4 ನಗರಗಳ ಹೂಡಿಕೆದಾರರಿಗೆ ಹೆಚ್ಚು ಪ್ರಯೋಜನವಾಗಿದೆ ಎಂದು ಎನ್ಎಸ್ಇ ಮುಖ್ಯ ವ್ಯವಹಾರ ಅಭಿವೃದ್ಧಿ ಅಧಿಕಾರಿ ಶ್ರೀರಾಮ್ ಕೃಷ್ಣನ್ ಹೇಳಿದ್ದಾರೆ.
ಈ ವಿಸ್ತರಣೆಯನ್ನು ಸುವ್ಯವಸ್ಥಿತ ಕೆವೈಸಿ ಪ್ರಕ್ರಿಯೆಗಳು, ಹಣಕಾಸು ಸಾಕ್ಷರತಾ ಕಾರ್ಯಕ್ರಮಗಳು ಮತ್ತು ಸುಸ್ಥಿರ ಸಕಾರಾತ್ಮಕ ಮಾರುಕಟ್ಟೆ ಭಾವನೆಗಳು ಬೆಂಬಲಿಸುತ್ತವೆ. ಇದು ಈಕ್ವಿಟಿಗಳು, ಇಟಿಎಫ್ಗಳು, ಆರ್ಇಐಟಿಗಳು, ಇನ್ವಿಐಟಿಗಳು ಮತ್ತು ವಿವಿಧ ಬಾಂಡ್ಗಳು ಸೇರಿದಂತೆ ವಿವಿಧ ಸಾಧನಗಳಲ್ಲಿ ದೃಢವಾದ ಹೂಡಿಕೆಯಿಂದ ಸಾಬೀತಾಗಿದೆ ಎಂದು ಅವರು ಹೇಳಿದರು.
ಕ್ಲೈಂಟ್ ನೋಂದಣಿಯಲ್ಲಿ ಮಹಾರಾಷ್ಟ್ರ ಫಸ್ಟ್: ಕ್ಲೈಂಟ್ ನೋಂದಣಿಯಲ್ಲಿ ಮಹಾರಾಷ್ಟ್ರ (3.6 ಕೋಟಿ) ಅಗ್ರಸ್ಥಾನದಲ್ಲಿದ್ದರೆ, ಉತ್ತರ ಪ್ರದೇಶ (2.2 ಕೋಟಿ), ಗುಜರಾತ್ (1.8 ಕೋಟಿ), ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳ (ತಲಾ 1.2 ಕೋಟಿ) ನಂತರದ ಸ್ಥಾನಗಳಲ್ಲಿವೆ. ಒಟ್ಟಾರೆಯಾಗಿ, ಈ ರಾಜ್ಯಗಳು ಒಟ್ಟು ಗ್ರಾಹಕರ ಖಾತೆಗಳಲ್ಲಿ ಸುಮಾರು 50 ಪ್ರತಿಶತವನ್ನು ಹೊಂದಿದ್ದರೆ, ಅಗ್ರ ಹತ್ತು ರಾಜ್ಯಗಳು ಒಟ್ಟು ಸುಮಾರು ಮುಕ್ಕಾಲು ಭಾಗವನ್ನು ಹೊಂದಿವೆ. ಇದಲ್ಲದೆ ಅನನ್ಯ ನೋಂದಾಯಿತ ಹೂಡಿಕೆದಾರರ ಸಂಖ್ಯೆ 10.5 ಕೋಟಿಯಾಗಿದೆ. ಇದು ಆಗಸ್ಟ್ 8, 2024ರಂದು 10 ಕೋಟಿ ದಾಟಿತ್ತು.
ಏನಿದು NSE?: ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ ದೇಶದ ಪ್ರಮುಖ ಹಣಕಾಸು ವಿನಿಮಯ ಕೇಂದ್ರವಾಗಿದ್ದು, ಮುಂಬೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಇದನ್ನು 1992ರಲ್ಲಿ ಆರಂಭಿಸಲಾಯಿತು. ಮತ್ತು ಅಂದಿನಿಂದ ದೇಶಾದ್ಯಂತ ಹೂಡಿಕೆದಾರರಿಗೆ ವ್ಯಾಪಾರ ಸೌಲಭ್ಯಗಳನ್ನು ನೀಡುವ ಸುಧಾರಿತ, ಸ್ವಯಂಚಾಲಿತ, ಎಲೆಕ್ಟ್ರಾನಿಕ್ ವ್ಯವಸ್ಥೆಯಾಗಿ ವಿಕಸನಗೊಂಡಿದೆ.
ಇದನ್ನೂ ಓದಿ: ಹುಂಡೈನ ಮಹತ್ವಾಕಾಂಕ್ಷಿ Ioniq 9 ಎಲೆಕ್ಟ್ರಿಕ್ SUV ಫಸ್ಟ್ ಲುಕ್ ಔಟ್: 100 ಮಿಲಿಯನ್ ಯೂನಿಟ್ ಮೈಲಿಗಲ್ಲು