ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಬ್ಯಾಂಕಿಂಗ್ ಸೇವೆ ವಿಸ್ತರಿಸಲು ಸಜ್ಜಾಗುತ್ತಿದೆ. ಪ್ರಸ್ತುತ ಹಣಕಾಸು ವರ್ಷದ ಅಂತ್ಯದ ವೇಳೆಗೆ 500 ಎಸ್‌ಬಿಐ ಶಾಖೆಗಳನ್ನು ತೆರೆಯುವುದಾಗಿ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದರೊಂದಿಗೆ ಎಸ್‌ಬಿಐ ಬ್ಯಾಂಕ್ ಶಾಖೆಗಳ ಸಂಖ್ಯೆ 23 ಸಾವಿರಕ್ಕೆ ತಲುಪಲಿದೆ. ಮುಂಬೈನಲ್ಲಿ ಎಸ್‌ಬಿಐ ಕೇಂದ್ರ ಕಚೇರಿಯ 100ನೇ ವಾರ್ಷಿಕೋತ್ಸವ ಹಿನ್ನೆಲೆ ಆಯೋಜಿಸಲಾದ ಕಾರ್ಯಕ್ರಮದಲ್ಲಿ ನಿರ್ಮಲಾ ಸೀತಾರಾಮನ್ ಈ ವಿಷಯ ಘೋಷಣೆ ಮಾಡಿದರು. ಜತೆಗೆ 100 ರೂ.ಗಳ ಸ್ಮರಣಾರ್ಥ ನಾಣ್ಯವನ್ನು ಅನಾವರಣಗೊಳಿಸಲಾಯಿತು.
ಎಸ್‌ಬಿಐ ಕುರಿತ ಆಸ್ತಿಕರ ವಿಷಯಗಳು:
- ಬ್ಯಾಂಕ್ ಆಫ್ ಕೊಲ್ಕತ್ತಾ (1806), ಬ್ಯಾಂಕ್ ಆಫ್ ಬಾಂಬೆ (1840) ಮತ್ತು ಬ್ಯಾಂಕ್ ಆಫ್ ಮದ್ರಾಸ್ (1843) ವಿಲೀನ ಮಾಡಿ ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯಾ (IBI) ಅನ್ನು 27 ಜನವರಿ 1921 ಜನವರಿ 27 ರಂದು ಸ್ಥಾಪಿಸಲಾಯಿತು.
- 1955 ರಲ್ಲಿ ಸಂಸತ್ತಿನಲ್ಲಿ ಕಾಯಿದೆಯನ್ನು ತಂದು ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯಾವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಗಿ ಪರಿವರ್ತಿಸಲಾಯಿತು.
- ಪ್ರಸ್ತುತ ಎಸ್‌ಬಿಐ ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿದೆ. ಇದು ವಿಶ್ವದ 48ನೇ ಅತಿದೊಡ್ಡ ಬ್ಯಾಂಕ್ ಕೂಡ ಆಗಿದೆ.
- ಎಸ್‌ಬಿಐನ ಪ್ರಧಾನ ಕಚೇರಿ ಮುಂಬೈನಲ್ಲಿದೆ. 1924 ರಲ್ಲಿ ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯಾ ಪ್ರಧಾನ ಕಚೇರಿಯನ್ನು ಮುಂಬೈನಲ್ಲಿ ಸ್ಥಾಪಿಸಲಾಗಿತ್ತು. ನಂತರ ಇದನ್ನು ಎಸ್‌ಬಿಐ ಪ್ರಧಾನ ಕಚೇರಿಯಾಗಿ ಮುಂದುವರಿಸಲಾಯಿತು.
- 1921ರಲ್ಲಿ 250 ಶಾಖೆಗಳಿದ್ದವು. ಪ್ರಸ್ತುತ ಆ ಸಂಖ್ಯೆ 22,500ಕ್ಕೆ ತಲುಪಿದೆ.
- ಪ್ರಸ್ತುತ ಎಸ್‌ಬಿಐ 50 ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿದೆ.
- ದೇಶಾದ್ಯಂತ 6,580 ಎಸ್‌ಬಿಐ ಎಟಿಎಂಗಳು ಮತ್ತು 85 ಸಾವಿರ ಬ್ಯಾಂಕಿಂಗ್ ಕರೆಸ್ಪಾಂಡೆಂಟ್ಗಳು ಇದ್ದಾರೆ.
- ಶೇ.25 ರಷ್ಟು ಡೆಬಿಟ್ ಕಾರ್ಡ್, ಶೇ.22 ರಷ್ಟು ಮೊಬೈಲ್ ಬ್ಯಾಂಕಿಂಗ್ ವಹಿವಾಟುಗಳು, ಶೇ.25 ರಷ್ಟು ಯುಪಿಐ ವಹಿವಾಟುಗಳು ಮತ್ತು ಶೇ. 29 ರಷ್ಟು ಎಟಿಎಂ ವಹಿವಾಟುಗಳು ಎಸ್‌ಬಿಐ ಮೂಲಕ ನಡೆಯುತ್ತಿದೆ.
- ದೇಶದ ಒಟ್ಟು ಠೇವಣಿಗಳಲ್ಲಿ ಎಸ್‌ಬಿಐ ಪಾಲು ಶೇ.22.4ರಷ್ಟಿದೆ.
- ಎಸ್‌ಬಿಐ ದಿನಕ್ಕೆ 20 ಕೋಟಿ ಯುಪಿಐ ವಹಿವಾಟುಗಳನ್ನು ನಿರ್ವಹಿಸುತ್ತದೆ.
- ಇತ್ತೀಚೆಗೆ ವರದಿಯ ಪ್ರಕಾರ ಎಸ್‌ಬಿಐ 19 ಸಾವಿರ ಕೋಟಿ ರೂ ಲಾಭವನ್ನು ಗಳಿಸಿದೆ
- ಪ್ರಸ್ತುತ ದೇಶದಲ್ಲಿ 43 ಎಸ್‌ಬಿಐ ಶಾಖೆಗಳು ಶತಮಾನದ ಇತಿಹಾಸವನ್ನು ಹೊಂದಿವೆ.
ಇದನ್ನೂ ಓದಿ: ಡಿಸೆಂಬರ್ 21ಕ್ಕೆ ಜಿಎಸ್ಟಿ ಮಂಡಳಿ ಸಭೆ: ಜೀವ ವಿಮೆ ಮೇಲಿನ ಜಿಎಸ್ಟಿ ಕುರಿತು ಚರ್ಚೆ ಸಾಧ್ಯತೆ